

ಜಯಶ್ರೀ ಜೆ.ಅಬ್ಬಿಗೇರಿ
ಒಂದು ಸಂಸ್ಥೆಯಲ್ಲಿ ರಾಮ-ಶ್ಯಾಮ ಎಂಬ ಗೆಳೆಯರಿದ್ದರು. ಅವರಿಬ್ಬರೂ ಪ್ರತಿದಿನ ಮಧ್ಯಾಹ್ನ ಕೂಡಿ ಊಟ ಮಾಡುತ್ತಿದ್ದರು. ಸೋಮವಾರದ ಮಧ್ಯಾಹ್ನ ಊಟಕ್ಕೆ ಕುಳಿತಾಗ ರಾಮ ಡಬ್ಬಿಯನ್ನು ತೆರೆದ. ‘ಓ! ಇಡ್ಲಿ, ಊಟದ ಹೊತ್ತಲ್ಲಿ? ಹೇಗೆ ತಿನ್ನುವುದು’ ಎಂದು ಗೊಣಗುತ್ತಲೇ ತಿನ್ನಲಾರಂಭಿಸಿದ. ‘ಇಡ್ಲಿಯಲ್ಲಿ ಎಣ್ಣೆ ಇರಲ್ಲ. ದೇಹಕ್ಕೆ ಒಳ್ಳೆಯದು ತಿನ್ನು’ ಎಂದ ಶ್ಯಾಮ. ಮರುದಿನ ಊಟಕ್ಕೆಂದು ಡಬ್ಬಿ ತೆಗೆದ, ‘ಅಯ್ಯೋ! ಮತ್ತೆ ಇಡ್ಲಿನಾ’ ಅಂತ ಮುಖ ಸಿಂಡರಿಸಿಕೊಂಡ. ‘ಪರ್ವಾಗಿಲ್ಲ, ತಿನ್ನು’ ಅಂದ ಸ್ನೇಹಿತ. ಮೂರನೆಯ ದಿನವೂ ‘ಮತ್ತೆ ಇಡ್ಲಿಗಳೇ?’ ಎಂದು ತಲೆ ಚಚ್ಚಿಕೊಂಡ. ಅದಕ್ಕೆ ಗೆಳೆಯ, ‘ಇಡ್ಲಿ ಅನ್ನಕ್ಕಿಂತ ಚೆನ್ನ ತಿನ್ನು’ ಎಂದ.
ನಾಲ್ಕನೇ ದಿನವೂ ಅದೇ ಕತೆ. ಆಗ ಸಿಟ್ಟಿಗೆದ್ದ ಶ್ಯಾಮ, ‘ದಿನವೂ ಹೀಗೆ ತ್ರಾಸು ಮಾಡಿಕೊಳ್ಳೋದು ಬಿಟ್ಟು ಬೇರೆ ಏನಾದರೂ ಮಾಡಲು ನಿಮ್ಮಾಕೆಗೆ ಹೇಳಬಹುದಲ್ಲಾ?’ ಎಂದು ಪ್ರಶ್ನಿಸಿದ. ಅದಕ್ಕೆ ರಾಮ, ‘ದುರಾದೃಷ್ಟ ನನ್ನದು. ಆಕೆ ತವರಿಗೆ ಹೋಗಿ ವಾರ ಆಯ್ತು. ದಿನಾಲೂ ನಾನೇ ಅಡುಗೆ ಮಾಡಿಕೊಳ್ತಿದಿನಿ’ ಎನ್ನುತ್ತ ಇಡ್ಲಿಗೆ ಕೈ ಹಾಕಿದ. (ರಾಮ ತಾನೇ ತಪ್ಪು ಮಾಡುತ್ತಿದ್ದಾನೆ ಎಂಬುದನ್ನೂ ಗಮನಿಸದೆ ‘ಕರ್ಮ’ ‘ದುರಾದೃಷ್ಟ’ ಎಂದು ಬೈದುಕೊಳ್ಳುತ್ತಾನೆ.)
ಮೇಲಿನ ದೃಷ್ಟಾಂತದಂತೆ, ಜೀವನದಲ್ಲಿಯೂ ಬಹುತೇಕರು ‘ನಾನೇ ತಪ್ಪು ಮಾಡುತ್ತಿದ್ದೇನೆ’ ಎಂಬ ಅರಿವಿರದೆ ಗೋಳಾಡುತ್ತಲೇ ಇರುತ್ತೇವೆ. ತೋಟಗಾರ ಹೇಗೆ ಗಿಡದ ರೆಂಬೆಗಳನ್ನು ತರಿಯುವಿಕೆಯಿಂದ ರೆಂಬೆಗಳು ದೃಢವಾಗಿ ಬೆಳೆಯುವಂತೆ ಮಾಡುತ್ತಾನೋ ಹಾಗೆ ನಾವು ಸಹ ಅನಗತ್ಯ ತಪ್ಪುಗಳನ್ನು ತಪ್ಪಿಸಿ ಗೆಲುವಿಗೆ ಅಗತ್ಯ ಇರುವ ಮುಖ್ಯ ವಿಷಯಗಳೆಡೆ ಚಿತ್ತ ಹರಿಸಬೇಕು. ಪುಟ್ಟ ಕ್ಲಾಕ್ ತನಗಿಟ್ಟ ಸಮಯಕ್ಕೆ ಸರಿಯಾಗಿ ಅಲಾಮ್ರ್ ಹೊಡೆಯುವುದನ್ನು ತಪ್ಪಿಸಲ್ಲ. ಅಂತೆಯೇ ನಾವು ವಹಿಸಿಕೊಂಡ ಮಹತ್ಕಾರ್ಯಗಳನ್ನು ಚಾಚೂ ತಪ್ಪದೇ ಮಾಡುವುದನ್ನು ಕಲಿಯಬೇಕು. ಜತೆಗೆ ಆದ್ಯಂತ ಅನುಭವಿಸುವುದನ್ನು ಕಲಿಯಬೇಕು. ತಪ್ಪುಗಳು ನಮ್ಮ ಕನ್ನಡಿಗಳು. ಅವು ನಮ್ಮ ಚಿಂತನೆಯನ್ನು ಪ್ರತಿಫಲಿಸುತ್ತವೆ.
ದಿನಗಳೆದ ಮೇಲೆ ತಪ್ಪುಗಳು ನಮ್ಮ ಹೆಗಲ ಮೇಲೆ ಸಟ್ಟನೇ ಕೈ ಇಟ್ಟು ‘ನಾನು ಆಗಲೇ ನಿನಗೆ ಗೋಗರೆದೆ ನನ್ನ ಕಡೆ ಗಮನ ಇಡು ಅಂತ ನೀ ಕೇಳಲಿಲ್ಲ. ಈಗ ನೋಡು ಎಂಥ ಪರಿಸ್ಥಿತಿ ಬಂದಿದೆ’ ಎಂದು ಮತ್ತೊಮ್ಮೆ ಎಚ್ಚರಿಸುತ್ತವೆ. ತಪ್ಪುಗಳು ನಮ್ಮ ನಿಯಂತ್ರಣದಲ್ಲಿ ಇರುತ್ತವೆ. ಅವು ನಮ್ಮದೇ ಒಡೆತನದ ನಿರ್ಧಾರಗಳು. ಮೈಯೆಲ್ಲ ಕಣ್ಣಾಗಿ ಕಾಯರ್åಕ್ಷೇತ್ರಕ್ಕೆ ಇಳಿದರೂ ನಿರೀಕ್ಷೆ ಎಲ್ಲ ಉಲ್ಟಾ ಮಾಡುತ್ತವೆ ಎಂದು ತಪ್ಪುಗಳನ್ನು ಬೈಯ್ಯುವುದುಂಟು. ನಿರೀಕ್ಷಿಸದೇ ತಪ್ಪುಗಳಾದರೆ ಅವುಗಳಿಂದ ಪಾಠ ಕಲಿಯಬೇಕು. ಗೊತ್ತಿದ್ದೂ ತಪ್ಪುಗಳಾಗದಂತೆ ಗಮನ ವಹಿಸಬೇಕು.ಆಗ ಸರಿಯಾದ ಮಾರ್ಗ ತನ್ನಿಂದ ತಾನೇ ತೆರೆದು ನಮ್ಮನ್ನು ಸ್ವಾಗತಿಸುತ್ತದೆ. ಆ ಪಥದಲ್ಲಿ ಸಾಗಲು ಪ್ರೇರಣೆ ಒದಗಿಸುತ್ತದೆ.
(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)