ಆರೋಗ್ಯಕ್ಕಾಗಿ ಮಾತ್ರವಲ್ಲ, ಅಂದಕ್ಕಾಗಿ ನಾಸಾದ ಶಸ್ತ್ರಕ್ರಿಯೆ!

Health story
Published on

ಇದೇನಪ್ಪಾ ಎಂದು ಮೂಗು ಮುರಿಯಬೇಡಿ! ಹೊರ ಜಗತ್ತಿನ ಪೂರ್ಣ ಅರಿವು ನಮಗೆ ಆಗಬೇಕೆಂದರೆ ವಸ್ತುಗಳ ವಾಸನೆಯ ಗ್ರಹಣ ವ್ಯವಸ್ಥಿತವಾಗಿ ಆಗಲೇಬೇಕು. ಅದು ಸುವಾಸನೆಯಿರಲಿ,

ದುರ್ವಾಸನೆಯಿರಲಿ. ಐದು ಜ್ಞಾನೇಂದ್ರಿಯಗಳಲ್ಲಿ ಮೂಗು ಕೂಡ ಒಂದು. ದೊಡ್ಡ ಮೂಗು, ಸಣ್ಣ ಮೂಗು, ಉದ್ದ ಮೂಗು, ಚಪ್ಪಟೆ ಮೂಗು ಮೊದಲಾದ ರೂಪ ವೈವಿಧ್ಯದಿಂದ ಮುಖದ ಚಹರೆಯನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಮೂಗಿಗಿದೆ. ಮುಖದ ಒಪ್ಪಓರಣವನ್ನು ಅಂದಗೊಳಿಸುವುದಷ್ಟೇ ಈ ಮೂಗಿನ ಕೈಂಕರ್ಯವಲ್ಲ, ಅದು ಗಂಧಜ್ಞಾನದ ಅಧಿಷ್ಠಾನ ಆಗಿರುವುದರಿಂದ ಘ್ರಾಣೇಂದ್ರಿಯ ಎಂಬ ಅನ್ವರ್ಥ ನಾಮದೊಂದಿಗೆ ಆಯುರ್ವೆದ ನಾಸಾವನ್ನು ಬಣ್ಣಿಸಿದೆ. ಎರಡು ತರುಣಾಸ್ಥಿ ಮೂರು ಮೂಳೆ, ಎರಡು ಮಾಂಸಪೇಶಿಗಳಿಂದ ರಚಿಸಲ್ಪಟ್ಟಿರುವ ಮೂಗು ಉಸಿರಾಟದ ಮಹಾದ್ವಾರ ಮಾತ್ರವಲ್ಲ, ಚಿಕಿತ್ಸೆಯ ದೃಷ್ಟಿಯಿಂದ ಶಿರಸ್ಸಿನ ದ್ವಾರ ಎಂದು ಆಯುರ್ವೆದ ಹೇಳಲು ಕಾರಣವಿದೆ. ಪಂಚಕರ್ಮ ಚಿಕಿತ್ಸೆಯಲ್ಲಿ ಒಂದಾದ, ಶಿರ ಹಾಗೂ ಶರೀರದ ಅನೇಕ ರೋಗಗಳಲ್ಲಿ ಫಲಕಾರಿಯಾದ ನಸ್ಯಕರ್ಮವನ್ನು ಇದೇ ಮೂಗಿನ ಮೂಲಕವೇ ಮಾಡಲಾಗುತ್ತದೆ.

ಆಯುರ್ವೆದಕ್ಕೆ ವಿಶ್ವಖ್ಯಾತಿಯನ್ನು ತಂದುಕೊಟ್ಟಿದ್ದರಲ್ಲಿ ನಾಸಾದ ಗಮನಾರ್ಹ ಪಾತ್ರವಿದೆ ಎಂದರೆ ಅಚ್ಚರಿಯಾಗುತ್ತದೆ. ಸಂಸ್ಕೃತದಲ್ಲಿ ನಾಸಾ ಎಂದರೆ ಮೂಗು. ಭಾರತದ ಶಸ್ತ್ರಚಿಕಿತ್ಸಾ ಪಿತಾಮಹ ಆಚಾರ್ಯ ಸುಶ್ರುತ ಮಾಡುತ್ತಿದ್ದ ಸುರೂಪಿಕಾ ಶಸ್ತ್ರಚಿಕಿತ್ಸೆ ಬ್ರಿಟಿಷರಿಂದಲೂ ದಾಖಲೆಯ ಪುಟಗಳಲ್ಲಿ ವಿವರಿಸಲ್ಪಟ್ಟಿರುವುದು ಈಗ ಇತಿಹಾಸ. ಮೂಗಿಗೆ ಮಾಡಿದ ಈ ಪ್ಲಾಸ್ಟಿಕ್ ಸರ್ಜರಿಯ ಮಹಿಮೆಯಿಂದಾಗಿಯೇ ಫಾದರ್ ಆಫ್ ರೈನೋಪ್ಲಾಸ್ಟಿ ಎಂದು ಸುಶ್ರುತನನ್ನು ಜಗತ್ತಿನಾದ್ಯಂತ ಗೌರವಿಸಲಾಗುತ್ತಿದೆ. ಆರೋಗ್ಯಕ್ಕಾಗಿ ಅಷ್ಟೇ ಅಲ್ಲದೆ ಅಂದಕ್ಕಾಗಿಯೂ ಶಸ್ತ್ರಚಿಕಿತ್ಸೆಯನ್ನು ಸಾವಿರಾರು ವರ್ಷಗಳ ಮೊದಲೇ ಯಶಸ್ವಿಯಾಗಿ ಪ್ರಾರಂಭಿಸಿ ನಿರಂತರವಾಗಿ ಮಾಡುತ್ತಿದ್ದ ಕೀರ್ತಿಯ ಹಿಂದೆ ಅಪ್ರತಿಮ ಚಿಂತನಾ ಶಕ್ತಿ, ಸ್ವಾಸ್ಥ್ಯ ಪ್ರಸರಣದ ಅತ್ಯದ್ಭುತ ದೂರದೃಷ್ಟಿಯಿದೆ. ಇಂತಹ ಅಮೂಲ್ಯ ಜ್ಞಾನ ಕೌಶಲ್ಯಗಳಿಂದ ತುಂಬಿ ತುಳುಕುತ್ತಿರುವುದರಿಂದಲೇ ಆಯುರ್ವೆದ ಎಂದೆಂದಿಗೂ ಉಪಯುಕ್ತವಾಗಿ ಉಳಿದಿದೆ.

ಮೂಗಿನ ಮೂವತ್ನಾಲ್ಕು ವ್ಯಾಧಿಗಳನ್ನು ವಿವರಿಸಿರುವ ಆಯುರ್ವೆದವು ಮೂಗಿನ ರೋಗ ಬರಲು ಮೂವತ್ತೈದು ಸಾಮಾನ್ಯ ಕಾರಣಗಳನ್ನು ಬೊಟ್ಟು ಮಾಡಿ ಹೇಳಿದೆ ! ದೇಹದ ಸಹಜ ವೇಗಗಳನ್ನು ತಡೆಯುವುದು, ಅಜೀರ್ಣ, ಧೂಳಿನ ಸೇವನೆ, ಅತಿಯಾದ ಮಾತು, ಅಸಂಬದ್ಧ ಮಾತು, ಏರುದನಿಯಲ್ಲಿ ಮಾತನಾಡುವುದು, ಕೋಪ, ಕಾಲದ ವೈಪರೀತ್ಯ, ಕಾಲಕ್ಕೆ ವಿರುದ್ಧವಾದ ಆಹಾರ ಸೇವಿಸುವುದು, ಸೂರ್ಯನ ಅತಿಬಿಸಿಲಿಗೆ ತಲೆ ಒಡ್ಡುವುದು, ರಾತ್ರಿ ವೇಳೆ ಮಲಗದೆ ಇರುವುದು, ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದು, ತಂಪಾದ ನೀರು, ಹಣ್ಣಿನ ರಸಗಳ ಸೇವನೆ, ಮಂಜು, ಇಬ್ಬನಿ ಹಾಗೂ ತೇವಯುಕ್ತ ಗಾಳಿಗೆ ಮೈಯೊಡ್ಡುವುದು, ಅತಿಯಾದ ಲೈಂಗಿಕ ಕ್ರಿಯೆ, ಅಹಿತಕರ ಆವಿ/ಹಬೆ ಸೇವನೆ, ಹೊಗೆ ಸೇವನೆ, ತಲೆಯನ್ನು ಎತ್ತರಿಸಿ ಮಲಗುವುದು, ತಲೆಯನ್ನು ಕೆಳಕ್ಕೆ ಬಾಗಿಸಿ ಮಲಗುವುದು, ಪ್ರವಾಸದಿಂದ ಆಗುವ ಹವಾಮಾನ ಬದಲಾವಣೆ, ತಲೆಗೆ ಅಥವಾ ಮೂಗಿಗೆ ಆಗುವ ಆಘಾತ ಹಾಗೂ ಹೊಡೆತ, ರೋಗಕಾರಕ ಕ್ರಿಮಿಗಳಿರುವ, ಸ್ವಚ್ಛವಿಲ್ಲದ ನೀರಿಗೆ ಧುಮುಕುವುದು, ವಿಷಕಾರೀ ಹೂವುಗಳ ವಾಸನೆಯನ್ನು ಆಘ್ರಾಣಿಸುವುದು, ಮೂಗಿಗೆ ಬೆರಳು ಹಾಕುವುದು, (ಇದರಿಂದ ಮೂಗಿನೊಳಗೆ ಬಾಹ್ಯ ವಸ್ತುಗಳು ಹೋಗುವುದರಿಂದ), ಮಿತಿಮೀರಿ ವ್ಯಾಯಾಮ ಮಾಡುವುದು, ಶೋಕ, ದೈಹಿಕ ರೋಗಗಳ ಪರಿಣಾಮ, ತೀಕ್ಷ್ಣ ದ್ರವ್ಯಗಳನ್ನು ಆಘ್ರಾಣಿಸುವುದು, ಸಮೀಪದ ಗಂಟಲಿನ ಸೋಂಕು ರೋಗಗಳು, ಬೀಜದೋಷದಿಂದ ಆನುವಂಶಿಕವಾಗಿ, ಶಿರಸ್ಸಿನ ನರದೌರ್ಬಲ್ಯ, ಪೋಷಕಾಂಶ ವಿಹೀನತೆ, ಜನ್ಮಕಾಲದ ದೋಷ - ಹೀಗೆ ವಾತಾದಿ ದೋಷಗಳು ಶಿರಸ್ಸಿನಲ್ಲಿ ಸಂಚಯವಾಗಿ ಮೂಗಿನ ರೋಗಗಳಿಗೆ ಕಾರಣವಾಗುತ್ತವೆ.

ಮುಖದ ಅಂದಕ್ಕೆ, ಶಿರದ ಚಿಕಿತ್ಸೆಗೆ, ಪರಿಮಳ ಜ್ಞಾನಕ್ಕೆ, ಉಸಿರಾಟದ ಪ್ರಥಮ ಪಥಕ್ಕೆ ಕಾರಣವಾದ ನಾಸಾದ ಸ್ವಾಸ್ಥ್ಯ ಹಾಗೂ ರಕ್ಷಣೆ ನಮ್ಮ ಮೂಗಿನ ನೇರದಲ್ಲಿದೆ!

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net