ಆಧುನಿಕ ಜೀವನಶೈಲಿ ಬಂಜೆತನದ ಮೂಲ: ಡಾ.ಲೀಲಾ

phone in
ಡಾ.ಲೀಲಾ ಸ್ರವಂತಿ ವೀರಾಧಿ
Published on

ಶಿವಮೊಗ್ಗ: ಯೂಟ್ರಸ್‌ನ ಸೋಂಕು, ಅಂಡಾಶಯದ ಗಾತ್ರ ಎಲ್ಲವೂ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಸಕಾಲದಲ್ಲಿ ಪರೀಕ್ಷೆ, ಸೂಕ್ತ ಚಿಕಿತ್ಸೆಯಿಂದ ಸಂತಾನೋತ್ಪತ್ತಿಗೆ ಎದುರಾಗುವ ತೊಡಕನ್ನು ನಿವಾರಿಸಿಕೊಳ್ಳಬಹುದು. ಇದು ದಾವಣಗೆರೆ ನಂಜಪ್ಪ ಆಸ್ಪತ್ರೆಯ ಸ್ತ್ರೀರೋಗ, ಲ್ಯಾಪ್ರೋಸ್ಕೊಪಿ ಶಸ್ತ್ರಚಿಕಿತ್ಸಕಿ ಡಾ. ಲೀಲಾ ಸ್ರವಂತಿ ವೀರಾಧಿ ಅವರ ಸಲಹೆ.

ಸಂತಾನೋತ್ಪತ್ತಿಯಲ್ಲಿನ ತೊಡಕುಗಳಿಗೆ ಕೇವಲ ಪತ್ನಿ ಕಾರಣ ಆಗಿರುವುದಿಲ್ಲ. ಪತಿಯಲ್ಲೂ ಸಮಸ್ಯೆ ಇರಬಹುದು. ಹೀಗಾಗಿ ಸಂತಾನೋತ್ಪತ್ತಿ ಸಮಸ್ಯೆ ಕಾಣಿಸಿಕೊಂಡರೆ ಪತಿ, ಪತ್ನಿ ಇಬ್ಬರೂ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಬಂಜೆತನಕ್ಕೆ ಪತ್ನಿಯೊಬ್ಬಳೇ ಕಾರಣ ಎಂಬ ತಪ್ಪುಗ್ರಹಿಕೆ ಬೇಡ ಎಂಬುದು ಅವರ ಖಚಿತ ನುಡಿಗಳು.
ಮಂಗಳವಾರ ‘ವಿಜಯವಾಣಿ’ ಫೋನ್‌ಇನ್‌ನಲ್ಲಿ ಪಾಲ್ಗೊಂಡು ಸ್ತ್ರೀಯರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಅವರು, ಮಹಿಳೆಯರು ಸಂಕೋಚ ತೊರೆದು ಸಮಸ್ಯೆಗಳನ್ನು ತಜ್ಞ ವೈದ್ಯರ ಬಳಿ ಹೇಳಿಕೊಳ್ಳಬೇಕು. ಸಕಾಲದಲ್ಲಿ ನಡೆಸುವ ಪರೀಕ್ಷೆ, ಪಡೆಯುವ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಆಗಬಲ್ಲದು. ಅದರಲ್ಲೂ ಮಕ್ಕಳನ್ನು ಪಡೆಯುವ ವಿಚಾರದಲ್ಲಿ ಸಮಸ್ಯೆಗಳಾದರೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಹೆಚ್ಚು ವಯಸ್ಸು, ಧೂಮಪಾನ, ಮದ್ಯಪಾನವೂ ಬಂಜೆತನಕ್ಕೆ ಕಾರಣವಾಗುತ್ತದೆ. ಇಂದು ಮಹಿಳೆಯರೂ ಮದ್ಯ ಸೇವನೆ, ಧೂಮಪಾನ ಮಾಡುವುದರಿಂದ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾದದ್ದು ಬಂಜೆತನ ಎಂದು ತಿಳಿಸಿದರು.
ಪಿಸಿಒಎಸ್(ಪಾಲಿಸಿಸ್ಟಿಕ್ ಒವರಿ ಸಿಂಡ್ರೋಮ್) ಹಾಗೂ ಪಿಸಿಒಡಿ (ಪಾಲಿಸಿಸ್ಟಿಕ್ ಒವರಿಯನ್ ಡಿಸೀಸ್) ಇಂದು ಹೆಚ್ಚು ಮಹಿಳೆಯರನ್ನು ಕಾಡುತ್ತಿದೆ. ಕೆಲಸದಲ್ಲಿನ ಒತ್ತಡ, ತರಾತುರಿಯ ಜೀವನ ಶೈಲಿ, ನಿದ್ರೆ ಕೊರತೆ, ಸಕಾಲದಲ್ಲಿ ಆಹಾರ ಸೇವಿಸದಿರುವುದು, ಆಧುನಿಕ ಜೀವನ ಶೈಲಿ ಪಿಸಿಒಡಿಗೆ ಕಾರಣವಾಗುತ್ತಿವೆ ಎಂದರು.
ಅಂಡಾಶಯದ ಮೇಲೆ ಎಂಡೋಮೆಟ್ರಿಯೋಸಿಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಕ್ಕಳನ್ನು ಪಡೆಯಲು ದಂಪತಿ ತೀರಾ ವಿಳಂಬ ಮಾಡುವುದರಿಂದ ಅವರ ವಯಸ್ಸು ಅಧಿಕವಾಗಿರುತ್ತದೆ. ಹೀಗಾಗಿ ಸಂತಾನೋತ್ಪತ್ತಿ ಸಮಸ್ಯೆಯಾಗುವ ಸಾಧ್ಯತೆಗಳಿರುತ್ತವೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net