

‘ಆದದ್ದೆಲ್ಲ ಒಳಿತೇ ಆಯಿತು, ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು!’ ಎನ್ನುತ್ತ ನವಕೋಟಿ ನಾರಾಯಣನೆಂದು ಹೆಸರಾಗಿದ್ದ, ಶ್ರೀಮಂತ ವರ್ತಕ ಶ್ರೀನಿವಾಸ ನಾಯಕ ಪುರಂದರ ದಾಸರಾದ ಕಥೆ ಎಲ್ಲರಿಗೂ ಪರಿಚಿತವೇ. ಕಾಸಿಗೆ ಕಾಸು ಕೂಡಿಸುತ್ತಿದ್ದ ಜಿಪುಣಾಗ್ರೇಸರ ಸಾಧಿ್ವಾದ ಪತ್ನಿಯ ಕಾರಣದಿಂದಾಗಿ ವೈರಾಗ್ಯ ಹೊಂದಿ, ಸಕಲ ಭಾಗ್ಯವನ್ನು ತೊರೆದು, ಕೈಯಲ್ಲಿ ತಂಬೂರಿ ಹಿಡಿದು, ತಾಳವ ಕುಟ್ಟುತ್ತ ಹರಿದಾಸನಾಗಿದ್ದು ಕನ್ನಡಕ್ಕೆ ಕನ್ನಡಿಗರಿಗೆ ನಿಜವಾಗಿಯೂ ಒಳಿತೇ ಆಯಿತು.
‘ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂಬ ದಾಸರ ಉದ್ಗಾರದಲ್ಲಿ, ಆಗಿದ್ದರ ಕುರಿತು ವಿಷಾದಕ್ಕಿಂತಲೂ, ಪತ್ನಿಯೇ ಗುರುವಾಗಿ ತಮ್ಮನ್ನು ಉದ್ಧಾರದ ಹಾದಿಯಲ್ಲಿ ನಡೆಸಿರುವುದಕ್ಕೆ ತುಂಬು ಹೃದಯದ ಮೆಚ್ಚುಗೆಯೇ ವ್ಯಕ್ತವಾಗಿದೆ. ಆದರೆ, ಈ ಪರಿವರ್ತನೆ ಒಂದು ದಿನದ, ಒಂದು ಘಟನೆಯಿಂದಾದ ಪವಾಡವೆನ್ನಿಸಿದರೂ, ಪುರಂದರರ ಪ್ರತಿಭೆ, ಅಗಾಧ ಪಾಂಡಿತ್ಯ ಇವೆಲ್ಲವೂ ಬಹುದಿನಗಳ ನಿರಂತರ ಕೆತ್ತನೆಯಿಲ್ಲದೆ ಒಪ್ಪೊತ್ತಿನಲ್ಲಿ ನಿರ್ವಣವಾಗಿರುವ ಪ್ರತಿಮೆಯಾಗಿರುವುದು ಸಾಧ್ಯವಿಲ್ಲ. ಪುರಂದರ ದಾಸರು, ನಾರದಾಂಶ ಸಂಭೂತರೆನ್ನುವ ಎನ್ನುವ ಪ್ರತೀತಿಯ ಹೊರತಾಗಿಯೂ ಅವರು ಸಂಗೀತ, ನಾಟ್ಯಗಳ ಆಳವಾದ ಪಾಂಡಿತ್ಯವನ್ನು ಹೊಂದಿದ್ದರು. ಪುರಂದರ ದಾಸರು ಬದುಕಿನ ಹಲವು ಮಗ್ಗುಲುಗಳನ್ನು ಹತ್ತಿರದಿಂದ ಕಂಡವರು. ವಿಜಯನಗರ ಸಾಮ್ರಾಜ್ಯದ ವೈಭವನ್ನು ಕಂಡಂತೆಯೇ ಅದರ ಅವಸಾನದ ಕೊನೆಯ ದಿನಗಳಿಗೂ ಸಾಕ್ಷಿಯಾದವರು. ಹಾಗಾಗಿ, ಆನೆ, ಕುದುರೆ, ಸೇನೆ, ಭಂಡಾರಗಳಿಂದ ಕೂಡಿದ ರಾಜಭೋಗವೂ ಅವರಿಗೆ ಲೊಳಲೊಟ್ಟೆಯೆನ್ನಿಸುತ್ತದೆ. ‘ಯಾರಿಗೆ ಯಾರೂ ಅಲ್ಲ ಎರವಿನ ಸಂಸಾರವು ನೀರ ಮೇಲಿನ ಗುಳ್ಳೆ, ನಿಜವಲ್ಲ’ ಎಂಬ ಕಟುಸತ್ಯವನ್ನು ಅವರ ಪದಗಳು ಅನಾವರಣಗೊಳಿಸುತ್ತವೆ.
ಹಾಗೆಂದು ಅವರ ಕೀರ್ತನೆಗಳಲ್ಲಿ ನಿರಾಶಾವಾದದ ನೆರಳಿಲ್ಲ. ‘ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ’ ಎಂಬ ಪದವಂತೂ ಮನುಜ ಬದುಕಿನ ಸಾರ್ಥಕ್ಯಕ್ಕೆ ಕನ್ನಡಿ ಹಿಡಿಯುವಂತಿದೆ. ‘ಕಣ್ಣು ಕೈಕಾಲು ನಾಲಿಗೆ ಇರಲಾಗಿ ಮಣ್ಣು ಮುಚ್ಚಿ ಮರುಳಾಗುವರೆ?’ ಈ ಸಾಲಿನಲ್ಲಿರುವ ವಿವೇಕವನ್ನು ಗಮನಿಸಿ. ಅರಿವಿನ ದೀಪಗಳಂತಿರುವ ಎರಡು ಕಣ್ಣುಗಳು, ವಿವೇಚಿಸಿ ಮಾತನಾಡಬಲ್ಲ ಶಕ್ತಿ ಇರುವ ನಾಲಿಗೆ. ಬಯಸಿದ್ದನ್ನು ದಕ್ಕಿಸಿಕೊಳ್ಳಲು ನೆರವಾಗುವ ಕೈಕಾಲುಗಳನ್ನು ಹೊಂದಿರುವ ಈ ಮನುಷ್ಯ ದೇಹವೇ ನಮಗೆ ದೊರಕಿರುವ ಅತಿ ಅದ್ಭುತವಾದ ಕೊಡುಗೆ! ಅದನ್ನು ಸರಿಯಾಗಿ ದುಡಿಸಿಕೊಳ್ಳದೆ ನಿರಾಸೆಯ ಕೂಪಕ್ಕೆ ಬಿದ್ದು ಸೋಲಿಗೆ, ಸಾವಿಗೆ ಶರಣಾಗುವವರ ಕಣ್ತೆರೆಸುವಂತಿದೆ ದಾಸರ ನುಡಿಗಳು.
ಸಾಧನೆಯ ಹಾದಿಯಲ್ಲಿ ಸಾಗುವವರರನ್ನು ಕುಹಕ ಮಾತುಗಳಿಂದ ಕೆಣಕುವವರು, ಅವರನ್ನು ನಿಂದಿಸಿ ಅವಮಾನಿಸುವವರು ಇದ್ದೇ ಇರುತ್ತಾರೆ. ಹಾಗೆಂದು ಆ ನಿಂದನೆಗಳಿಗೆ ಹೆದರಿ ಕುಳಿತರೆ ಆದೀತೆ? ‘ನಿಂದಕರಿರಬೇಕು. ಹಂದಿ ಇದ್ದರೆ ಕೇರಿ ಹ್ಯಾಗೆ ಶುದ್ಧಿಯೋ ಹಾಂಗೆ’ ಎಂದು, ತಮ್ಮತ್ತ ತೂರಿ ಬರುವ ನಿಂದನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಹಾದಿ ತೋರುತ್ತಾರೆ. ‘ಅಪಮಾನವಾದರೆ ಒಳ್ಳೆಯದು’ ಎಂದು ಅದಕ್ಕೆ ಕಾರಣವನ್ನೂ ಬಿಡಿಸಿ ಹೇಳುತ್ತಾರೆ. ಮಾನಿ ದುರ್ಯೋಧನಗೆ ಹಾನಿಯಾಯಿತು. ‘ಏನು ಬೇಡವೊ ಎನಗೆ ಅಪಮಾನವೇ ಇರಲಿ’ ಎನ್ನುತ್ತಾರೆ. ನಮ್ಮ ಆತ್ಮೋದ್ಧಾರಕ್ಕೆ ಮಾರಕವಾಗಿ, ಅಹಂಕಾರ ಬೆಳೆಸುವ ದುರಭಿಮಾನಕ್ಕಿಂತ, ನಮ್ಮನ್ನು ವಿಮಶಿಕೊಳ್ಳಲು ಅವಕಾಶ ನೀಡುವ ಅಪಮಾನವೇ ಒಳ್ಳೆಯದು ಎಂದಿರುವುದು ಸೂಕ್ತವೇ ಆಗಿದೆ.
ಹರಿಭಕ್ತಿಯನ್ನು ಸಾರುವುದರೊಂದಿಗೆ, ಸಮಾಜದಲ್ಲಿ ತುಂಬಿರುವ ಮೌಢ್ಯ, ಅರ್ಥಹೀನ ಕಂದಾಚಾರಗಳನ್ನು ನಿಷ್ಠುರವಾಗಿ ಟೀಕಿಸಿರುವ ದಾಸರ ಪದಗಳು ಅಂದಿಗೂ ಇಂದಿಗೂ ಮುಂದೆಯೂ ಪ್ರಸ್ತುತವೇ ಆಗಿರುತ್ತವೆ.
| ತ್ರಿವೇಣಿ ಶ್ರೀನಿವಾಸ ರಾವ್ (ಲೇಖಕರು ಸಾಹಿತಿ)