

ನನಗೆ ಸೈನಸೈಟಿಸ್ ಅಲರ್ಜಿ, ಶೀತ ಇದೆ. ಯೋಗದ ಪರಿಹಾರ ತಿಳಿಸಿ.
| ದಿನೇಶ್ ಬೆಂಗಳೂರು (25 ವರ್ಷ)
ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ವೀರಭದ್ರಾಸನ, ತ್ರಿಕೋನಾಸನ, ಪ್ರಸಾರಿತ ಪಾದೋತ್ಥಾನಾಸನ, ಪದ್ಮಾಸನದಲ್ಲಿ ಪರ್ವತಾಸನ, ಪಶ್ಚಿಮೋತ್ಥಾನಾಸನ, ಶಶಂಕಾಸನ, ಸರ್ವಾಂಗಾಸನ, ಹಲಾಸನ, ಸರ್ಪಾಸನ, ಅಧೋಮುಖ ಶ್ವಾನಾಸನ, ಶವಾಸನ ಇತ್ಯಾದಿ.
ಪ್ರಾಣಾಯಾಮ, ಕ್ರಿಯೆ, ಮುದ್ರೆಗಳು: ನಾಡಿಶುದ್ಧಿ, ಉಜ್ಜಾಯಿ, ಸೂರ್ಯಾನುಲೋಮ, ಸುಖಪ್ರಾಣಾಯಾಮ ಮಾಡಿ. ಶುದ್ಧೀಕರಣಕ್ಕಾಗಿ ಕಪಾಲಭಾತಿ, ಜಲನೇತಿ ಸೂತ್ರನೇತಿ ಮಾಡಿ. ಪ್ರಾಣಮುದ್ರೆ, ಅದಿತಿ ಮುದ್ರೆ, ಭ್ರಮರ ಮುದ್ರೆ ಮಾಡಿ.
ವೈದ್ಯರ ತಪಾಸಣೆ, ಉಪಚಾರದೊಂದಿಗೆ, ಸರಿಯಾದ ಸಮಯದಲ್ಲಿ ತಿನ್ನುವುದು, ಮಲಗುವುದು ಅಭ್ಯಾಸ ಮಾಡಿ. ಜಂಕ್ ಫುಡ್ನಿಂದ ದೂರವಿರಿ. ಸಮತೋಲಿತ ಆಹಾರ ಸೇವಿಸಿ. ಬೆಚ್ಚಗಿನ ನೀರು ಕುಡಿಯಿರಿ. ರಾತ್ರಿ ಬೇಗನೆ ಊಟ ಮಾಡಿ. ನಿಮ್ಮ ಆಹಾರವನ್ನು ನಿಧಾನವಾಗಿ ಜಗಿದು ತಿನ್ನಿ. ಮುಂಜಾನೆ ಸೂರ್ಯನ ಬಿಸಿಲಿನಲ್ಲಿ ಇಪ್ಪತ್ತು ನಿಮಿಷ ನಿಲ್ಲಿ.
ಉಷ್ಟ್ರಾಸನ ಮಾಡುವ ಬಗೆ ಹೇಗೆ? ಇದರ ಪ್ರಯೋಜನಗಳು ಏನೇನು?
| ಲಕ್ಷ್ಮಣ ರಾಯಚೂರು (40 ವರ್ಷ)
ಉಷ್ಟ್ರಾಸನ ಎಂಬುದು ಒಂಟೆಯ ಭಂಗಿ. ದೇಹವನ್ನು ಸದೃಢವಾಗುವಂತೆ ಮಾಡುತ್ತದೆ. ಸೊಂಟದ ಬಾಗುವಿಕೆಯನ್ನು ವಿಸ್ತರಿಸುತ್ತದೆ.
ವಿಧಾನ: ಜಮಖಾನದ ಮೇಲೆ ಮೊಣಕಾಲೂರಿ ನಿಂತುಕೊಳ್ಳಿ. ಪಾದಗಳ ಮೇಲ್ಭಾಗ ಜಮಖಾನಕ್ಕೆ ತಾಗುವಂತೆ ಹಿಂದೆ ಚಾಚಿ. ಬೆನ್ನು ತಲೆಯನ್ನು ಹಿಂದಕ್ಕೆ ಬಗ್ಗಿಸಿ ಕೈಗಳೆರಡನ್ನೂ ಪಾದಗಳ ಮೇಲೆ ಉಸಿರನ್ನು ಬಿಡುತ್ತ ಇಡಿ. ತೊಡೆ ಮತ್ತು ಸೊಂಟದ ಭಾಗವನ್ನು ಬಿಗಿ ಮಾಡಿ ಮುಂದಕ್ಕೆ ತನ್ನಿ. ತಲೆ ಮತ್ತು ಕುತ್ತಿಗೆಯನ್ನು ಅದಷ್ಟೂ ಹಿಂದಕ್ಕೆ ತನ್ನಿ. ಈಗ ಸಹಜ ಉಸಿರಾಟದಲ್ಲಿ 1/2 ನಿಮಿಷ ಇರಿ. ಕೈಗಳೆರಡನ್ನೂ ಸಡಿಲಿಸಿ ಮೊದಲಿನ ಸ್ಥಿತಿಗೆ ಬನ್ನಿ. ನಂತರ ತುಸು ವಿಶ್ರಾಂತಿ ಪಡೆಯಿರಿ.
ಪ್ರಯೋಜನ: ಭುಜಗಳು, ಬೆನ್ನಿನ ಸ್ನಾಯು, ತೊಡೆ ಮತ್ತು ತೋಳುಗಳನ್ನು ಬಲಪಡಿಸುತ್ತದೆ. ತೊಡೆ ಮತ್ತು ಹೊಟ್ಟೆಯ ಬೊಜ್ಜು ನಿಯಂತ್ರಣ. ಅಸ್ತಮಾ ನಿಯಂತ್ರಣ. ಥೈರಾಯ್್ಡ ಗ್ರಂಥಿಯ ಆರೋಗ್ಯವರ್ಧನೆ, ಮುಖದ ಕಾಂತಿ ಹೆಚ್ಚಳ. ಕಣ್ಣುಗಳು ಹೊಳಪಾಗುತ್ತವೆ. ಚಕ್ರಗಳ ಸುಸ್ಥಿತಿಗೆ ಸಹಕಾರಿ. ನರಮಂಡಲ ಚೇತನಗೊಳ್ಳುತ್ತದೆ. ಆದರೆ ಹರ್ನಿಯಾ, ಉದರಭಾಗದಲ್ಲಿ ಗಾಯಗಳಿಂದ ತೊಂದರೆ, ಸಂಧಿವಾತ, ತಲೆಸುತ್ತುವಿಕೆ ಇರುವವರು, ಗರ್ಭಿಣಿಯರು ಉಷ್ಟ್ರಾಸನ, ಅರ್ಧ ಉಷ್ಟ್ರಾಸನ ಮಾಡಬಾರದು.