

ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಬಹಳವಾಗಿ ವ್ಯಾಪಿಸುತ್ತಿದೆ. ಜೀವನ ಶೈಲಿಯನ್ನಾದರಿಸಿರುವ ಬಹುತೇಕ ಕ್ಯಾನ್ಸರ್ ಗುಣಪಡಿಸುವಂಥದಾಗಿದ್ದು, ಆರಂಭದಲ್ಲೇ ಪತ್ತೆ ಹಚ್ಚುವ ಅಗತ್ಯವಿದೆ.
ತಂಬಾಕಿನಿಂದ ಬರುವ ಶ್ವಾಸಕೋಶ, ಬಾಯಿ, ಗಂಟಲು, ಶಿರ ಮತ್ತು ಕುತ್ತಿಗೆಯ ಕ್ಯಾನ್ಸರ್ಗಳನ್ನು ತಂಬಾಕು ಸೇವನೆಯಿಂದ ದೂರ ಉಳಿಯುವ ಮೂಲಕ ತಡೆಯಬಹುದು. ಮಹಿಳೆಯರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಅನ್ನು ನಿಯಮಿತ ತಪಾಸಣೆಯಿಂದ ಹಾಗೂ ಗರ್ಭಕೋಶ ಕ್ಯಾನ್ಸರ್ ಅನ್ನು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ತಡೆಯಬಹುದು.
ವ್ಯಾಯಾಮ ಸೇರಿ ಚಟುವಟಿಕೆಯುಕ್ತ ಹಾಗೂ ಆರೋಗ್ಯಕರ ಜೀವನ ಶೈಲಿಯಿಂದಲೂ ಕ್ಯಾನ್ಸರ್ ಬಾರದಂತೆ ಎಚ್ಚರ ವಹಿಸಬಹುದು. ಎಲ್ಲ ರೋಗ ಲಕ್ಷಣಗಳು ಕ್ಯಾನ್ಸರ್ ಅಲ್ಲ. ಆದರೆ, ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಅಂಥ ಲಕ್ಷಣಗಳು ಕಾಣಿಸಿದಲ್ಲಿ ಕೂಡಲೆ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸಕಾಲಕ್ಕೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣ ಹೊಂದಬಹುದು.