ಸಾರ್ವಜನಿಕರ ಪ್ರಶ್ನೆಗೆ ಪರಿಹಾರ

Samskruti Prashne parihaara
Published on

ನನ್ನ 28 ವರ್ಷದ ಮಗಳು ಅಮೆರಿಕದಲ್ಲಿ ಕೆಲಸದಲ್ಲಿದ್ದಾಳೆ. ನಾವು ಮದುವೆ ಮಾಡಲು ಬಯಸಿದ್ದರೂ ಆಕೆ ಬೇಡ ಎನ್ನುತ್ತಿದ್ದಾಳೆ. ಅವಳ ಮದುವೆ ಯಾವಾಗ ಆಗಬಹುದು? ಬೇರೆ ಯಾವುದಾದರೂ ಕಾರಣದಿಂದ ಮುಂದೂಡುತ್ತಿದ್ದಾಳಾ? ಪರಿಹಾರ ಏನು?

| ನಾರಾಯಣ ಯಲಬುರ್ಗ ಮುಂಬಯಿ

ಮದುವೆಯ ವಿಳಂಬಕ್ಕೆ ಸಾಕಷ್ಟು ಕಾರಣಗಳಿರುತ್ತವೆ. ಆಕೆಯ ವಿಚಾರದಲ್ಲಿ ಕಾಲಕಾಲಕ್ಕೆ ಆಗಬೇಕಾದುದನ್ನು ಆಗುವಂತೆ ಮಾಡುವ ಶನೈಶ್ಚರ ಹಾಗೂ ಬಾಳಸಂಗಾತಿಯ ಬಗೆಗೆ ಸೌಹಾರ್ದವಾಗಿ ಇರಬೇಕಾದ ಚಂದ್ರನು ತಿಕ್ಕಾಟದಲ್ಲಿದ್ದು, ಸಾಡೇಸಾತಿ ಶನಿಯ ಕಾಟ ಇದೆ. ಅಲ್ಲದೆ ಶನಿಯ ಮೇಲೆ ಕುಜನ ಹಿಡಿತವಿರುವುದು ಸ್ವಾಗತಾರ್ಹವಲ್ಲ. ಇವರಿಬ್ಬರೂ ವಿವಾಹದ ವಿಳಂಬಕ್ಕೆ ಸಾಕಷ್ಟು ಕಾರಣರಾಗಿದ್ದಾರೆ. 2020ರ ಫೆಬ್ರವರಿ ನಂತರ ನವೆಂಬರ್-ಡಿಸೆಂಬರ್ ಒಳಗೆ ಮದುವೆ ಆಗಬೇಕು. ಮದುವೆಯ ವಿಚಾರದಲ್ಲಿ ಶನೈಶ್ಚರನ ನೆರವಿಗೆ ಸಂತಾನ-ಭಾಗ್ಯ-ಸುಖಸ್ಥಾನಗಳೂ ಬರುವುದರಿಂದ ಒಳ್ಳೆಯ ದಿನಗಳು ಬರಲಿವೆ. ನಿಮ್ಮ ಮಗಳು ಕುಜಪೀಡಾ ನಿವಾರಣಾ ಸ್ತೋತ್ರ, ಚಂದ್ರಪೀಡಾ ನಿವಾರಣಾ ಸ್ತೋತ್ರ, ಹನುಮಾನ್ ಚಾಲೀಸಾ ಪಠಿಸುವುದು ಸೂಕ್ತ.

ನನಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ನನ್ನ ಹಾಗೂ ಪತಿಯ ಕುಂಡಲಿಗಳನ್ನು ಕಳಿಸಿದ್ದೇನೆ. ನಮ್ಮ ಮನೆಯವರು ಒಬ್ಬ ಹೆಣ್ಣುಮಗಳ ಒಡನಾಟದಲ್ಲಿದ್ದಾರೆ. ನನಗೆ ಏನು ಮಾಡಲೂ ತೋಚುತ್ತಿಲ್ಲ. ಮನೆಯಲ್ಲಿ ನಿತ್ಯ ಜಗಳವೇ ಆಗಿಬಿಟ್ಟಿದೆ. ಈ ಸಂಕಟಕ್ಕೆ ಪರಿಹಾರ ಏನು?

| ಅಂಬಿಕಾ ತಗ್ಗಿನಮನೆ ಪೋಂಡಾ, ಗೋವಾ

ಈ ವಯಸ್ಸಿನಲ್ಲಿ ಅನ್ಯ ಸಂಬಂಧ ಹೊಂದಿದ್ದಾರೆ ಎನ್ನುತ್ತಿದ್ದೀರಿ. ಯಾವ ವಯಸ್ಸಿನಲ್ಲಿಯೂ ಅನ್ಯಸಂಬಂಧ ಎಂಬುದು ತಪ್ಪೇ. ಈಗ ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಿ. ಜಗಳ, ಕೂಗಾಟಗಳಿಂದ ತೊಂದರೆಯೇ ಜಾಸ್ತಿ. ಗಂಡ-ಹೆಂಡತಿ ಪರಸ್ಪರರಿಗೆ ನೀಡಬೇಕಾದ ಗೌರವ, ತಾಳ್ಮೆ, ವ್ಯವಧಾನಗಳು ಅಮುಖ್ಯವಾದಾಗ ಸಂಬಂಧಕ್ಕೆ ಬೆಂಕಿ ಬೀಳುತ್ತದೆ. ಮಕ್ಕಳ ಕಾರಣದಿಂದಾಗಿ ಸದ್ಯ ಪತಿಯ ಬಳಿ ಮೌನವಾಗಿರಿ. 2020ರ ಹೊತ್ತಿಗೆ ಕೇತುಭುಕ್ತಿ ಮುಗಿದು ಶುಕ್ರಭುಕ್ತಿ ಬರಲಿದ್ದು, ನಿಮ್ಮ ಪತಿಯನ್ನು ಆಕ್ರಮಿಸಿರುವ ಪರಸ್ತ್ರೀ ಮೋಹ ದೂರವಾಗುತ್ತದೆ. ಕಳ್ಳಿ ಗಿಡದ ಬಳಿ ಕುಬೇರ ಮಂತ್ರ ಪಠಿಸುತ್ತ, ತಲಾ ಒಂದು ಗ್ರಾಂ ಸಮುದ್ರದ ಉಪು್ಪ ಹಾಗೂ ಇದ್ದಿಲು ಪುಡಿಯ ಹತ್ತು ಪೊಟ್ಟಣಗಳನ್ನು ಚೆಲ್ಲಿ. ಒಳಿತಾಗಲಿದೆ.

ನನ್ನ ಒಬ್ಬನೇ ಮಗನ ಕುಂಡಲಿಯನ್ನು ಕಳಿಸಿರುವೆ. ನೋಡನೋಡುತ್ತಿದ್ದಂತೆ ಬೆಳೆದುಬಿಟ್ಟಿದ್ದಾನೆ. 21 ವರ್ಷದ ಅವನಿಗೆ ಓದಿನಲ್ಲಿ ಆಸ್ಥೆ ಇಲ್ಲ. ಕೆಟ್ಟ ಸಹವಾಸ ಮಾಡಬಾರದು, ತೊಂದರೆ ಆಗಬಾರದೆಂದು ಮೊಬೈಲ್, ಕಂಪ್ಯೂಟರ್, ಬೈಕ್ ಕೊಡಿಸಲಿಲ್ಲ. ಸಿನಿಮಾಕ್ಕೆ ಕಳಿಸಲಿಲ್ಲ. ಈಗ ನನ್ನನ್ನು ಕಂಡರೆ ಉರಿದುಬೀಳುತ್ತಾನೆ. ಅಕ್ಷರಶಃ ವೈರಿಯಾಗಿದ್ದಾನೆ. ಉಳಿದ ತಂದೆತಾಯಿಗಳು ಮಕ್ಕಳಿಗೆ ತೋರುವ ಅಕ್ಕರೆಯ ಬಗ್ಗೆ ಹೇಳುತ್ತಾನೆ. ಇದಕ್ಕೇನು ಪರಿಹಾರ?

| ಮಹಾವೀರ ದೇಸಾಯಿ ಹೈದರಾಬಾದ್

ಶಿಕ್ಷಕರು ಒಂದು ಕ್ಲಾಸಿನ ಎಲ್ಲ ಮಕ್ಕಳಿಗೂ ಪ್ರಬುದ್ಧತೆ, ಬುದ್ಧಿ, ಜ್ಞಾನ, ಅನುಭವ, ಕರುಣೆ, ಸಹನೆಗಳ ಬಗ್ಗೆ ಪಾಠ ಮಾಡುತ್ತಾರೆ. ಎಷ್ಟೋ ಮಕ್ಕಳು ಇದನ್ನು ಕೇಳಿ ತಿಳಿದು ನಾಗರಿಕರಾಗುತ್ತಾರೆ. ಇವರಲ್ಲಿ ಅನಾಗರಿಕತೆ ಬೆಳೆಸಿಕೊಂಡು ಸಮಾಜಕ್ಕೆ ಹೊರೆಯಾಗುವವರೂ ಇದ್ದೇ ಇರುತ್ತಾರೆ. ಇದು ಕಲಿಸುವ ಗುರುವಿನ ತಪ್ಪೋ ಅಥವಾ ಕಲಿಯದ ಮಕ್ಕಳ ತಪ್ಪೋ ಎಂದು ನಿರ್ಣಯಿಸುವುದು ಕಷ್ಟ. ರಾಹು-ಕುಜರು ಈಗ ನಿಮ್ಮ ಮಗನಿಗೆ ತಿರಸ್ಕಾರವನ್ನೇ ಉಡುಗೊರೆಯಾಗಿ ಕೊಟ್ಟರು. ಅವರಿಂದಾಗಿಯೇ ಅವನಿಗೆ ನಿಮ್ಮ ಸಹಜ ಕಾಳಜಿಗಳು ಅರ್ಥವಾಗಲಿಲ್ಲ. ಪ್ರತಿದಿನ ಒಂದು ಚಿಕ್ಕ ಶುಭ್ರ ಬಿಳಿಯ ಬಟ್ಟೆಯಲ್ಲಿ ಅಕ್ಷತೆ ಇರಿಸಿ, ಅದನ್ನು ಒಂದು ಕಾಗದದ ಮೇಲಿಟ್ಟುಕೊಂಡು ವಿಷ್ಣು ಅಷ್ಟೋತ್ತರವನ್ನು ಪಠಿಸಿ. ಹಕ್ಕಿಗಳಿಗೆ ಅಕ್ಷತೆಯನ್ನು ನೀಡಿ.

ಮಗಳ ಜನ್ಮಕುಂಡಲಿ ಕಳಿಸಿರುವೆ. ಉತ್ತಮ ಕೆಲಸದಲ್ಲಿರುವ ಅವಳ ಮದುವೆ ಒಳ್ಳೆಯ ಹುಡುಗನ ಜತೆ ಆಗಿ ವಿಚ್ಛೇದನವೂ ಆಯ್ತು. ಸ್ವರ ಏರಿಸಿ ಮಾತಾಡಲಾಗದ ಹುಡುಗ, ತನಗೆ ಬಾಳ್ವೆ ನಡೆಸುವುದು ಕಷ್ಟ ಎನ್ನುತ್ತಾಳೆ. ಈಗ ಇವಳಿಗಿಂತ 15 ವರ್ಷ ದೊಡ್ಡವನಾದ ಯುರೋಪಿಯನ್ ಒಬ್ಬನ ಜತೆ ಮದುವೆಯಾಗಲು ಮುಂದಾಗಿದ್ದಾಳೆ. ಈ ಮದುವೆ ಸುರಕ್ಷಿತವೇ? ಸುಖ ಇದೆಯೆ?

| ಸಮನ್ವಿತಾ ಪೆರಾಜೆ ಅಬುಧಾಬಿ

ಹಲವು ಸಲ ಬದುಕು ವಿಚಿತ್ರವಾಗಿರುತ್ತದೆ. ಇವುಗಳ ನಡುವೆ ಕಷ್ಟವೋ ಸುಖವೋ ಸುರಕ್ಷತೆಯೋ ಅಸುರಕ್ಷತೆಯೋ ಬದುಕು ಸಾಗಲೇಬೇಕು. ಈ ಕ್ಷಣಕ್ಕೆ ಯುರೋಪಿಯನ್ ಹುಡುಗನ ಜತೆಗೆ ಹೆಜ್ಜೆ ಇಡಲು ಋಣಾನುಬಂಧ ಅವಕಾಶ ಒದಗಿಸುತ್ತಿದೆ. ಆಹಾರ, ನಿದ್ರೆ, ಭಯ, ಮೈಥುನಗಳಲ್ಲಿ ಮನುಷ್ಯನು ಇತರ ಪ್ರಾಣಿಗಳಿಗಿಂತ ಭಿನ್ನನಲ್ಲ. ರಾಹು, ಸೂರ್ಯ, ಶುಕ್ರರು ಕಳತ್ರ ಸ್ಥಾನದಲ್ಲಿ (ಬಾಳಸಂಗಾತಿ ಅಥವಾ ದೈಹಿಕ ಕಾಮನೆಗಳ) ಕಗ್ಗಂಟನ್ನು ನಿರ್ವಿುಸಿದ್ದಾರೆ. ಚಂದ್ರ ನೀಚನಾಗಿ ಶನಿಕಾಟದ ದಿನಗಳಲ್ಲಿದ್ದಾನೆ. ನೀಚಭಂಗವಾಗಿದೆ. ಇದೊಂದು ಯೋಗ. ಬುಧನ ಕಾರಣದಿಂದಾಗಿ ಒಂದು ರೀತಿಯ ಸಾರ್ಥಕತೆಯಲ್ಲಿ (ಈ ಕಾಲದಲ್ಲಿ ಸಾರ್ಥಕತೆಯ ನಿಖರ ವ್ಯಾಖ್ಯಾನ ಮಾಡುವುದು ಕಷ್ಟ) ಮಗಳು ಹೆಜ್ಜೆ ಇಡುತ್ತಿರುತ್ತಾಳೆ. ಉತ್ತಮ ಕೆಲಸದಲ್ಲಿದ್ದಾಳೆ ಎಂದುಕೊಳ್ಳುತ್ತೇನೆ. ಮೈಮರೆಸುವಾಟದ ಈ ಜೀವನದಲ್ಲಿ ಅಲೌಕಿಕ ಶಕ್ತಿಯಿಂದ ಸುರಕ್ಷೆಯ ಬಲವನ್ನು ಪಡೆಯಲು ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಓದಲು ಪ್ರೇರೇಪಿಸಿ.

ಗಂಡ ತೀರಿಕೊಂಡಿದ್ದಾರೆ. ನನಗೆ ಹಾಗೂ ಮಗನಿಗೆ ನಾಲ್ಕು ಎಕರೆ ಜಮೀನು ಬರಬೇಕಾಗಿದೆ. ನ್ಯಾಯವಾಗಿ ಬರಬೇಕಾದುದನ್ನು ಕೇಳುತ್ತಿದ್ದೇನೆ. ನನ್ನ ಮಗನ ಬದುಕನ್ನು ಕಟ್ಟಿ ನಿಲ್ಲಿಸಬೇಕಾಗಿದೆ. ಜಮೀನು ಸಿಗಬಹುದೆ? ಪರಿಹಾರವೇನು?

| ಗಂಗಮ್ಮ ಸಿ.ಎಂ. ವಿರಾಜಪೇಟೆ

ತಾಯಿಗೆ ಮಗ ಮುಖ್ಯ ಎಂಬ ನಿಮ್ಮ ಚಡಪಡಿಕೆಗೆ ದೇವರು ಸುರಕ್ಷಿತವಾದ ದಾರಿಯನ್ನು ತೋರಿಸಲಿ. ನಿಮ್ಮ ರವಿದಶೆ ಹಾಗೂ ಮಗನ ಕೇತುದಶೆಯಿಂದಾಗಿ ಸದ್ಯ ಕೆಲವು ಬಗೆಯ ಹೋರಾಟಗಳು ಅನಿವಾರ್ಯ. 2023ರ ನಂತರ ನಿಮ್ಮ ಹಂಬಲ ಈಡೇರುತ್ತದೆ. ಮಗನಿಂದ ನಿಮಗೆ ಒಳಿತಾಗಲಿದೆ. ಮಗನ ಜಾತಕದ ಗಜಕೇಸರಿ, ಶಶಿಮಂಗಳ ಇತ್ಯಾದ ಯೋಗಬಲಗಳು ಒಳಿತನ್ನು ಒದಗಿಸಿಯೇ ತೀರುತ್ತವೆ. ದುರ್ಗಾ, ಲಕ್ಷ್ಮಿ, ವಿಷ್ಣುವಿನ ಸ್ತೋತ್ರಗಳನ್ನು ಪಠಿಸಿ.

ನಾನು ವಿದೇಶದಲ್ಲಿದ್ದು, ಜಾತಕ ಕುಂಡಲಿ ಕಳಿಸಿದ್ದೇನೆ. ಇಲ್ಲಿನ ಒಂದು ಸಿಗ್ನಲ್ ಬಳಿಯಲ್ಲಿ ಹಲವಾರು ರೀತಿಯ ಅರಚಾಟಗಳು ಕೇಳಿಸುತ್ತವೆ. ಹಗಲಿನ ವೇಳೆಗೆ ಈ ಅನುಭವವಾಗದು. ಈ ಸ್ಥಳದಲ್ಲಿ ತುಂಬ ಅಪಘಾತ, ಸಾವು ಆಗುತ್ತಿರುತ್ತದೆ. ಇದರಿಂದ ನನಗೇನಾದರೂ ಅಪಾಯವಿದೆಯೆ?

| ರಮೇಶ ನಾಗಪತಿ ಹಾಸನ

‘ಓಂ ಭೂರ್ಭವಃ ಸ್ವ’ ಎಂಬ ಗಾಯತ್ರೀಮಂತ್ರದ ಮೊದಲ ಮೂರು ಪದಸಮೂಹಗಳು ಭೂಮಿ, ಆಕಾಶ, ಸ್ವರ್ಗಲೋಕಾದಿಗಳನ್ನು ವ್ಯಾಖ್ಯಾನಿಸುತ್ತವೆ. ನಮ್ಮ ಬೌದ್ಧಿಕ ಬೆಳವಣಿಗೆಯ ಪ್ರಚೋದನೆಗಾಗಿ ಕೈಗೊಳ್ಳುವ ಪ್ರಾರ್ಥನೆಯ ಮುಂದಿನ ಭಾಗಕ್ಕೆ ಕೊಂಡಿಯನ್ನು ಕೂಡಿಸುತ್ತವೆ. ಈ ಮೂರು ಪದಸಮೂಹಗಳು ಆಳದಲ್ಲಿ ಇನ್ನೂ ವಿಸõತವಾಗಿ ಒಡೆದುಕೊಳ್ಳುತ್ತವೆ. ಈಗ ಆ ವಿಚಾರ ಬೇಡ. ಇಂಥ ವಿವಿಧ ಲೋಕಗಳಲ್ಲಿ ಏಕಕೋಶ ಜೀವಿಯಿಂದ ಹಿಡಿದು ಅದೆಷ್ಟೋ ಬಗೆಯ ಜೀವಿಗಳು, ಜೀವಿಗಳಿಂದ ಹೊರಕ್ಕೆ ದಬ್ಬಲ್ಪಟ್ಟ ಆತ್ಮಗಳು ಇತ್ಯಾದಿಗಳಿರುವುದು ಒಂದರ್ಥದಲ್ಲಿ ವಾಸ್ತವ. ಆದರೆ ವಿಜ್ಞಾನದಿಂದ ವಿವರಿಸಲು ಅಸಾಧ್ಯವಾದಾಗ ಮೂಢನಂಬಿಕೆ, ಭ್ರಮೆ, ಬಡಬಡಿಕೆ ಇತ್ಯಾದಿ ಹೆಸರು ಪಡೆಯುತ್ತವೆ. ನಿಮ್ಮ ಜಾತಕಕುಂಡಲಿಯಲ್ಲಿನ ರವಿ-ಬುಧ ಯೋಗವು ಬಲಾಢ್ಯನಾದ ಹುಣ್ಣಿಮೆಯ ಚಂದ್ರನ ನೆರವನ್ನೂ ಪಡೆದು, ಅನ್ಯರಿಗೆ ಕೇಳಲಾಗದ್ದನ್ನು ನಿಮಗೆ ಕೇಳಿಸುತ್ತದೆ. ಇದು ನಿಮಗೆ ಪೀಡೆಯೇನೂ ಆಗುವುದಿಲ್ಲ. ಪ್ರತಿನಿತ್ಯ ವಿಷ್ಣುಸಹಸ್ರನಾಮವನ್ನು ಓದಿ. (ಅರ್ಧ ಗಂಟೆ ಸಾಕು.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net