ನವರಾತ್ರಿ ವೈಭವ : ಕಾತ್ಯಾಯನೀ ದೇವಿ

Katyayani devi
Published on

ಎಚ್.ವಿ.ದೀಪಕ್ ನರಸಿಂಹ

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |

ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ||

ದಾನವ ಮಹಿಷಾಸುರನ ಅತ್ಯಾಚಾರ ಮಿತಿಮೀರಿದಾಗ, ಬ್ರಹ್ಮ-ವಿಷ್ಣು-ಮಹೇಶ್ವರರು ಮತ್ತು ಎಲ್ಲ ದೇವತೆಗಳೂ ತಮ್ಮ ತೇಜದ ಅಂಶವನ್ನಿತ್ತು ಓರ್ವ ದೇವಿಯನ್ನು ಉತ್ಪನ್ನ ಮಾಡಿದರು. ಮಹರ್ಷಿ ಕಾತ್ಯಾಯನರು ಈ ದೇವಿಗೆ ಪೂಜೆ ಮಾಡಿದ ಕಾರಣ, ಇವಳು ಕಾತ್ಯಾಯನೀ ಎಂದು ಕರೆಯಲ್ಪಟ್ಟಳು. ಭವ್ಯ ಹಾಗೂ ದಿವ್ಯಸ್ವರೂಪಳಾದ ಇವಳು ಬಂಗಾರದ ಬಣ್ಣದವಳೂ, ನಾಲ್ಕು ಭುಜದವಳೂ ಆಗಿದ್ದಾಳೆ. ಒಂದು ಕೈಯಲ್ಲಿ ಕಮಲ, ಇನ್ನೊಂದರಲ್ಲಿ ಖಡ್ಗ ಹಿಡಿದಿದ್ದಾಳೆ. ಈಕೆಗೆ ಚಾಮುಂಡೇಶ್ವರಿ, ಮಹಿಷಾಸುರಮರ್ದಿನಿ ಎಂದೂ ಹೆಸರಿದೆ. ಈ ಆರನೆಯ ದಿನ ಸಾಧಕನು ಮನಸ್ಸನ್ನು ‘ಆಜ್ಞಾ’ ಚಕ್ರದಲ್ಲಿ ನೆಲೆಸುತ್ತಾನೆ. ಬ್ರಹ್ಮಾಂಡದ ಭೌತಿಕ ಛಾಯಾರೂಪದ ಸಿದ್ಧಾಂತವನ್ನು ಮೂರನೇ ಕಣ್ಣಿನಿಂದ ನೋಡಲು ಸಹಕರಿಸುವ ವಿಶಿಷ್ಟ ಚಕ್ರ. ಈ ಚಕ್ರ ಶಿರಸ್ಸಿನ ಫೀನಲ್ ಗ್ರಂಥಿಯ ಮುಂಭಾಗದಲ್ಲಿ ಸ್ಥಿರಪಟ್ಟಿದೆ. ಧ್ಯಾನ, ಜ್ಞಾನ, ಕರ್ಮ ಮತ್ತು ಭಕ್ತಿಯೋಗಗಳಿಂದ ಈ ಚಕ್ರದ ಫಲ ದೊರೆಯುತ್ತದೆ. ಮೈಸೂರಿನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ.

ಕಾತ್ಯಾಯನೀ ಕವಚ

ಕಾತ್ಯಾಯನೌಮುಖ ಪಾತು ಕಾಂ ಸ್ವಾಹಸ್ವರೂಪಿಣಿ

ಲಲಾಟೆ ವಿಜಯಾ ಪಾತು ಮಾಲಿನಿ ನಿತ್ಯ ಸುಂದರಿ

ಕಲ್ಯಾಣಿ ಹೃದಯಂ ಪಾತು ಜಯ ಭಾಗಮಾಲಿನಿ

ಮಂತ್ರ: ಓಂ ದೇವೀ ಕಾತ್ಯಾಯನ್ನೈ ನಮಃ

ಮಹಾಷಷ್ಠಿಯಂದು ಕದಂಬ ಪುಷ್ಪದಿಂದ ಮಾಡುವಂಥ ಕಾತ್ಯಾಯನೀ ಪೂಜೆ ಬಹಳ ಮಹತ್ವವಾದುದು. ನವರಾತ್ರಿಯ ಕೊನೆಯ ಮೂರನೇ ದಿನ ಮಾಡುವ ಮಹಾಲಕ್ಷಿ್ಮೕ ಪೂಜೆಯನ್ನೂ ಈ ದಿನದಂದು ಮಾಡಲಾಗುತ್ತದೆ. ಕಾತ್ಯಾಯನೀ ದೇವಿಯ ಪೂಜೆಯಿಂದ ವ್ಯಕ್ತಿ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾನೆ. ದೇವಿಯನ್ನು ಭಕ್ತಿಭಾವದಿಂದ ಪೂಜಿಸಿದರೆ ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ. ಜೊತೆಗೆ ಕುಟುಂಬದಲ್ಲಿಯೂ ಸೌಹಾರ್ದ ನೆಲೆಸುವುದು.

ದೈವದ ಕೃಪಾಕಟಾಕ್ಷಕ್ಕೆ ಭಕ್ತಿಮಾರ್ಗದಲ್ಲಿ ಆರನೆಯದ್ದು ‘ವಂದನೆ’. ಭಗವಂತನ ಮಹಿಮೆಗಳನ್ನು ಮನಸ್ಸಿನಲ್ಲಿ ಧಾರಣೆ ಮಾಡಿಕೊಂಡು, ಅವನನ್ನು ಸ್ತುತಿಸುತ್ತ, ವಿನಮ್ರನಾಗಿ, ಆ ಸ್ವಾಮಿಗೆ ಪ್ರಣಾಮವನ್ನು ಮಾಡುವುದೇ ‘ವಂದನ ಭಕ್ತಿ’. ಭಗವನ್ನಾಮವನ್ನು ಸಂಕೀರ್ತನೆ ಮಾಡುವ ಸಮಯದಲ್ಲಿ, ಭಕ್ತನ ಹೃದಯದಿಂದ, ಭಕ್ತಿಪ್ರವಾಹವು ಉಕ್ಕಿ ಹರಿಯುವುದು ಸಹಜವೇ ಆಗಿದೆ. ಆಗ ಭಕ್ತನು ಆ ಭಾವಾವೇಶಕ್ಕೆ ಒಳಗಾಗಿ, ತನ್ಮಯತ್ವ ಹೊಂದಿ, ನೃತ್ಯ ಮಾಡುವನು.

ಆಳ್ವಾರರು ಭಗವನ್ನಾಮ ಸಂಕೀರ್ತನೆ ಮಾಡುತ್ತ, ಆತನಿಗೆ ನಮಸ್ಕರಿಸಿ, ನೃತ್ಯವನ್ನು ಮಾಡುತ್ತ, ಉನ್ಮತ್ತರಂತೆ, ಭಗವಂತನನ್ನು ಕುರಿತು ವಿಲಪಿಸುತ್ತ ಇರುತ್ತಾರೆಂದೂ, ಮತ್ತೊಂದು ಸಲ ಈ ರೀತಿಯಲ್ಲೆ ಬ್ರಹ್ಮಾನಂದವನ್ನು ಪಡೆಯುತ್ತಿದ್ದರೆಂದೂ ಅವರ ದಿವ್ಯಪ್ರಬಂಧಗಳಿಂದ ನಮಗೆ ತಿಳಿದು ಬರುತ್ತದೆ.

‘ಭಗವಂತನನ್ನು ಸಹಸ್ರನಾಮದೊಂದಿಗೆ ಸ್ಮರಿಸಿ, ಕೈಗಳನ್ನು ಜೋಡಿಸಿ. ಆ ಸ್ವಾಮಿಗೆ ವಂದನೆಯನ್ನು ಅರ್ಪಿಸುವ ಭಕ್ತರಿಗೆ ಎಂದಿಗೂ ನರಕವು ಪ್ರಾಪ್ತವಾಗುವುದಿಲ್ಲ. ಅಂತಹವರಿಗೆ ಯಾವ ವಿಧವಾದ ಕಷ್ಟವೂ, ಕ್ಲೇಶವೂ ಉಂಟಾಗಲಾರದು. ಅಂತಹ ಭಕ್ತರು ಭಕ್ತಿಮಾರ್ಗದ ವಿನಹ ಬೇರೆ ಮಾರ್ಗವನ್ನು ಅನುಸರಿಸಲೊಲ್ಲರು!’ ಎಂದು ಪೊಯ್ ಹೈ ಆಳ್ವಾರರು ವಂದನಭಕ್ತಿಯನ್ನು ಅನೇಕ ರೀತಿಗಳಲ್ಲಿ (ಮೊದಲ್ ತಿರುವಂದಾದಿ - 65) ಕೊಂಡಾಡಿದ್ದಾರೆ.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net