

Single | ಕೆಲವರು ತಮ್ಮ ಸ್ನೇಹಿತರು ಹಾಗೂ ಗುಂಪಿನೊಂದಿಗೆ ಹೆಚ್ಚಿನ ಸಮಯ ಕಳೆಯುವ ಮನೋಭಾವನೆ ಹೊಂದಿರುತ್ತಾರೆ. ಅದೇ ಇನ್ನೂ ಸ್ವಲ್ಪ ಜನರು ಯಾರೊಂದಿಗೂ ಬೆರೆಯದೇ ಸದಾ ಏಕಾಂಗಿಯಾಗಿಯೇ ಇರಲು ಇಷ್ಟ ಪಡುತ್ತಾರೆ. ಆದರೆ ಈ ಒಂಟಿತನ ಆರೋಗ್ಯದ ಮೇಲೆ ನೇರ ಪರಿಣಾಮ ಬೇರಲಿದೆ ಎಂದು ಹೇಳಲಾಗಿದ್ದು, ದಿನಕ್ಕೆ 15 ಸಿಗರೇಟ್ ಸೇವಿಸಿದ ಪರಿಣಾಮವನ್ನು ಒಂಟಿತನದಿಂದ ಅನುಭವಿಸಬೇಕಾಗುತ್ತದೆ ಎಂದು ಕೆಲ ತಜ್ಞರು ಹೇಳಿದ್ದಾರೆ.
ನೀವು ಯಾವಾಗಲೂ ನಿಮ್ಮ ಸ್ಮಾರ್ಟ್‌ಫೋನ್ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿರುವುದು ನಿಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದಾಗಿ ಅನೇಕ ಜನರು ನೆಮ್ಮದಿಯ ಕೊರತೆಯಿಂದ ನರಳುತ್ತಿರುತ್ತಾರೆ. ತಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಲು ಸಾಧ್ಯವಾಗದೇ ನೆಮ್ಮದಿಯಿಂದ ದೂರ ಉಳಿದಿರುತ್ತಾರೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಇದು ಹಳೆಯ ಸಮಸ್ಯೆಯಾಗಿದ್ದರೂ ಸಹ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೀರ್ಘಾವಧಿಯ ಲಾಕ್‌ಡೌನ್ ಮಾಡಿದ್ದರಿಂದ ಲಕ್ಷಾಂತರ ಜನರು ಒಂಟಿ ತನಕ್ಕೆ ದಾಸರಾಗಿದ್ದಾರೆ. ನೀವು ಅಂದುಕೊಂಡಂತೆ ಏನೂ ಆಗದಿದ್ದಾಗ ನಿಮಗೆ ಒಂಟಿತನ ಆವರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿಮ್ಮ ಸಂಬಂಧಗಳನ್ನು ಇತರರೊಂದಿಗೆ ಹೋಲಿಸಿದಾಗ ಮತ್ತು ನಿಮ್ಮ ಸ್ನೇಹ ಅಷ್ಟೊಂದು ಯಾರಿಗೂ ಬಲವಾಗಿಲ್ಲ ಎಂದು ಭಾವಿಸಿದಾಗ ಇದು ಸಂಭವಿಸುತ್ತದೆ ಎನ್ನಲಾಗಿದೆ. ಆದರೆ ಒಬ್ಬಂಟಿಯಾಗಿರುವುದು ಸ್ವಲ್ಪ ಭಿನ್ನವಾಗಿರುತ್ತದೆ. ಏಕೆಂದರೆ ಸಾಮಾನ್ಯವಾಗಿ ಸ್ವಲ್ಪ ಸಮಯದವರೆಗೆ ಒಂಟಿಯಾಗಿರುವುದು ಶಾಂತಿ ಮತ್ತು ಸೌಹಾರ್ದತೆ ಹಾಗೂ ಅರಿವಿನ ಭಾವನೆಯನ್ನು ಮೂಡಿಸುತ್ತದೆ.
ಈ ಬಗ್ಗೆ ಯುಕೆ ಡರ್ಹಾಮ್ ವಿಶ್ವವಿದ್ಯಾಲಯದ ಮನೋವಿಜ್ಞಾನದ ಅಸೋಸಿಯೇಟ್ ಪ್ರೊಫೆಸರ್ ಥುಯ್ ವೈನ್ಗುಯೆನ್ ಮಾತನಾಡಿದ್ದು, ಒಬ್ಬಂಟಿಯಾಗಿರುವುದು ಎಂದರೆ ಇತರರೊಂದಿಗೆ ಮಾತನಾಡದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯಾರೊಂದಿಗೂ ಸಂವಹನ ನಡೆಸದೆ ಏಕಾಂಗಿಯಾಗಿ ಸಮಯ ಕಳೆಯುವುದು ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಾಲ್ಕು ಹಿರಿಯ ನಾಗರಿಕರಲ್ಲಿ ಒಬ್ಬರು ಸಾಮಾಜಿಕವಾಗಿ ಪ್ರತ್ಯೇಕತೆಯನ್ನು ಅನುಭವಿಸುತ್ತಾರೆ. ಅದೇ ರೀತಿ ಶೇಕಡಾ 5 ರಿಂದ 15 ರಷ್ಟು ಹದಿಹರೆಯದವರು ಸಹ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಕೆಲವು ನಿರ್ದಿಷ್ಟ ಗುಂಪುಗಳು, ಅವರ ವಯಸ್ಸು ಎಷ್ಟೇ ಇದ್ದರೂ ಒಂಟಿತನದ ಅಪಾಯ ಹೆಚ್ಚಾಗಿರುತ್ತದೆ. ವಲಸಿಗರು, ಅಲ್ಪಸಂಖ್ಯಾತ ಜನರು, ನಿರಾಶ್ರಿತರು, ಮತ್ತು ಆರೋಗ್ಯ ಸಮಸ್ಯೆಗಳಿರುವ ಜನರು ಹೆಚ್ಚು ಒಂಟಿತನ ಅನುಭವಿಸುತ್ತಾರೆ.
ಒಂಟಿತನ ನಿಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮವನ್ನುಂಟು ಮಾಡುತ್ತದೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಒಂಟಿತನವು ಹೃದ್ರೋಗ, ಪಾರ್ಶ್ವವಾಯು ಮೆದುಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಗೊತ್ತಾಗಿದೆ. ಒಂಟಿತನವು ಖಿನ್ನತೆ, ಆತಂಕ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಗ್‌ಫೀಲ್ಡ್ ಹೇಳುತ್ತಾರೆ. ಇದಕ್ಕೆ ನಾನಾ ಉದಾಹರಣೆಗಳು ಸಹ ದೊರೆತಿವೆ. ಆದಾಗ್ಯೂ ಒಂಟಿತನವು ಆರೋಗ್ಯಕ್ಕೆ ಏಕೆ ಹಾನಿ ಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಒಂಟಿತನವು ದೇಹದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ ಮತ್ತು ಮಾನಸಿಕ ಕಾರ್ಯವನ್ನು ಕಡಿಮೆ ಮಾಡುತ್ತದೆ.
ಒಂಟಿತನವನ್ನು ಕಡಿಮೆ ಮಾಡಲು ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಲಾಗ್ತಾ ಇದೆ. ಸಮುದಾಯ ಕೇಂದ್ರಗಳು ಅಥವಾ ವಸತಿ ಪ್ರದೇಶಗಳಂತಹ ಸ್ಥಳಗಳಲ್ಲಿ ವೃದ್ಧರು ಮತ್ತು ಯುವಕರು ಒಟ್ಟಿಗೆ ಸಮಯ ಕಳೆಯಲು ಅವರು ಪ್ರೋತ್ಸಾಹಿಸುತ್ತಿದ್ದಾರೆ.
ಹಾಂಗ್ ಕಾಂಗ್‌ನಲ್ಲಿ 375 ಸ್ವಯಂಸೇವಕರ ಮೇಲೆ ನಡೆಸಿದ ಅಧ್ಯಯನವು ನಿಮ್ಮ ಬಿಡುವಿನ ವೇಳೆಯನ್ನು ನೀವು ಆನಂದಿಸುವ ಕೆಲಸವನ್ನು ಮಾಡುವುದರಿಂದ ಒಂಟಿತನವನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದೆ. ಇದು ವಿಶೇಷವಾಗಿ ವಯಸ್ಸಾದವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಇತ್ತೀಚೆಗೆ ಅನೇಕ ದೇಶಗಳಲ್ಲಿನ ಸರ್ಕಾರಗಳು ಒಂಟಿತನ ಅಥವಾ ಪ್ರತ್ಯೇಕತೆಯನ್ನು ಎದುರಿಸಲು ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿವೆ. ಆರೋಗ್ಯ ರಕ್ಷಣೆ, ಸಾಮಾಜಿಕ ಸೇವೆಗಳು ಮತ್ತು ಆರ್ಥಿಕತೆಯ ಮೇಲೆ ಬಹಳಷ್ಟು ಹಣವನ್ನು ಖರ್ಚು ಮಾಡುತ್ತಿದೆ.