

ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು ಕೊಳ್ಳುವ ಶಕ್ತಿ ಅತಿ ಶ್ರೀಮಂತರಿಗೆ ಮಾತ್ರವೇ ಇತ್ತು. ಏಕೆಂದರೆ ಆಗ ಅಲ್ಲಿ ಅದಕ್ಕಿದ್ದ ದುಬಾರಿ ಬೆಲೆ. ಹಾಗಾಗಿಯೇ ಅವರು ಅದಕ್ಕೆ ಕಪ್ಪು ಬಂಗಾರ ಎಂದರು. ಇದರ ಗುಣಗಳನ್ನು ನೋಡಿದರೆ ನಾವೂ ಇದಕ್ಕೆ ಬಂಗಾರವೆಂದೇ ಕರೆಯಬಹುದು.
ಹಿಂದೆಲ್ಲ ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಯಲ್ಲೂ ಪ್ರತಿನಿತ್ಯ ಕಷಾಯ ಕುಡಿಯುವ ರೂಢಿಯಿತ್ತು. ಕಾಳುಮೆಣಸು ಕಷಾಯಪುಡಿಯ ಅವಿಭಾಜ್ಯ ಅಂಗವಾಗಿತ್ತು. ಹಾಗಾಗಿಯೇ ಇಂದಿಗೂ ಹಳ್ಳಿಗಳಲ್ಲಿ ಕರೊನಾ ತನ್ನ ಪ್ರತಾಪವನ್ನು ಹೆಚ್ಚು ತೋರಿಸಲಾಗಿಲ್ಲ. ಇದಕ್ಕೆ ಜ್ವರವನ್ನು ಕಡಿಮೆ ಮಾಡುವ ಗುಣವಿದೆ. ಬೆವರು ತರಿಸುವ ಗುಣವಿದೆ. ಟೈಫಾಯ್್ಡ ಮಲೇರಿಯಾ, ಡೆಂಘಿ, ಕೋವಿಡ್ ಯಾವುದರಿಂದ ಬಂದ ಜ್ವರವೇ ಆಗಲಿ, ಉಳಿದ ಔಷಧಗಳ ಜತೆಗೆ ಕಾಳುಮೆಣಸಿನ ಕಷಾಯ ಕುಡಿಯಬೇಕು. ಅದರಿಂದ ತುಂಬ ಲಾಭವಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ಅಜೀರ್ಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುವ ಗುಣ ಇದಕ್ಕಿದೆ. ವಿಶೇಷವಾಗಿ ತುಪ್ಪದ ಸೇವನೆಯಿಂದಾದ ಅಜೀರ್ಣದಲ್ಲಿ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಹೊಟ್ಟೆಯುಬ್ಬರ, ಊಟ ಮಾಡಿ ಎಷ್ಟು ಹೊತ್ತಾದರೂ ಆಹಾರ ಜೀರ್ಣವಾಗದೆ ಹೊಟ್ಟೆಯಲ್ಲೇ ಇದ್ದಂತೆ ಅನ್ನಿಸುತ್ತಿದ್ದರೆ ಮತ್ತು ಐಬಿಎಸ್ನ ಸಮಸ್ಯೆಗಳಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ಇದರ ಸೇವನೆಯನ್ನು ಹೆಚ್ಚಾಗಿ ಮಾಡಲೇಬೇಕು. ಕಫ ಮತ್ತು ವಾತದೋಷಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ.
ಅತ್ಯುತ್ತಮ ನೋವು ನಿವಾರಕವಾಗಿರುವುದರಿಂದ ಸಂಧಿವಾತ, ಆಮವಾತ, ಗೌಟ್ನಂತಹ ಸಮಸ್ಯೆಗಳಲ್ಲಿ ತುಂಬ ಸಹಕಾರಿ. ಅದರಲ್ಲೂ ವಿಶೇಷವಾಗಿ ಪ್ರಾರಂಭಾವಸ್ಥೆಯಲ್ಲಿರುವ ಆಮವಾತದಂತಹ (ರುಮಟಾಯ್್ಡ ಆರ್ಥರೈಟಿಸ್) ಸಮಸ್ಯೆಗಳಲ್ಲಿ ಬಾವು, ಜ್ವರ, ಹಸಿವಾಗದೆ ಇರುವುದು ಆಗುತ್ತಿದ್ದಾಗ ಇದನ್ನು ಶುಂಠಿ ಮತ್ತು ಹಿಪ್ಪಲಿ ಪುಡಿಗಳ ಜೊತೆ ಸೇವಿಸಿದರೆ ಅರ್ಧದಷ್ಟು ಸಮಸ್ಯೆ ಕಡಿಮೆಯಾಗಿಬಿಡುತ್ತದೆ. ಇವು ಮೂರನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವುಳ್ಳ ‘ತ್ರಿಕಟು ಚೂರ್ಣ’ವಾಗುತ್ತದೆ. ಹಿಂದೆ ನೋವಿನ ಮಾತ್ರೆಗಳಿಲ್ಲದ ಕಾಲದಲ್ಲಿ ಬಾಣಂತಿಯರಿಗೆ ನೋವುನಿವಾರಕವಾಗಿ ಇದನ್ನೇ ಬಳಸುತ್ತಿದ್ದರು. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಬಾಣಂತಿಯರಿಗೆ ಹಲವು ದಿನಗಳ ಕಾಲ ಕಾಳುಮೆಣಸು ಹಾಕಿದ ವಿವಿಧ ಔಷಧಗಳನ್ನು ನೀಡುತ್ತಾರೆ. ಇದರಿಂದ ರಕ್ತಸ್ರಾವವೂ ಸರಿಯಾಗಿ ಆಗಿ ಗರ್ಭಾಶಯದ ಶುದ್ಧಿಯೂ ಆಗುತ್ತದೆ. ದಿನಕ್ಕೆ ಎರಡರಿಂದ ನಾಲ್ಕು ರತ್ತಿ ಅಂದರೆ 250ರಿಂದ 500 ಮಿಲಿ ಗ್ರಾಂ ಕಾಳುಮೆಣಸನ್ನು ಸೇವಿಸಬಹುದು ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ. ಜೇನುತುಪ್ಪ ಅಥವಾ ಬಿಸಿನೀರಿನ ಜತೆ ಕಷಾಯದ ರೂಪದಲ್ಲಿ ಇದನ್ನು ಸೇವಿಸಬಹುದು. ಆದರೆ ಇದು ಪಿತ್ತದೋಷವನ್ನು ಹೆಚ್ಚಿಸುತ್ತದೆ. ಅಲ್ಲದೆ ತುಂಬ ಉಷ್ಣ ಗುಣವನ್ನು ಹೊಂದಿದೆ. ಸೇವನೆ ಅತಿಯಾದರೆ ಹೊಟ್ಟೆನೋವು, ವಾಂತಿ, ಕಿಬ್ಬೊಟ್ಟೆ ಮತ್ತು ಮೂತ್ರದಲ್ಲಿ ಉರಿ, ಚರ್ಮವಿಕಾರಗಳು ಆಗಬಹುದು. ಹಾಗಾಗಿ ಪಿತ್ತಪ್ರಕೃತಿಯವರು, ಕೃಶದೇಹಿಗಳು, ಬೇಸಿಗೆಯಲ್ಲಿ, ಒಣಪ್ರದೇಶಗಳಲ್ಲಿ ಇದನ್ನು ಮಿತವಾಗಿ ಬಳಸಬೇಕು.