

2001ರಲ್ಲಿ ಇದೇ ದಿನ ಪ್ರಾರಂಭವಾದ ವಿಕಿಪೀಡಿಯಾ ಇದೀಗ ವಿಶ್ವದ ಅತ್ಯಂತ ಜನಪ್ರಿಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹೀಗೆ ಮುಕ್ತಜ್ಞಾನದ (ಓಪನ್ ನಾಲೆಜ್) ಪ್ರಸಾರದಲ್ಲಿ ತೊಡಗಿಕೊಂಡಿರುವ ಕೆಲವು ಪ್ರಯತ್ನಗಳ ಪರಿಚಯ, ಈ ಸಂದರ್ಭದಲ್ಲಿ ನಿಮಗಾಗಿ.
ವಿವಿಧ ಕ್ಷೇತ್ರಗಳಲ್ಲಿ ಪ್ರತಿದಿನವೂ ಹೊಸ ಬೆಳವಣಿಗೆಗಳು ನಡೆಯುವ ಈ ಕಾಲದಲ್ಲಿ ಅವೆಲ್ಲದರ ಬಗ್ಗೆ ತಿಳಿದುಕೊಂಡಿರಬೇಕಾಗಿದ್ದು ಅನಿವಾರ್ಯವೇ ಆಗಿಬಿಟ್ಟಿದೆ. ಪರೀಕ್ಷೆ ಪಾಸುಮಾಡಲು- ಪದವಿ ಪಡೆಯಲು ಮಾತ್ರವೇ ಅಲ್ಲ, ನಿತ್ಯದ ವ್ಯವಹಾರಗಳನ್ನು ನಿಭಾಯಿಸಿಕೊಂಡು ಹೋಗುವುದಕ್ಕೂ ಇಂದು ಈ ಜ್ಞಾನ ಅವಶ್ಯಕ.
ವಿಶ್ವವ್ಯಾಪಿ ಜಾಲದ (ವರ್ಲ್ಡ್ವೈಡ್ ವೆಬ್) ವ್ಯಾಪ್ತಿ ಅಗಾಧವಾಗಿ ಬೆಳೆದಿರುವುದರಿಂದ ಮಾಹಿತಿ ಪಡೆದುಕೊಳ್ಳುವ ಕೆಲಸ ಇದೀಗ ಸುಲಭವಾಗಿದೆ. ಆದರೆ ಇಲ್ಲಿ ಎಲ್ಲ ವಿಷಯಗಳ ಬಗ್ಗೆ ನಮಗೆ ಬೇಕಾದ ಎಲ್ಲ ಮಾಹಿತಿಯೂ ಸಿಗುತ್ತದೆ ಎನ್ನುವಂತಿಲ್ಲ. ಯಾವುದೇ ವಿಷಯದ ಬಗ್ಗೆ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಬೇಕಾದ ಮಾಹಿತಿ ಸಿಗುತ್ತದೆ ಎಂದುಕೊಂಡರೂ ಅದೇ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕೆಂದರೆ ಪೂರಕ ಮಾಹಿತಿ ಸಿಗದಿರುವ ಸಾಧ್ಯತೆಯೇ ಹೆಚ್ಚು.
ಇದರ ಬದಲು, ಯಾವುದೇ ವಿಷಯವನ್ನು ಕುರಿತ ಮಾಹಿತಿ ಬೇಕಾದವರಿಗೆ ಬೇಕೆಂದಾಗ ಸಿಗುವಂತಿದ್ದರೆ? ಅದೂ ಉಚಿತವಾಗಿ? ‘ಓಪನ್ ನಾಲೆಜ್’, ಅಂದರೆ ಮುಕ್ತಜ್ಞಾನ ಎಂಬ ಪರಿಕಲ್ಪನೆಯ ಉದ್ದೇಶವೇ ಅದು. ವಿವಿಧ ವಿಷಯಗಳ ಬಗೆಗಿನ ಮಾಹಿತಿ ಅದರ ಅಗತ್ಯವಿರುವವರಿಗೆ ಮುಕ್ತವಾಗಿ ಸಿಗಬೇಕು, ಮತ್ತು ಆ ಮಾಹಿತಿಯನ್ನು ಸಾಮಾಜಿಕ-ಕಾನೂನಾತ್ಮಕ-ತಾಂತ್ರಿಕ ನಿರ್ಬಂಧಗಳಾವುದರ ಗೊಡವೆಯೂ ಇಲ್ಲದೆ ಮುಕ್ತವಾಗಿ ಬಳಸುವುದು-ಹಂಚುವುದು ಸಾಧ್ಯವಾಗಬೇಕು ಎಂದು ಈ ಪರಿಕಲ್ಪನೆ ಹೇಳುತ್ತದೆ. ಹೀಗೆ ಬಳಸುವುದು ಮತ್ತು ಪಸರಿಸುವುದು ಮಾತ್ರವೇ ಅಲ್ಲ, ಮುಕ್ತಜ್ಞಾನದ ಭಂಡಾರವನ್ನು ಬೆಳೆಸುವಲ್ಲಿ ಕೂಡ ಯಾರು ಬೇಕಾದರೂ ನೆರವಾಗಬಹುದು.
ಮುಕ್ತಜ್ಞಾನ ಪ್ರಸಾರದ ಉದಾಹರಣೆಗಳನ್ನು ನೋಡಲು ಹೊರಟರೆ ನಮಗೆ ಕಾಣಸಿಗುವ ಪರಿಚಿತ ಹೆಸರು ವಿಕಿಪೀಡಿಯದ್ದು (wikipedia.org).ಗೂಗಲ್ನಲ್ಲಿ ಯಾವುದೇ ವಿಷಯದ ಬಗ್ಗೆ ಹುಡುಕಿದಾಗ ಸಿಗುವ ಫಲಿತಾಂಶಗಳಲ್ಲಿ ಈ ತಾಣದ ಒಂದೆರಡು ಪುಟಗಳನ್ನಾದರೂ ನಾವು ನೋಡುತ್ತೇವೆ.
2001ರ ಜನವರಿ 15ರಂದು ಪ್ರಾರಂಭವಾದ ವಿಕಿಪೀಡಿಯ, ಇದೀಗ ವಿಶ್ವದ ಟಾಪ್ 10 ಜಾಲತಾಣಗಳಲ್ಲೊಂದು. ಡಿಜಿಟಲ್ ರೂಪದಲ್ಲಿ ಮಾತ್ರವೇ ಇರುವ ಈ ವಿಶ್ವಕೋಶವನ್ನು ಬಳಸಲು ನಾವು ಹಣ ಕೊಡಬೇಕಿಲ್ಲ. ನಮ್ಮ ಪರಿಣತಿಯ ಕ್ಷೇತ್ರದ ಬಗೆಗಿನ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಬೇಕೆಂದರೆ ಅದಕ್ಕಾಗಿ ಯಾರ ಅನುಮತಿಯನ್ನೂ ಕೇಳಬೇಕಿಲ್ಲ. ಹೀಗಾಗಿಯೇ ವಿಕಿಪೀಡಿಯ ತನ್ನನ್ನು "the free encyclopedia' ಎಂದು ಕರೆದುಕೊಂಡಿದೆ (ಇಲ್ಲಿ ’ಫ್ರೀ’ ಎನ್ನುವ ಪದ ಬಳಕೆಯಾಗಿರುವುದು ’ಸ್ವತಂತ್ರ’ ಎಂಬ ಅರ್ಥದಲ್ಲಿ).
ಕನ್ನಡ, ತುಳು ಸೇರಿದಂತೆ ಪ್ರಪಂಚದ 300ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯದಲ್ಲಿ ಅಪಾರ ಪ್ರಮಾಣದ ಮಾಹಿತಿ ಮುಕ್ತವಾಗಿ ದೊರಕುತ್ತದೆ. 2019ರ ಅಂಕಿಅಂಶಗಳ ಪ್ರಕಾರ, ವಿಕಿಪೀಡಿಯದಲ್ಲಿ ಒಟ್ಟು ಐದು ಕೋಟಿಗೂ ಹೆಚ್ಚು ಬರಹಗಳಿದ್ದು, ಇಂಗ್ಲಿಷ್ ಆವೃತ್ತಿಯೊಂದರಲ್ಲೇ ಸುಮಾರು ಅರವತ್ತು ಲಕ್ಷ ಬರಹಗಳು ನಮಗೆ ದೊರಕುತ್ತವೆ. ಹಿಂದೆ ಬಹಳ ಜನಪ್ರಿಯವಾಗಿದ್ದ ಎನ್ಸೈಕ್ಲೋಪೀಡಿಯ ಬ್ರಿಟಾನಿಕಾ ವಿಶ್ವಕೋಶದ ಸಂಪುಟಗಳನ್ನು ನೆನಪಿಸಿಕೊಳ್ಳುವುದಾದರೆ, ಇಂಗ್ಲಿಷ್ ವಿಕಿಪೀಡಿಯದಲ್ಲಿರುವ ಈ ಮಾಹಿತಿ ಸುಮಾರು 2,500 ಮುದ್ರಿತ ಸಂಪುಟಗಳಿಗೆ ಸಮಾನವಂತೆ!
ಯಾವುದೇ ವಿಷಯದ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದುಕೊಳ್ಳಲು ವಿಕಿಪೀಡಿಯದಂತಹ ತಾಣಗಳು ನೆರವಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ಪೈಕಿ ಯಾವುದಾದರೂ ವಿಷಯಗಳ ಬಗ್ಗೆ ಉನ್ನತ ಅಧ್ಯಯನ ಕೈಗೊಳ್ಳಬೇಕು ಎಂದರೆ ಅಗತ್ಯ ಮಾಹಿತಿ ಎಲ್ಲಿ ಸಿಗಬಹುದು? ‘ಮ್ಯಾಸಿವ್ ಓಪನ್ ಆನ್ಲೈನ್ ಕೋರ್ಸ್’ (MOOC) ಎಂಬ ಪರಿಕಲ್ಪನೆಯ ಮೂಲಕ ಈ ಪ್ರಶ್ನೆಗೂ ಉತ್ತರ ನೀಡುವ ಪ್ರಯತ್ನಗಳು ನಡೆದಿವೆ. ಶಾಲಾಕಾಲೇಜುಗಳ ಮೂಲಕವಷ್ಟೇ ದೊರಕುವ ಶಿಕ್ಷಣವನ್ನು ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಒದಗಿಸಿ, ಅದಕ್ಕಿರುವ ಭೌಗೋಳಿಕ ಹಾಗೂ ಆರ್ಥಿಕ ಅಡೆತಡೆಗಳನ್ನು ಹೋಗಲಾಡಿಸುವುದು ಈ ಪರಿಕಲ್ಪನೆಯ ಉದ್ದೇಶ.
ಈ ಪರಿಕಲ್ಪನೆಯಡಿ ವಿಶ್ವದ ಅನೇಕ ಹೆಸರಾಂತ ವಿದ್ಯಾಸಂಸ್ಥೆಗಳು ತಮ್ಮ ಪಠ್ಯಸಾಮಗ್ರಿಯನ್ನು ಜಾಲತಾಣಗಳ ಮೂಲಕ ತೆರೆದಿಟ್ಟು ಎಲ್ಲರಿಗೂ ದೊರಕುವಂತೆ ಮಾಡಿವೆ. ಹೀಗೆ ಸಾರ್ವಜನಿಕ ಬಳಕೆಗಾಗಿ ಸಂಪೂರ್ಣ ಮುಕ್ತವಾಗಿ ದೊರಕುವ ಪಠ್ಯಸಾಮಗ್ರಿಯನ್ನು ‘ಓಪನ್ ಕೋರ್ಸ್ವೇರ್’ ಎಂದೂ ಕರೆಯುತ್ತಾರೆ. ಅಮೆರಿಕಾದ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ ನಡೆಸುತ್ತಿರುವ ಓಪನ್ ಕೋರ್ಸ್ವೇರ್ ತಾಣ (ocw.mit.edu) ಇಂತಹ ಪ್ರಯತ್ನಗಳಿಗೊಂದು ಅತ್ಯುತ್ತಮ ಉದಾಹರಣೆ. ಭಾರತ ಸರಕಾರದ National Programme on Technology Enhanced Learning (nptel.ac.in) ಕೂಡ ಇಂಥದ್ದೇ ಇನ್ನೊಂದು ಪ್ರಯತ್ನ. ಐಐಟಿ, ಐಐಎಸ್ಸಿ ಮುಂತಾದ ಸಂಸ್ಥೆಗಳ ಪಠ್ಯಸಾಮಗ್ರಿ ಎಲ್ಲರಿಗೂ ದೊರಕುವಂತೆ ಮಾಡಿರುವುದು ಈ ಪ್ರಯತ್ನದ ಹೆಚ್ಚುಗಾರಿಕೆ. ಪಾಠಗಳನ್ನು ಓದುವುದು - ನೋಡುವುದು - ಕೇಳುವುದು ಮಾತ್ರವೇ ಅಲ್ಲ, ಸಣ್ಣ ಪ್ರಮಾಣದ ಶುಲ್ಕ ಪಾವತಿಸಿ ಪರೀಕ್ಷೆ ತೆಗೆದುಕೊಳ್ಳುವುದು ಹಾಗೂ ಉತ್ತೀರ್ಣರಾಗಿ ಪ್ರಮಾಣ ಪತ್ರ ಪಡೆಯುವುದನ್ನೂ ಈ ವ್ಯವಸ್ಥೆ ಸಾಧ್ಯವಾಗಿಸಿರುವುದು ವಿಶೇಷ.
ವಿಕಿಪೀಡಿಯದ ಹೆಗ್ಗಳಿಕೆ
ವಿಕಿಪೀಡಿಯದಲ್ಲಿ ಲಭ್ಯವಿರುವ ಮಾಹಿತಿಯನ್ನು ನಮ್ಮನಿಮ್ಮಂತಹ ಸಾಮಾನ್ಯ ಬಳಕೆದಾರರೇ ಸೇರಿಸಿದ್ದಾರೆ ಎನ್ನುವುದು ವಿಕಿಪೀಡಿಯದ ಹೆಗ್ಗಳಿಕೆ. ಯಾವುದೇ ವಿಷಯದ ಬಗ್ಗೆ ತಿಳಿದುಕೊಂಡಿರುವ, ಮಾಹಿತಿ ಹಂಚಿಕೊಳ್ಳುವ ಆಸಕ್ತಿಯಿರುವ ಯಾರು ಬೇಕಾದರೂ ವಿಕಿಪೀಡಿಯದಲ್ಲಿ ನೋಂದಾಯಿಸಿಕೊಂಡು ಲೇಖನಗಳನ್ನು ಬರೆಯುವುದು ಸಾಧ್ಯ. ಅಷ್ಟೇ ಅಲ್ಲ, ಬೇರೆ ಲೇಖನಗಳಲ್ಲಿರುವ ಮಾಹಿತಿ ತಪ್ಪು ಅಥವಾ ಅಪೂರ್ಣ ಎನಿಸಿದರೆ ಅದನ್ನೂ ನಾವೇ ಸರಿಪಡಿಸಬಹುದು. ಇಂಗ್ಲಿಷಿನಂತಹ ಭಾಷೆಗಳಲ್ಲಿ ಹೀಗೆ ಕೆಲಸಮಾಡುವ ಸಂಪಾದಕರ (‘ಎಡಿಟರ್’) ಸಂಖ್ಯೆ ಹೆಚ್ಚಿರುವುದರಿಂದ ಆ ಭಾಷೆಗಳ ವಿಕಿಪೀಡಿಯದಲ್ಲಿರುವ ಮಾಹಿತಿಯ ಗುಣಮಟ್ಟ ಕೂಡ ಸಾಕಷ್ಟು ಉತ್ತಮವಾಗಿರುತ್ತದೆ. ಆಸಕ್ತಿಯಿರುವ ಬಳಕೆದಾರರು ಸಂಪಾದಕರಾಗಿಯೂ ಕೆಲಸಮಾಡಿದರೆ ನಮ್ಮ ಭಾಷೆಗಳ ವಿಕಿಪೀಡಿಯ ಕೂಡ ಈ ಹಂತ ತಲುಪುವುದು ಕಷ್ಟವಾಗಲಿಕ್ಕಿಲ್ಲ.