

ಭೋಜನವು ಎಲ್ಲಾ ಆರು ರುಚಿಗಳಿಂದ ಕೂಡಿರಬೇಕು, ಆಗಲೇ ದೇಹಕ್ಕೆ ಪರಿಪೂರ್ಣವಾದ ಪೋಷಣೆ ಸಾಧ್ಯ ಎನ್ನುತ್ತದೆ ಆಯುರ್ವೆದ. ಸಿಹಿ, ಜಿಡ್ಡಿನಿಂದ ಕೂಡಿದ ಎಣ್ಣೆ, ತುಪ್ಪ, ಬೆಣ್ಣೆ, ಹಾಲು, ಮೊದಲಾದ ಸ್ನಿಗ್ಧ ದ್ರವ್ಯಗಳಿಂದ ಕೂಡಿದ ಆಹಾರವನ್ನು ನಾನಾ ಕಾರಣಗಳಿಂದ ಕೆಲವರು ದೂರವಿಟ್ಟಿರುತ್ತಾರೆ. ಸಿಹಿ ತಿಂದರೆ ಮಧುಮೇಹ ಬರುತ್ತದೆಂಬ ಭಯ ಕೆಲವರಿಗೆ. ಜಿಡ್ಡಿನ ಅಂಶಗಳ ಪದಾರ್ಥಗಳ ಬಳಕೆಯಿಂದ ಬೊಜ್ಜು ಬರುವ ಆತಂಕ ಹಲವರಿಗೆ ಇರುತ್ತದೆ. ತುಪ್ಪ, ಎಣ್ಣೆ, ಬೆಣ್ಣೆಗಳ ಬಳಕೆಯಿಂದ ಹೃದಯದ ಕಾಯಿಲೆ ಬಂದರೆ ಎಂಬ ಭೀತಿ ಇನ್ನು ಹಲವರಲ್ಲಿರುತ್ತದೆ. ಹಾಲು ಕುಡಿದರೆ ದಪ್ಪವಾಗುತ್ತೇವೆ, ಅದು ಬಿಳಿ ವಿಷ ಎಂದು ಭಯ ಪಡುವವರೂ ಇದ್ದಾರೆ. ಹೀಗೆ ದೇಹಕ್ಕೆ ಯಾವುದು ಸ್ನಿಗ್ಧತೆಯನ್ನು, ತೇವಾಂಶವನ್ನು ನೀಡುತ್ತದೋ ಅವನ್ನೆಲ್ಲಾ ಸಂಪೂರ್ಣವಾಗಿ ಬಿಟ್ಟುಬಿಡುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ! ಒಣ ಆಹಾರದಿಂದ ಶರೀರದಲ್ಲಿರುವ ವಾತವೆಂಬ ಕ್ರಿಯಾಭಾಗ ಅಗತ್ಯಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡಾಗ ಅದು ಅನೇಕ ರೋಗ ಗಳಿಗೆ ಎಡೆ ಮಾಡಿಕೊಡುತ್ತದೆ.
ಉದಾವರ್ತ ಎಂದರೇನು?: ವಾತವು ಪ್ರಕೋಪಗೊಂಡು ಉಂಟಾಗುವ ತೊಂದರೆಗಳಲ್ಲಿ ಉದಾವರ್ತವೂ ಒಂದು. ದೇಹದಲ್ಲಿರುವ ವಾತಕ್ಕೆ ವಿವಿಧ ಗತಿಗಳಿರುತ್ತವೆ. ಬಾಯಿಯಿಂದ ಮೊದಲ್ಗೊಂಡು ಗುದದ ತನಕ ಇರುವ ಜೀರ್ಣಾಂಗಗಳಲ್ಲಿ ವಾತವು ಕೆಳಮುಖ ವಾಗಿ ಚಲಿಸುವುದು ಸಹಜವಾದ ಪ್ರಕ್ರಿಯೆ. ನಾವು ಸೇವಿಸಿದ ಆಹಾರವನ್ನು ಜೀರ್ಣಿಸುತ್ತಾ ಅನ್ನನಾಳ, ಉದರ, ಸಣ್ಣಕರುಳು, ದೊಡ್ಡ ಕರುಳುಗಳನ್ನೆಲ್ಲಾ ದಾಟಿ ಗುದದ ತನಕ ಸಾಗಿ ಮಲವಾಗಿ ವಿಸರ್ಜಿಸಲ್ಪಡುತ್ತದೆ. ಈ ವಾತವು ಮೇಲ್ಮುಖವಾಗಿ ಚಲನೆಯನ್ನು ಪಡೆದುಕೊಂಡರೆ ಅದು ಸ್ವಾಭಾವಿಕ ಪ್ರಕೃತಿಯಲ್ಲ ವಿಕೃತಿ. ಇದ ರಿಂದ ಮಲಮೂತ್ರಾದಿಗಳು ಅಲ್ಲೆ ತಡೆಯಲ್ಪಟ್ಟು ಚಲನೆ ಇಲ್ಲದೆ ಮಲಬದ್ಧತೆಯನ್ನು ಉಂಟುಮಾಡುತ್ತದೆ. ಉದರದಲ್ಲೂ ಆಹಾರಕ್ಕೆ ತಡೆ ಆಗುವುದಿದೆ. ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಹೊಟ್ಟೆ ಯುಬ್ಬರ ಉಂಟಾಗುತ್ತದೆ. ಹೀಗೆ ವಾತದ ಊರ್ಧ್ವಗತಿ ಯಿಂದಾಗುವ ತಡೆ ಹಾಗೂ ತೊಂದರೆಗೆ ಉದಾವರ್ತ ಎನ್ನಲಾಗುತ್ತದೆ.
ಆಯುರ್ವೆದದಲ್ಲಿ ಹೇಳಲಾದ 13 ವಿಧದ ಅಧಾರಣೀಯ ವೇಗಗಳನ್ನು ತಡೆಯುವುದರಿಂದಲೂ ಈ ಉದಾವರ್ತ ಬೇಗನೆ ಕಾಣಿಸಿಕೊಳ್ಳುತ್ತದೆ. ಅಪಾನವಾತವನ್ನು ತಡೆಯುವುದರಿಂದ ಅಪಾನವಾತ ನಿರೋಧಜ ಉದಾವರ್ತ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಉಬ್ಬರ, ಮಲ ಮೂತ್ರಗಳ ಸಮರ್ಪಕ ವಿಸರ್ಜನೆ ಆಗದೆ ಹೊಟ್ಟೆನೋವು ಉಂಟಾಗುವುದು. ಮಲಮೂತ್ರವನ್ನು ತಡೆಯುವದರಿಂದ ಮಲದ ದುರ್ಗಂಧದಿಂದ ಕೂಡಿದ ಉಸಿರಾಟ, ಹೊಟ್ಟೆಯಲ್ಲಿ ವಿವಿಧ ಶಬ್ದಗಳು, ಹೊಟ್ಟೆನೋವು, ಗುದದಲ್ಲಿ ತುಂಡರಿಸಿದಂತಹ ನೋವು, ಮಲಬದ್ಧತೆಯಾಗುತ್ತದೆ. ಮೂತ್ರತಡೆಯ ಉದಾವರ್ತದಿಂದ ಮೂತ್ರಾಶಯ, ಮೂತ್ರನಾಳಗಳಲ್ಲಿ ನೋವು, ಕಷ್ಟಕರ ಮೂತ್ರ ಪ್ರವೃತ್ತಿ, ತಲೆನೋವು, ಕೆಳಹೊಟ್ಟೆ ಉಬ್ಬರವಾಗುತ್ತದೆ. ಆಕಳಿಕೆಯನ್ನು ತಡೆದಾಗ ಕುತ್ತಿಗೆ, ಗಂಟಲು ಬಿಗಿತ, ತಲೆ ಕುತ್ತಿಗೆಯ ರೋಗಗಳು, ಬಾಯಿ, ಮೂಗು, ಕಣ್ಣುಗಳ ರೋಗಗಳಿಗೆ ದಾರಿಮಾಡುತ್ತದೆ.
ಕಣ್ಣೀರನ್ನು ತಡೆಯುವುದರಿಂದಾಗುವ ಉದಾವರ್ತದಲ್ಲಿ ತಲೆಭಾರ, ಶೀತ, ಕಣ್ಣಿನ ಕಾಯಿಲೆಗಳು ಉಂಟಾಗುತ್ತದೆ. ಸೀನು ತಡೆಯುವುದರಿಂದ ಕುತ್ತಿಗೆ ಬಿಗಿತ, ಅರೆ ತಲೆನೋವು, ಮುಖದ ಪಾರ್ಶ್ವವಾಯು, ಇಂದ್ರಿಯಗಳ ಪಟುತ್ವ ಹಾನಿಯಾಗುತ್ತದೆ. ತೇಗು ತಡೆದರೆ ಉಂಟಾಗುವ ಉದಾವರ್ತದಲ್ಲಿ ಗಂಟಲು ಬಾಯಿ ತುಂಬಿದ್ದಂತೆ ಅನುಭವ, ಹೊಟ್ಟೆಯಲ್ಲಿ ಚುಚ್ಚಿದಂತೆ ನೋವು, ಗುಡುಗುಡು ಶಬ್ದ, ಮಲಪ್ರವೃತ್ತಿ ಆಗುವುದಿಲ್ಲ. ಬಾಯಾರಿಕೆ ನಿರೋಧದಿಂದಾಗುವ ಉದಾವರ್ತದಲ್ಲಿ ಗಂಟಲು, ಬಾಯಿ ಒಣಗುವುದು, ಕಿವಿ ಕೇಳಿಸದಿರುವುದು, ಎದೆಯಲ್ಲಿ ಕಸಿವಿಸಿ ಆಗುವುದು. ಹಸಿವೆ ತಡೆದು ಉಂಟಾದ ಉದಾವರ್ತದಲ್ಲಿ ತೂಕಡಿಕೆ, ಮೈಕೈನೋವು, ಸುಸ್ತು, ಬಾಯಿರುಚಿ ಇಲ್ಲದಿರುವುದು, ಕೃಶತ್ವ ಕಾಣಿಸಿಕೊಳ್ಳುವುದು, ದೇಹ ಕ್ಷೀಣವಾಗುವುದು, ರೇತಸ್ ತಡೆದು ಬಂದ ಉದಾವರ್ತದಲ್ಲಿ ಮೂತ್ರಾಶಯ, ಗುದ, ವೃಷಣಗಳಲ್ಲಿ ಊತ, ನೋವು, ವೀರ್ಯನಾಳದಲ್ಲಿ ಕಲ್ಲು, ವೀರ್ಯಸ್ರಾವಕ್ಕೆ ತಡೆ ಉಂಟಾಗುತ್ತದೆ. ವಾಂತಿ ತಡೆದು ಉದಾವರ್ತವಾದಾಗ ಚರ್ಮರೋಗಗಳು, ನವೆ, ಗುಳ್ಳೆಗಳು, ಊತ, ಬಾಯಿರುಚಿ ಇಲ್ಲದಿರುವುದು, ಬಂಗು, ಸರ್ಪಸುತ್ತು, ರಕ್ತಹೀನತೆ, ಜ್ವರ, ವಾಕರಿಕೆ ಉಂಟಾಗುತ್ತದೆ. ಏದುಸಿರು ತಡೆಹಿಡಿದು ಉದಾವರ್ತ ಉಂಟಾದಾಗ
ಹೃದ್ರೋಗ, ಕಣ್ಣುಕತ್ತಲಾಗುವುದು, ಉದರದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಿದ್ರೆಯಿಲ್ಲದೆ ಆಗುವ ಉದಾವರ್ತದಿಂದಾಗಿ ಆಕಳಿಕೆ, ಮೈಕೈ ನೋವು, ನೇತ್ರರೋಗಗಳು, ತಲೆನೋವು, ತೂಕಡಿಕೆಯಾಗುತ್ತದೆ. ಉದರದಲ್ಲಿರುವ ವಾತ ಕುಪಿತವಾಗಿ ಉದಾವರ್ತವು ಕಾಣಿಸಿಕೊಂಡಾಗ ಎದೆ, ಮುತ್ರಾಶಯಗಳಲ್ಲಿ ನೋವು, ವಾಕರಿಕೆ, ತಳಮಳ, ಮಲಮೂತ್ರ ವಿಸರ್ಜನೆಗೆ ಕಷ್ಟವಾಗುವುದು. ಕಷ್ಟಕರ ಉಸಿರಾಟ, ಕೆಮ್ಮು, ಶೀತ, ಮೈಉರಿ, ಬಾಯಾರಿಕೆ, ಭ್ರಮೆ, ಜ್ವರ, ವಾಂತಿ ಬಿಕ್ಕಳಿಕೆ, ತಲೆನೋವು, ಮಾನಸಿಕ ಕಾಯಿಲೆಗಳು, ಕಿವಿ ಕೇಳಿಸದಿರುವುದು, ತಲೆ ಸುತ್ತುವುದು ಉಂಟಾಗುವುದು. ಈ ನಿಟ್ಟಿನಲ್ಲಿ ಉದಾವರ್ತದ ಪರಿಹಾರ ತಿಳಿದುಕೊಳ್ಳಬೇಕಾದುದು ಅಪೇಕ್ಷಣೀಯ.