ಯೋಗ ಕ್ಷೇಮ|ಕಫನಾಶಕ್ಕೆ ಸಹಕರಿಸುವ ಮುದ್ರೆಗಳು

Muthrashaya Mudra [ Kapha Nasaka Mudra]
Published on
ಕಫನಾಶಕ ಮುದ್ರೆಯ ಬಗ್ಗೆ ಮಾಹಿತಿ ತಿಳಿಸಿ. | ವರುಣ, ಪುತ್ತೂರು

ಕಿರುಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸಿ. ಹೆಬ್ಬೆರಳನ್ನು ಮಡಚಿದ ಬೆರಳ ಮೇಲೆ ಇಡಿ. ಸುಮಾರು 15 ನಿಮಿಷದಿಂದ 45 ನಿಮಿಷಗಳವರೆಗೆ ಅಭ್ಯಾಸ ಮಾಡಬಹುದು ಅಥವಾ ದಿನಕ್ಕೆ 15 ನಿಮಿಷದಂತೆ ಮೂರು ಬಾರಿ ಅಭ್ಯಾಸ ಮಾಡಿ.

ಪ್ರಯೋಜನ: ಕಫ ತೊಂದರೆಯ ನಿಯಂತ್ರಣವಾಗುತ್ತದೆ ಹಾಗೂ ಪಿತ್ತ ಅಧಿಕವಾಗುವುದು. ಚರ್ಮ, ಮಲ, ಮೂತ್ರಗಳು ಅತಿಯಾಗಿ ವಿಸರ್ಜನೆಯಾಗುತ್ತಿದ್ದರೆ ಈ ಮುದ್ರೆಯನ್ನು ಹಾಕಿದಾಗ ನಿಯಂತ್ರಣ ಸಾಧಿಸಬಹುದು. ಮೂತ್ರಪಿಂಡಗಳ ಆರೋಗ್ಯಕ್ಕೆ ಸಹಕಾರಿ. ಬಾಯಾರಿಕೆಯನ್ನು ನಿವಾರಿಸುತ್ತದೆ. ಹುಳಿರಸವಿರುವ ಹಣ್ಣುಗಳನ್ನು ತಿಂದಾಗ ಕೆಲವೊಮ್ಮೆ ಬರುವ ಗಂಟಲು ಕೆರೆತ, ಗಂಟಲು ನೋವು ಇವುಗಳ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿ. ಕೆಲವೊಮ್ಮೆ ಅನಗತ್ಯವಾಗಿ ಕಣ್ಣಿನಲ್ಲಿ ಬರುವ ನೀರಿನ ತೊಂದರೆಯನ್ನು ನಿವಾರಿಸುತ್ತದೆ. ಸ್ತ್ರೀಯರ ಮಾಸಿಕ ಅತಿಸ್ರಾವದ ಸಮಸ್ಯೆಯನ್ನು ಈ ಮುದ್ರೆಯಿಂದ ಸರಿಪಡಿಸಬಹುದು.

ಯೋಗವು ದೈಹಿಕ, ಮಾನಸಿಕ ವಿಕಸನಕ್ಕೆ ಹೇಗೆ ಸಹಕಾರಿ? | ರವಿರಾಜ್, ಹುಬ್ಬಳ್ಳಿ

ಯೋಗವು ಮೂಲತಃ ಅಧ್ಯಾತ್ಮದ ಆಧಾರ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆ. ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂಥದ್ದು. ಇದು ಆರೋಗ್ಯವಾಗಿ ಬಾಳಲು ಇರುವ ಒಂದು ವಿಜ್ಞಾನ ಮತ್ತು ಕಲೆ. ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ ಯುಜ್ ಎನ್ನುವುದರಿಂದ ಬಂದಿದ್ದು, ಒಂದುಗೂಡಿಸುವುದು ಯಾ ಸಂಯೋಜಿಸುವುದು, ಐಕ್ಯಗೊಳಿಸುವುದು ಎಂದಿದೆ. ಇದರ ಒಂದು ಭಾಗವೆಂದರೆ ಉಸಿರಾಟದ ನಿಯಂತ್ರಣ, ಸರಳ ಧ್ಯಾನ ಮತ್ತು ನಿರ್ದಿಷ್ಟ ದೈಹಿಕ ಭಂಗಿಗಳನ್ನು ಅಳವಡಿಸಿಕೊಳ್ಳುವುದು ಸೇರಿ ಆರೋಗ್ಯ ಮತ್ತು ವಿಶ್ರಾಂತಿಗಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಅಭ್ಯಾಸ ಮಾಡಲಾಗುತ್ತದೆ. ಪತಂಜಲಿ ಯೋಗವನ್ನು ಯೋಗಃ ಚಿತ್ತವೃತ್ತಿ ನಿರೋಧಃ ಎಂದು ವ್ಯಾಖ್ಯಾನಿಸಿದ್ದಾರೆ. ಇದರರ್ಥ ಯೋಗವು ಮನಸ್ಸಿನ ಏರಿಳಿತಗಳನ್ನು ತೆಗೆದು ಹಾಕುವ ಜೀವನದ ವಿಧಾನವಾಗಿದೆ. ಪತಂಜಲಿಯ ಯೋಗಸೂತ್ರಗಳಲ್ಲಿ ಅಷ್ಟಾಂಗ ಯೋಗ ಎಂದರೆ ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ವಿವರಿಸಲಾಗಿದೆ.

ದೈಹಿಕ ಮಟ್ಟದಲ್ಲಿ ವಿವಿಧ ಯೋಗ ಭಂಗಿಗಳು ಯಾ ಆಸನಗಳನ್ನು ಒಳಗೊಂಡಿದೆ. ಅದು ಸಾಮಾನ್ಯವಾಗಿ ದೇಹವನ್ನು ಆರೋಗ್ಯವಾಗಿಡಲು ಉದ್ದೇಶಿಸುತ್ತದೆ. ಮಾನಸಿಕ ತಂತ್ರಗಳಲ್ಲಿ ಉಸಿರಾಟದ ವ್ಯಾಯಾಮ ಯಾ ಪ್ರಾಣಾಯಾಮ ಮತ್ತು ಮನಸ್ಸನ್ನು ಶಿಸ್ತು ಮಾಡಲು ಧ್ಯಾನ ಇದೆ. ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಯೋಗವು ಜ್ಞಾನೋದಯದ ಸ್ಥಿತಿಯನ್ನು ಸಾಧಿಸಲು ಮನಸ್ಸು ದೇಹ ಮತ್ತು ಚೈತನ್ಯವನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.ಯೋಗವೆಂದರೆ ಶಿಸ್ತು . ನಿರಂತರ ಸಾಕ್ಷಾತ್ಕಾರದ ಆ ಸವೋಚ್ಚ ಸ್ಥಿತಿ ಸಾಧಿಸುವ ಪ್ರಯತ್ನ. ಇದನ್ನು ಗುರುಮುಖೇನವೇ ಕಲಿಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net