

ಎಚ್.ವಿ. ದೀಪಕ್ ನರಸಿಂಹ
ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ||
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ |
ವರ್ಧನಮೂರ್ಧ್ವಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||
ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದುರ್ಗಾಮಾತೆಯ ಅತ್ಯಂತ ರೌದ್ರಾವತಾರ ಇದು. ಶುಂಭ, ನಿಶುಂಭರೆಂಬ ರಾಕ್ಷಸರನ್ನು ಸಂಹರಿಸಲು ದುರ್ಗೆ ಈ ಅವತಾರ ಎತ್ತಿದ್ದಳು. ಕಾಲರಾತ್ರಿ ಅಂದರೆ ಸಾವಿನ ರಾತ್ರಿ. ಈಕೆ ಸಮಯದ ಸಂಹತ್ರ್ರೆಯೂ ಹೌದು. ಇವಳ ಶರೀರವು ದಟ್ಟಕಪು್ಪ, ಬಿಚ್ಚಿ ಹರಡಿದ ತಲೆಕೂದಲು, ಕತ್ತಲಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಮೂರು ಕಣ್ಣುಗಳಿವೆ. ಇವಳ ಉಚ್ಛಾಸ-ನಿಃಚ್ಛಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಡುತ್ತವೆ ಮತ್ತು ಇವಳ ವಾಹನ ಕತ್ತೆಯಾಗಿದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಇವಳು ನೋಡಲು ಭಯಂಕರವಾದರೂ, ಯಾವಾಗಲೂ ಶುಭ ಫಲವನ್ನೇ ಕೊಡುವವಳಾದ್ದರಿಂದ ಶುಭಂಕರೀ ಎಂದೂ ಕರೆಯಲ್ಪಡುತ್ತಾಳೆ. ಈ ದಿನ ಸಾಧಕನ ಮನಸ್ಸು ‘ಸಹಸ್ರಾರ’ ಚಕ್ರದಲ್ಲಿ ಲೀನವಾಗುತ್ತದೆ. ಸಹಸ್ರಾರ ಚಕ್ರ ತಲೆ ಹಾಗೂ ಮಿದುಳಿನ ಮೇಲಿರುತ್ತದೆ. ಇದರ ಬಣ್ಣ ನೇರಳೆ. ಇದು ದೇವರು ಹಾಗೂ ಪ್ರಜ್ಞಾಶಕ್ತಿಯ ಕಾರಣಕರ್ತ. ಬೌದ್ಧಧರ್ಮದಲ್ಲಿ ಹೇಳುವ ನಿರ್ವಾಣ ಅವಸ್ಥೆ ತಲುಪಲು ಈ ಚಕ್ರ ಜಾಗೃತವಾಗುವುದು ಅಗತ್ಯ. ಕಾಲರಾತ್ರಿ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ವಾರಾಣಸಿಯಲ್ಲಿದೆ.
ಕಾಲರಾತ್ರಿ ಕವಚ
ಓಂ ಕ್ಲಿ ಮೇ ಹೃದಯಂ ಪಾತು ಪಾದೌ ಶ್ರೀಕಾಲರಾತ್ರಿ
ಲಲಾಟೆ ಸತತಂ ಪಾತು ತುಷ್ಟಗ್ರಹ ನಿವಾರಿಣಿ
ರಸನಾನಂ ಪಾತು ಕೌಮಾರಿ, ಭೈರವಿ ಚಕ್ಷುಶೋರ್ಭಮ
ಕಟೌ ಪ್ರಿಶ್ಠೆ ಮಹೇಶಾನಿ, ಕರ್ಣೌಶಂಕರಾಭಾಮಿನಿ
ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನ ಹೀ
ತನಿ ಸರ್ವಾಣಿ ಮೇ ದೇವಿಸತತಂಪಾತು ಸ್ಥಾಂಭಿನಿ
ಮಂತ್ರ : ಓಂ ದೇವೀ ಕಾಲರಾತ್ರೈ ನಮಃ
ಕಾಲರಾತ್ರಿಯನ್ನು ಏಳನೇ ದಿನದಂದು ರಾತ್ರಿ ಅರಳುವ ಮಲ್ಲಿಗೆ ಹೂವಿನಿಂದ ಪೂಜಿಸುವುದರಿಂದ ಸರ್ವಭಯವೂ ನಿವಾರಣೆಯಾಗುವುದು. ವ್ಯಕ್ತಿಯ ಶ್ರೋಯೋಭಿವೃದ್ಧಿಯಲ್ಲಿ ಕಾಣಿಸಿಕೊಳ್ಳುವ ಎಲ್ಲ ತೊಂದರೆಗಳೂ ನಿವಾರಣೆಯಾಗುವುದು ಹಾಗೂ ಸರ್ವರೋಗಗಳಿಂದ ಮುಕ್ತಿ ಸಿಗುವುದು. ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವವಳು ಕಾಲರಾತ್ರಿ.
ದೈವದ ಕೃಪಾಕಟಾಕ್ಷಕ್ಕೆ ಭಕ್ತಿಮಾರ್ಗದಲ್ಲಿ 7ನೇ ವಿಧ ದಾಸ್ಯ. ಭಕ್ತರು ಭಗವದಾಜ್ಞೆಯನ್ನು, ಶಿಷ್ಯರು ಗುರುವಿನ ಅಣತಿಯನ್ನು ಸಕ್ರಮವಾಗಿ ಪಾಲಿಸುವುದೇ ‘ದಾಸ್ಯಭಕ್ತಿ’. ದಯಾಸಮುದ್ರನಾದ ಭಗವಂತನನ್ನು ತನ್ನ ಸ್ವಾಮಿ, ತಂದೆ, ಗುರುವಾಗಿ ಭಾವಿಸುವ ಭಕ್ತರು ತಮ್ಮ ಅಜ್ಞಾತ, ದೈನ್ಯ, ದುರ್ಗಣ, ದೋಷಗಳನ್ನು ಆ ಪರಮಾತ್ಮನಲ್ಲಿ ನಿವೇದಿಸಿಕೊಂಡು, ತಮ್ಮನ್ನು ರಕ್ಷಿಸಬೇಕೆಂದು ಅನೇಕ ರೀತಿಗಳಲ್ಲಿ ಪ್ರಾರ್ಥಿಸುವರು. ಭಗವನ್ನಾಮಗಳನ್ನು ಪರಿಪೂರ್ಣವಾಗಿ ಗ್ರಹಿಸಿ, ಆ ಸ್ವಾಮಿಯ ಸಾನ್ನಿಧ್ಯದಲ್ಲಿ ತಮ್ಮ ಅನನ್ಯಾಶ್ರಮ ಪ್ರವೃತ್ತಿಯನ್ನು ಪ್ರಕಟಿಸಿ, ಅನೇಕ ರೀತಿಗಳಲ್ಲಿ ಆತನ ಕಲ್ಯಾಣಗುಣಗಳನ್ನು ಸ್ಮರಿಸುತ್ತ, ಆ ಪರಾತ್ಪರನ ಕೃಪಾಕಟಾಕ್ಷವನ್ನು ಹೊಂದುವುದಕ್ಕೆ ನಿರಂತರವಾಗಿ ಪರಿತಪಿಸುವರು.
ಆಳ್ವಾರರಲ್ಲಿ ಕೆಲವರು ಇಂತಹ ದಾಸ್ಯಭಕ್ತಿಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಅವರ ಪಾಶುರಗಳಲ್ಲಿ ಸ್ವಯಂಕೃತ ಅಪರಾಧಗಳ ಪ್ರಕಟಣೆ, ವಿನಯ, ಯಾಚನೆ, ದೈನ್ಯ, ಆತ್ಮಸಮರ್ಪಣ, ಭಗವದನುಭೂತಿ ಇತ್ಯಾದಿ ಭಾವನೆಗಳು ದಾಸ್ಯಭಕ್ತಿಗೆ ಅಂಗಗಳಾಗಿ ಹೆಸರಸಲಾಗಿದೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)