

Pumpkin Seeds: ಸಾಮಾನ್ಯವಾಗಿ ಕುಂಬಳಕಾಯಿಯಲ್ಲಿ ಹಲವಾರು ರೀತಿಯ ಅಡುಗೆಗಳನ್ನು ತಯಾರಿಸಲಾಗುತ್ತದೆ. ಕೆಲವರು ಕುಂಬಳಕಾರಿ ಚಟ್ನಿ, ಸಾರು, ಸಿಹಿ ಖಾದ್ಯ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾಡಿ ಸವಿಯುತ್ತಾರೆ. ಕೇವಲ ಇದರ ತಿರುಳಿನಲ್ಲಿ ಮಾತ್ರವಲ್ಲದೇ ಬೀಜಗಳು ಕೂಡ ಆರೋಗ್ಯಕ್ಕೆ ಬಹಳ ಉತ್ತಮ. ಕುಂಬಳಕಾಯಿ ಬೀಜ ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ.
ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಕಾರಿ ಅಂಶಗಳು ಹೇರಳವಾಗಿವೆ. ಈ ಬೀಜಗಳು ನೋಡಲು ಸಣ್ಣ ಗಾತ್ರದಲ್ಲಿದ್ದರೂ ಅವು ಆರೋಗ್ಯಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿವೆ. ಅಷ್ಟಕ್ಕೂ ಇದರಲ್ಲಿರುವ ಪೋಷಕಾಂಶಗಳು? ಪ್ರಯೋಜನಗಳು ಏನ್ನೆಲ್ಲ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
100 ಗ್ರಾಂ ಕುಂಬಳಕಾಯಿ ಬೀಜಗಳು 30 ಗ್ರಾಂ ಪ್ರೋಟೀನ್, 45 ಗ್ರಾಂ ಉತ್ತಮ ಕೊಬ್ಬು, 262 ಮಿಗ್ರಾಂ ಮೆಗ್ನೀಸಿಯಮ್, 7.8 ಮಿಗ್ರಾಂ ಸತು, 8.8 ಮಿಗ್ರಾಂ ಕಬ್ಬಿಣ, 6-7 ಗ್ರಾಂ ಫೈಬರ್, ವಿಟಮಿನ್ಗಳು ಇ, ಕೆ, ಬಿ 2, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ವಿವಿಧ ಫೀನಾಲಿಕ್ ಸಂಯುಕ್ತಗಳನ್ನು ಹೊಂದಿವೆ.
ಇತ್ತೀಚಿನ ದಿನಗಳಲ್ಲಿ ಹಿರಿಯರು ಸೇರಿದಂತೆ ಯುವಜನತೆಯಲ್ಲಿಯೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಒಂದೂವರೆ ತಿಂಗಳಲ್ಲಿ 30ಕ್ಕೂ ಅಧಿಕ ಮಂದಿ ಹಾರ್ಟ್ ಅಟ್ಯಾಕ್ಗೆ ಬಲಿಯಾಗಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಸುದ್ದಿಯೇ. ಹೀಗಿರುವಾಗ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ. ಕುಂಬಳಕಾಯಿ ಬೀಜಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಮೆಗ್ನೀಸಿಯಮ್ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ.
ಕುಂಬಳಕಾಯಿ ಬೀಜಗಳಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ದೇಹದಲ್ಲಿ ನಿದ್ರೆಯನ್ನು ಸರಿದೂಗಿಸುತ್ತದೆ.
ಕುಂಬಳಕಾಯಿ ಬೀಜಗಳಲ್ಲಿರುವ ಸತು ಮತ್ತು ವಿಟಮಿನ್ ಇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹವು ರೋಗಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಉತ್ತೇಜಿಸುತ್ತದೆ.
ಕುಂಬಳಕಾಯಿ ಬೀಜಗಳು ದೇಹದ ಜೀವಕೋಶಗಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಕ್ಯಾನ್ಸರ್ ನಂತಹ ರೋಗಗಳಿಂದ ರಕ್ಷಿಸುತ್ತದೆ.
ಕುಂಬಳಕಾಯಿ ಬೀಜಗಳು ನಾರಿನಂಶದಿಂದ ಸಮೃದ್ಧವಾಗಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ.