ಎಳ್ಳಿನ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯವಿದು..

sesame
Published on

ಬೆಂಗಳೂರು: ನಮ್ಮನ್ನು ಕಾಡುವ ಅನೇಕ ಖಾಯಿಲೆಗಳಿಗೆ ಶೇಕಡಾ 90ರಷ್ಟು ಪರಿಹಾರ ನಾವು ತಿನ್ನುವ ಆಹಾರದಲ್ಲಿದೆ. ನಮಗೆ ತಿಳಿದಿರುವ ಆಹಾರ ಪದಾರ್ಥಗಳ ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂಬ ಮಾಹಿತಿ ಬಗ್ಗೆ ಗೊತ್ತೇ ಇರುವುದಿಲ್ಲ. ಸಿಹಿ ಆಗಲಿ, ಖಾರದ ಆಹಾರ ಪದಾರ್ಥವಾಗಲಿ ಅದಕ್ಕೊಂದಿಷ್ಟು ಎಳ್ಳು ಹಾಕಿದರೆ ಸಾಕು ಅದರ ರುಚಿನೇ ಬೇರೆ.

ಎಳ್ಳು ಅನೇಕ ಆರೋಗ್ಯಕರ ಜೀವಸತ್ವಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಸತುವು ಸೇರಿವೆ. ಕೆಲವು ಸಂಶೋಧನೆಗಳ ಪ್ರಕಾರ, ಎಳ್ಳಿನಲ್ಲಿರುವ ಲಿಗ್ನಾನ್ಸ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಲಿಗ್ನಾನ್ಸ್ ಹಾರ್ಮೋನ್ ಕಾರ್ಯವನ್ನು ಸುಧಾರಿಸುತ್ತದೆ. ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಎಳ್ಳಿನಲ್ಲಿರುವ ನಾರಿನಂಶವು ಹೊಟ್ಟೆ ತುಂಬಿದ ಭಾವನೆಯನ್ನು ನೀಡಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

ಎಳ್ಳಿನಲ್ಲಿ ನಾರಿನಂಶ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜತೆಗೆ ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಇದಲ್ಲದೆ, ಇದರಲ್ಲಿರುವ ವಿಟಮಿನ್ ಇ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಎಳ್ಳಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿದ್ದು ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸ್ಮರಣೆಯನ್ನು ಸುಧಾರಿಸುವುದಲ್ಲದೇ ನರಮಂಡಲದ ಕಾರ್ಯವನ್ನು ಸುಧಾರಿಸುತ್ತದೆ.

ಎಳ್ಳು ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡುವುದಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್​ನ್ನು ಹೆಚ್ಚಿಸುತ್ತದೆ.

ಎಳ್ಳು ಬೀಜಗಳಲ್ಲಿ ಸತುವು ಇರುವುದರಿಂದ ಇವುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸತುವು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ ಮತ್ತು ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಆದಾಗ್ಯೂ, ಎಳ್ಳು ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಆದರೆ ಮಿತಿಮೀರಿದ ಸೇವನೆಯಿಂದ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಲ್ಲಿ ನಾರಿನಂಶ ಇರುವುದರಿಂದ ಅತಿಯಾಗಿ ಸೇವಿಸುವುದರಿಂದ ಗ್ಯಾಸ್ ಮತ್ತು ಭೇದಿ ಉಂಟಾಗುತ್ತದೆ. ಕೆಲವರಿಗೆ ಎಳ್ಳು ಕಾಳು ಎಂದರೆ ಅಲರ್ಜಿ, ಇದರ ಸೇವನೆಯಿಂದಾಗಿ ತಲೆನೋವು ಶುರುವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಹೆಚ್ಚು ಎಳ್ಳು ಬೀಜಗಳನ್ನು ಸೇವಿಸುವುದರಿಂದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net