Little Red Dots: ಅಪಾರವಾಗಿ ವಿಸ್ತಾರವಾದ ಬಾಹ್ಯಾಕಾಶದ ಕತ್ತಲಲ್ಲಿ, ಕಣ್ಣಿಗೆ ಮಂಜಿನಂತೆ ಕಾಣುವ ಆ ಪುಟ್ಟ ಪುಟ್ಟ ಕೆಂಪು ಚುಕ್ಕೆಗಳು ಬರೀ ಸಾಮಾನ್ಯ ಬೆಳಕಿನ ಬಿಂದುಗಳಲ್ಲ, ಅವುಗಳ ಹಿಂದೆ ಕಾಲವನ್ನೇ ನುಂಗಬಲ್ಲ ಬೃಹತ್ ಕಪ್ಪುರಂಧ್ರಗಳೇ ಅಡಗಿ ಕುಳಿತಿವೆಯೇ? ವಿಶ್ವದ ಸೃಷ್ಟಿಯ ಆದಿಯ ರಹಸ್ಯಗಳನ್ನು ತಮ್ಮೊಳಗೆ ಅಡಗಿಸಿಕೊಂಡು, ನಾಸಾದ ಅತ್ಯಾಧುನಿಕ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕಕ್ಕೆ ಸವಾಲುಸೆಡ್ಡುತಿರುವ ಈ ನಿಗೂಢ ಚುಕ್ಕೆಗಳ ಅಸಲಿ ಕಥೆ ರೋಚಕವಾಗಿದೆ.
ಜೇಮ್ಸ್ ವೆಬ್ ಟೆಲಿಸ್ಕೋಪ್ (JWST) ಬ್ರಹ್ಮಾಂಡದ ಅತ್ಯಂತ ಆಳವಾದ ಮೂಲೆಯನ್ನು ಜಾಲಾಡುತ್ತಿದ್ದಾಗ, ಹಶಿವಿನಿಂದ ಕಣ್ಣುಮಿಟುಕಿಸುವ ಈ ಪುಟ್ಟ ಕೆಂಪು ಬಣ್ಣದ ವಸ್ತುಗಳನ್ನು ಗುರುತಿಸಿತು. ವಿಜ್ಞಾನಿಗಳು ಇವುಗಳಿಗೆ 'ಲಿಟಲ್ ರೆಡ್ ಡಾಟ್ಸ್' ಎಂದು ಹೆಸರಿಟ್ಟಿದ್ದಾರೆ. ಇವು ಬ್ರಹ್ಮಾಂಡದ ಆರಂಭಿಕ ಕಾಲದಲ್ಲೇ, ಅಂದರೆ ಕಾಲದ ಗಡಿಯೇ ಆರಂಭವಾದ ಹೊಸತರಲ್ಲಿ ಸೃಷ್ಟಿಯಾದವು, ಅಂದರೆ, ಈ ಚುಕ್ಕೆಗಳಿಂದ ಹೊರಟ ಬೆಳಕು ಕೋಟ್ಯಂತರ ಜ್ಯೋತಿರ್ವರ್ಷಗಳ ಕಾಲ ಕತ್ತಲೆಯಲ್ಲಿ ಪ್ರಯಾಣಿಸಿ ಈಗಷ್ಟೇ ಭೂಮಿಯನ್ನು ತಲುಪಿದೆ. ಅಂದರೆ ನಾವು ಇಷ್ಟು ದಿನ ನೋಡುತ್ತಿರುವುದು ಈ ಕಾಯಗಳ ಭೂತಕಾಲದ ನೆರಳನ್ನು!
ಆರಂಭದಲ್ಲಿ ಖಗೋಳ ವಿಜ್ಞಾನಿಗಳು ಇವು ಯಾವುದೋ ಹೊಸ ಗ್ಯಾಲಕ್ಸಿಗಳಿರಬಹುದು ಎಂದು ಹಗುರವಾಗಿ ಪರಿಗಣಿಸಿದ್ದರು. ಆದರೆ, ಅವುಗಳ ಬೆಳಕಿನ ತೀವ್ರತೆ ಮತ್ತು ವಿಚಿತ್ರ ಸ್ವರೂಪವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ವಿಜ್ಞಾನಿಗಳ ಮೈಯೆಲ್ಲಾ ಜುಮ್ಮೆಂದಿತು, ಈ ಕೆಂಪು ಚುಕ್ಕೆಗಳ ಕಲ್ಲೆದೆಯ ತಳದಲ್ಲಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾ ದೈತ್ಯ ಕಪ್ಪುರಂಧ್ರಗಳು ಅಡಗಿ ಕುಳಿತು ಬ್ರಹ್ಮಾಂಡದ ರಹಸ್ಯಗಳನ್ನು ನುಂಗುತ್ತಿವೆ ಎಂದು ಶಂಕಿಸಲಾಗಿದೆ.
ಕಪ್ಪುರಂಧ್ರದ ಸುತ್ತಲೂ ದಟ್ಟವಾದ ಅನಿಲ ಮತ್ತು ಧೂಳಿನ ಕಣಗಳು ಮೃತ್ಯುವಿನ ನೃತ್ಯದಂತೆ ಅತಿವೇಗವಾಗಿ ಸುತ್ತುತ್ತಿರುತ್ತವೆ. ಆ ಧೂಳಿನ ಅಬ್ಬರದಿಂದ ಹೊರಹೊಮ್ಮುವ ಅಗ್ನಿಜ್ವಾಲೆ ಮತ್ತು ಶಕ್ತಿಯೇ ಈ ವಸ್ತುಗಳನ್ನು ಕಣ್ಣಿಗೆ ಕೆಂಪು ಬಣ್ಣದಲ್ಲಿ ಗೋಚರಿಸುವಂತೆ ಮಾಡುತ್ತಿದೆ. ದಟ್ಟವಾದ ಅನಿಲದ ಮಹಾಗೋಪೆಯೊಳಗೆ ಅಡಗಿರುವ ಈ ಕಪ್ಪುರಂಧ್ರಗಳ ಅಟ್ಟಹಾಸ ಎಂಥವರಲ್ಲೂ ನಡುಕ ಹುಟ್ಟಿಸುವಂತಿದೆ.
GLIMPSE-17775 ಎಂಬ ನಿಗೂಢ ಕೆಂಪು ಚುಕ್ಕೆಯನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಮೂಲಕ ಹದ್ದಿನ ಕಣ್ಣಿನಿಂದ ಅಧ್ಯಯನ ಮಾಡಿದ ವಿಜ್ಞಾನಿಗಳು ಬರೋಬ್ಬರಿ 40ಕ್ಕೂ ಹೆಚ್ಚು ಸ್ಪೆಕ್ಟ್ರಲ್ ರೇಖೆಗಳನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಹೈಡ್ರೋಜನ್, ಆಮ್ಲಜನಕ, ಹೀಲಿಯಂ ಹಾಗೂ ಕಬ್ಬಿಣದಂತಹ ಪ್ರಮುಖ ಅಂಶಗಳ ಕುರುಹುಗಳು ಸಿಕ್ಕಿವೆ. ದಟ್ಟವಾದ ಅನಿಲದ ಪದರಗಳಿಂದ ಆವೃತವಾಗಿರುವ ಈ ವಿಸ್ಮಯಕಾರಿ ರಚನೆಯನ್ನು ವಿಜ್ಞಾನಿಗಳು ಸದ್ಯ ಬ್ಲ್ಯಾಕ್ ಹೋಲ್ ಸ್ಟಾರ್ ಮಾದರಿ ಎಂದು ಕರೆದಿದ್ದಾರೆ.
ಇದೆಲ್ಲವೂ ನಿಜಕ್ಕೂ ಕಪ್ಪುರಂಧ್ರಗಳೇ ಅಥವಾ ನಮ್ಮ ಕಲ್ಪನೆಗೂ ನಿಲುಕದ ಬೇರೆ ಯಾವುದಾದರೂ ಬೃಹತ್ ನಕ್ಷತ್ರಗಳ ಸೌಧವೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳಲ್ಲಿ ಇನ್ನೂ ಸ್ಪಷ್ಟ ಉತ್ತರವಿಲ್ಲ. ಇವುಗಳ ಹಿಂದಿನ ಸತ್ಯವನ್ನು ಶೋಧಿಸಲು ಖಗೋಳ ಲೋಕ ಹಗಲಿರುಳು ಶ್ರಮಿಸುತ್ತಿದೆ. ಬಾಹ್ಯಾಕಾಶದ ಆಳದಿಂದ ಮಿನುಗುತ್ತಾ ನಮ್ಮನ್ನು ಕರೆಯುತ್ತಿರುವ ಈ ಪುಟ್ಟ ಕೆಂಪು ಚುಕ್ಕೆಗಳು, ಸೃಷ್ಟಿಯ ಆದಿ ಹಾಗೂ ಅಡಗಿರುವ ಕಪ್ಪುರಂಧ್ರಗಳ ನಿಜರೂಪವನ್ನು ಜಗತ್ತಿಗೆ ಸಾರುವ ದಿನಗಳು ದೂರವಿಲ್ಲ! ( ಏಜೇನ್ಸಿಸ್)