

ಆತ ಪುಟ್ಟ ಬಾಲಕ. ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿ. ವಯಸ್ಸಿಗೂ ಮೀರಿದ ಪ್ರತಿಭೆ. ಹರಿತ ಮಾತು. ಓದು-ಪಠ್ಯೇತರ ಚಟುವಟಿಕೆಗಳಲ್ಲೂ ಎತ್ತಿದ ಕೈ. ಅಂದುಕೊಂಡಿದ್ದನ್ನು ಪಡೆಯುವ ಛಲವಾದಿ. ಜತೆಗೆ ತನ್ನನ್ನು ಎಲ್ಲರೂ ಹೊಗಳಬೇಕು, ಪ್ರೀತಿಸಬೇಕು ಎನ್ನುವ ಹಟ. ಶಾಲೆಗೆ ಸೇರುವ ಮುನ್ನ ಮನೆಯಲ್ಲಿ ಎಲ್ಲರ ಮುದ್ದಿನ ಮಗ. ಬಂಧುಬಳಗಕ್ಕೂ ಅಚ್ಚುಮೆಚ್ಚು. ಎಲ್ಲರ ಪ್ರೀತಿಯ ಕೇಂದ್ರಬಿಂದುವಾಗಿ ಬೆಳೆದ ಈ ಬಾಲಕನ ತಾಯಿ ಎರಡನೇ ಹೆರಿಗೆಯಲ್ಲಿ ಅವಳಿ ಗಂಡುಮಕ್ಕಳನ್ನು ಹೆತ್ತಳು. ಆ ಮಕ್ಕಳ ಮೇಲೆ ಈ ಬಾಲಕನಿಗೂ ಅಪಾರ ಪ್ರೀತಿಯಿತ್ತು. ಆದರೆ ಬಂಧುಗಳು ಅಥವಾ ಇನ್ಯಾರೋ ಮನೆಗೆ ಬಂದವರು ಅವಳಿ ಮಕ್ಕಳ ರೂಪವನ್ನು ನೋಡಿ ಹೊಗಳಿದರೆ ಈ ಬಾಲಕನಿಗೆ ಕಸಿವಿಸಿ ಆಗುತ್ತಿತ್ತು. ತಾನೆಲ್ಲಿ್ಲ ಕಡೆಗಣಿಸಲ್ಪಡುವೆನೋ ಎನ್ನುವ ಆತಂಕ ಮನೆಮಾಡಹತ್ತಿತು. ಕಾಲಕ್ರಮೇಣ ಇದು ಬೇರೆ ಸ್ವರೂಪ ಪಡೆಯಿತು. ಎಲ್ಲರೂ ಅವಳಿ ಮಕ್ಕಳನ್ನೇ ಪ್ರೀತಿಸುತ್ತಾರೆ, ತನ್ನನ್ನು ಮರೆಯುತ್ತಾರೆ ಮತ್ತು ತನ್ನ ಮೇಲಿನ ಪ್ರೀತಿ - ಗಮನ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಸಿಟ್ಟು ಮಾಡತೊಡಗಿದ. ಅಭದ್ರತಾಭಾವನೆಯಿಂದ ರಾತ್ರಿ ಮೂತ್ರವಿಸರ್ಜನೆ ಮಾಡಲು ಶುರುಮಾಡಿದ. ಇದಕ್ಕಾಗಿ ಪಾಲಕರು ಮೊದಲು ಸಿಟ್ಟು ಮಾಡಿಕೊಂಡರು. ಆದರೆ ದಿನದಿಂದ ದಿನಕ್ಕೆ ಆತನ ನಡವಳಿಕೆಯಲ್ಲಿ ಬದಲಾವಣೆ, ಸಿಟ್ಟು ಹೆಚ್ಚಿತು. ಊಟ ಬಿಡುವುದು, ಕಿರಿಚಾಡುವುದು, ಪಾಲಕರಿಗೆ ಎದುರು ವಾದಿಸುವುದು - ಹೀಗೆ ಎಲ್ಲವೂ ಪಾಲಕರು ತಾಳ್ಮೆ ಪರೀಕ್ಷಿಸುವಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಯಿತು. ಅವನ ಅವಾಂತರ ಹೇಳತೀರದಾಯಿತು ಎಂದು ಒಂದು ಏಟನ್ನೂ ತಿಂದಿರದ ಬಾಲಕನಿಗೆ ಬಾಸುಂಡೆ ಬರುವಂಥ ಏಟು ಬಿತ್ತು. ಈ ವರ್ತನೆ ಕಂಡ ಪಾಲಕರು ಕೆಲವೊಮ್ಮೆ ಆತನಿಗೆ ಬುದ್ಧಿ ಹೇಳಲು ಬಂದರೆ ರಭಸದಿಂದ ಓಡಿಹೋಗುವುದೂ ಶುರುವಾಯ್ತು. ‘ನೀವು ನನಗೇನು ಸಮಾಧಾನ ಹೇಳ್ತೀರಾ? ಬನ್ನಿ, ನನ್ನ ಜತೆ ಹೊಡೆದಾಟಕ್ಕೆ. ಒಂದೋ ನೀವಿರಬೇಕು ಇಲ್ಲವೇ ನಾನೇ ಸಾಯ್ತೀನಿ’ - ಹೀಗೆ ಅವನ ಮಾತುಗಳು ದಾರಿ ತಪ್ಪಲಾರಂಭಿಸಿದವು. ಪುಟ್ಟ ಬಾಲಕನ ಬಾಯಿಯಲ್ಲಿ ಸಾಯುವ ಮಾತು ಕೇಳಿ ಸಹಜವಾಗಿಯೇ ಪಾಲಕರ ಆತಂಕ ಇನ್ನಷ್ಟು ಹೆಚ್ಚಿತು.
ಎಲ್ಲ ಪಾಲಕರಂತೆ ಈ ಪಾಲಕರ ಎದೆಯೂ ಝುಲ್ ಎಂದಿತು. ಬಾಲಕನ ಈ ವರ್ತನೆಗೆ ಕೆಲವು ಸಂಬಂಧಿಕರು ಗಾಳಿ ಶಕಾ ಅಂದರು. ಇನ್ನು ಹಲವರು ಭೂತ ಪ್ರೇತ, ಯಾರೋ ಮಾಟ ಮಾಡಿಸಿದ್ದಾರೆ ಅಂದರು. ಮತ್ತೆ ಕೆಲವರು ದೃಷ್ಟಿಯಾಗಿದೆ ಎಂದರು. ಹೀಗೆ ಎಲ್ಲರ ಮಾತು ಕೇಳಿ ಪಾಲಕರಿಗೆ ದಿಕ್ಕು ತೋಚದಂತಾಯಿತು. ಹೇಗಾದರೂ ಸಮಸ್ಯೆ ಬಗೆಹರಿದರೆ ಸಾಕೆಂದು ಪಾಲಕರು ಗುಡಿ ಗುಂಡಾರ ಸುತ್ತಿದರು. ಮಾಟ, ಮಂತ್ರ, ಊಟದಲ್ಲಿ ಏನೋ ಹಾಕಿದ್ದಾರೆಂದುಕೊಂಡು ಅದನ್ನು ತೆಗೆಸಿದ್ದೂ ಆಯ್ತು. ಫಲಿತಾಂಶ ಶೂನ್ಯ. ಕೊನೆಗೆ ಯಾರೋ ಬುದ್ಧಿವಂತರು ಬಾಲಕನಿಗೆ ಮಾನಸಿಕ ಕಾಯಿಲೆ ಇರಬೇಕು. ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಎಂಬ ಸಲಹೆ ನೀಡಿದರು. ಅದೂ ಆಗಿಬಿಡಲಿ ಎಂದುಕೊಂಡ ಪಾಲಕರು ಬಾಲಕನನ್ನು ನನ್ನ ಬಳಿ ಕರೆತಂದರು. ಬಾಲಕನ ಜತೆ ಆಪ್ತ ಸಮಾಲೋಚನೆ ನಡೆಸಿದೆ. ‘ನಿನಗೆ ಪ್ರೀತಿಯ ಕೊರತೆಯ ಆತಂಕ ಎದುರಾಗುತ್ತಿದೆ. ಆದರೆ ವಾಸ್ತವ ಹಾಗಿಲ್ಲ’ ಎಂದು ಪಾಲಕರ ಅಸಹಾಯಕತೆಯ ಬಗ್ಗೆ ಹೇಳಿದೆ. ಬಾಲಕನಿಗೂ ಅದು ಸತ್ಯ ಎನಿಸಿತು. ವರ್ತನಾ ಚಿಕಿತ್ಸೆಯ ಜತೆ ಕೆಲವು ಮಾತ್ರೆಗಳನ್ನು ಕೊಟ್ಟ ಪರಿಣಾಮ ಬಾಲಕ ಸಾಮಾನ್ಯ ವರ್ತನೆಗೆ ಮರಳಿದ. ಸಣ್ಣ ಸಣ್ಣ ಮಾತಿಗೂ ಸಿಟ್ಟಿಗೇಳುತ್ತಿದ್ದ ಅವನಿಗೆ ಒಮ್ಮೆ ಪಕ್ಕದ ಮನೆ ಅಜ್ಜ ಒಮ್ಮೆ ಕಿವಿ ಹಿಂಡಿ ತಿಳಿಹೇಳಿದ. ಅಜ್ಜನ ಅಸಹಾಯಕತೆ ಅರಿತ ಈ ಬಾಲಕ ಅದನ್ನು ಮೌನವಾಗಿ ಸಹಿಸಿದ. ಅಂದರೆ ಆತನಲ್ಲಿನ ಅಸಹನೆ, ಸಿಟ್ಟಿನ ತೀವ್ರತೆ ಕುಸಿದಿತ್ತು ಎಂದರ್ಥ. ಸಮಾಲೋಚನೆ ಮತ್ತು ಆಪ್ತಸಂವಾದದ ಚಿಕಿತ್ಸೆ ಸಮಸ್ಯೆಗೆ ಪರಿಹಾರ ಸೂಚಿಸಿತ್ತು. ಪ್ರಕರಣ ಸುಖಾಂತ್ಯಗೊಂಡಿತು.
ಇದಕ್ಕೆ Sibling rivalry ಎನ್ನುತ್ತಾರೆ. ಈ ಕುರಿತ ನಾಣ್ಣುಡಿ ಏನೆಂದರೆ ’Admit the child & treat the parents.' ಮೊದಲ ಮಗುವಿನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂದು ಮನವರಿಕೆ ಮಾಡಿಕೊಡುವ ನಡವಳಿಕೆ ಪಾಲಕರಲ್ಲಿರಬೇಕು. ಇಂಥವು ಎದುರಾದಾಗ ಪಾಲಕರಿಗೆ ಮಾರ್ಗದರ್ಶನ ಮುಖ್ಯ. ಪ್ರತಿ ಪಾಲಕರಿಗೂ ಮಕ್ಕಳ ಮನಸ್ಸು ಹಾಗೂ ಸ್ವಲ್ಪ ಮನೋವಿಜ್ಞಾನದ ಅರಿವು ಅವಶ್ಯ.