ಶ್ವಾಸಾಂಗವ್ಯೂಹ ಕಾರ್ಯಕ್ಷಮತೆ ವೃದ್ಧಿಗೆ ಪ್ರಾಣಾಯಾಮ

Pranayama 28 March 20
Published on
ಪ್ರಾಣಾಯಾಮವು ‘ಪ್ರಾಣ’ ಮತ್ತು ‘ಆಯಾಮ’ ಪದಗಳ ಸಂಗಮ. ಪ್ರಾಣ ಎಂದರೆ ವೈಟಲ್ ಫೋರ್ಸ್ (ಜೀವಾಳ, ಜೀವನದ ಅತಿ ಮುಖ್ಯ ಗೂಢ ತತ್ತ್ವ) ಹಾಗೂ ಆಯಾಮ ಎಂದರೆ ವಿಸ್ತಾರ. ಒಟ್ಟಿನಲ್ಲಿ ಪ್ರಾಣಾಯಾಮವೆಂದರೆ ವೈಟಲ್ ಫೋರ್ಸ್​ನ ವಿಸ್ತರಣೆ ಎಂಬರ್ಥ ಕೊಡುತ್ತದೆ. ಪ್ರಾಣಾಯಾಮವು ದೈಹಿಕ ಕ್ರಿಯೆಯಾದರೂ ನಿರಂತರ ಅಭ್ಯಾಸದಿಂದ ಮನಶ್ಶಾಂತಿ, ನೆಮ್ಮದಿ, ಸ್ಥಿರತೆಯನ್ನು ಕೊಡುತ್ತದೆ.

ಮಾನವನ ಶರೀರವು ಪಂಚಕೋಶ, ಪಂಚಪ್ರಾಣಗಳಿಂದ ರಚಿತವಾಗಿದೆ. ಪ್ರಾಣಮಯ ಕೋಶ ಹಾಗೂ ವೈಟಲ್ ಫೋರ್ಸ್ ಮೇಲೆ ಆಹಾರಪದ್ಧತಿ, ಜೀವನಶೈಲಿ ನೇರ ಪರಿಣಾಮ ಬೀರುತ್ತದೆ. ಅದರಲ್ಲಿ ವ್ಯತ್ಯಯವಾದರೆ ಪ್ರಾಣದ ಸಂಚಾರಕ್ಕೆ ತಡೆಯೊಡ್ಡಿ ಅಂಗಾಂಗಗಳ ಪ್ರಾಣಶಕ್ತಿಯನ್ನು ಕುಂದಿಸುತ್ತದೆ. ಆದರೆ ಪ್ರಾಣಾಯಾಮದ ಅಭ್ಯಾಸವು ಅಂಗಾಂಗಗಳಿಗೆ ವೈಟಲ್ ಫೋರ್ಸ್ ಸಂಚಾರವಾಗುವಂತೆ ಮಾಡಿ ಪುನಶ್ಚೇತನಗೊಳಿಸುತ್ತದೆ.

ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಡಯಗ್ನೋಸ್ಟಿಕ್ ರಿಸರ್ಚ್​ನ ವರದಿಯಂತೆ ನಾಡಿಶುದ್ಧಿ, ಭಸ್ತ್ರಿಕಾ, ಭ್ರಾಮರಿ ಪ್ರಾಣಾಯಾಮ ಹಾಗೂ ಕಪಾಲಭಾತಿ ಕ್ರಿಯೆಗಳ ಅಭ್ಯಾಸದಿಂದ ಶ್ವಾಸಕೋಶಕ್ಕೆ ಹೆಚ್ಚು ಆಮ್ಲಜನಕದ ಪೂರೈಕೆಯಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿದುಬಂದಿದೆ. ಇವುಗಳ ನಿರಂತರ ಅಭ್ಯಾಸದಿಂದ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆ ಮಾಡಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಬಹುದು.

ಯಾವುದೇ ರೀತಿಯ ಉಸಿರಾಟದ ಸಮಸ್ಯೆಯ ತೀವ್ರತೆಯನ್ನು ಪೀಕ್ ಫ್ಲೋ ಮೀಟರ್​ನಿಂದ ತಿಳಿಯುತ್ತಾರೆ. ಇದರ ನೆರವಿನಿಂದ ಪೀಕ್ ಎಕ್ಸಿ್ಪರೇಟರಿ ಫ್ಲೋ ಮತ್ತು ಶ್ವಾಸಕೋಶದ ಶಕ್ತಿಯನ್ನು ಕಂಡುಹಿಡಿಯಬಹುದು. ಇದರ ಮಟ್ಟ ಕಡಿಮೆಯಿರುವುದು ಉಸಿರಾಟದ ಸಮಸ್ಯೆಯ ಸಂಕೇತವಾಗಿರಬಹುದು. ಭಸ್ತ್ರಿಕಾ ಪ್ರಾಣಾಯಾಮದ ನಿರಂತರ ಅಭ್ಯಾಸದಿಂದ ಪೀಕ್ ಫ್ಲೋ ಮೀಟರ್​ನಿಂದ ಅಳೆಯುವ ಪೀಕ್ ಎಕ್ಸಿ್ಪರೇಟರಿ ಫ್ಲೋ ಹೆಚ್ಚುತ್ತದೆ, ತನ್ಮೂಲಕ ಉಸಿರಾಟದ ಸಮಸ್ಯೆ ಕಡಿಮೆ ಮಾಡಿ ಶ್ವಾಸಾಂಗಹವ್ಯೂಹದ ಆರೋಗ್ಯವನ್ನು ಕಾಪಾಡಬಹುದು ಎಂದು ವೈಜ್ಞಾನಿಕ ಪತ್ರಿಕೆ ‘ಡ್ರಗ್ ಇನ್ವೆನ್ಷನ್ ಟುಡೇ’ನಲ್ಲಿ ಪ್ರಕಟವಾದ ಸಂಶೋಧನಾ ಲೇಖನ ವಿವರಿಸಿದೆ.

ಉತ್ತಮ ಆರೋಗ್ಯಕ್ಕೆ ರೋಗನಿರೋಧಕ ಶಕ್ತಿ ಬಹು ಮುಖ್ಯ. ಅದು ಉತ್ತಮವಾಗಿದ್ದರೆ ಯಾವುದೇ ಆರೋಗ್ಯ ಸಮಸ್ಯೆಯಾದರೂ ನಮ್ಮ ಬಳಿ ಬರಲು ಹೆದರುವುದು. ನಿರಂತರ ಪ್ರಾಣಾಯಾಮದ ಅಭ್ಯಾಸವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ನಿರಂತರ ಪ್ರಾಣಾಯಾಮದ ಅಭ್ಯಾಸದಿಂದ ಸೆಲ್ ಮಿಡಿಯೆಟೆಡ್ ಮತ್ತು ಮ್ಯೂಕೋಸಲ್ ಇಮ್ಯೂನಿಟಿಯನ್ನು (ಮೂಗಿನ ಮತ್ತು ಗಂಟಲಿನ ಒಳಪದರದ ರೋಗನಿರೋಧಕ ಶಕ್ತಿ) ಹೆಚ್ಚಿಸಬಲ್ಲುದು ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಅಂತೆಯೇ ಆರೋಗ್ಯದ ಸವಾಲಿನ ಈ ಸಂದರ್ಭದಲ್ಲಿ ಸಮಾಜದ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಮಾನಸಿಕ ಒತ್ತಡವೂ ರೋಗನಿರೋಧಕ ಶಕ್ತಿಯನ್ನು ಕಡಿಮೆಮಾಡುತ್ತದೆ. ಮಾನಸಿಕ ಒತ್ತಡವನ್ನು ಕ್ರಮಬದ್ಧವಾಗಿ ಕಡಿಮೆ ಮಾಡುವಲ್ಲಿ ಪ್ರಾಣಾಯಾಮ ಬಹಳ ಸಹಾಯಕಾರಿ. ಪ್ರತಿನಿತ್ಯ ಅನೇಕ ಬಾರಿ ನಾಡಿಶುದ್ಧಿಯಂತಹ ಸರಳ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net