

ಒಬ್ಬ ವ್ಯಕ್ತಿ ಜೀವನದಲ್ಲಿ ಸ್ವಸ್ಥನಾಗಿ ಇರಬೇಕಾದರೆ ಏನೆಲ್ಲ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ವಿಧಿವತ್ತಾಗಿ ವಿವರಿಸಿರುವ ಆಯುರ್ವೆದದ ಮಹತ್ವಪೂರ್ಣ ವಿಚಾರಗಳಿಗೆ ಒಟ್ಟಾಗಿ ಸ್ವಸ್ಥವೃತ್ತ ಎನ್ನುತ್ತೇವೆ. ದಿನಚರ್ಯು, ರಾತ್ರಿಚರ್ಯು, ಋತುಚರ್ಯು, ಸದ್ವೃತ್ತಗಳೆಲ್ಲವೂ ಸೇರಿ ಆಗಿರುವುದೇ ಸ್ವಸ್ಥವೃತ್ತ. ಒಳ್ಳೆಯ ನಡತೆಗಳ ಗೊಂಚಲೇ ಸದ್ವೃತ್ತ. ನೈತಿಕ ನಡತೆ-ಹವ್ಯಾಸ, ಮನೋಭಾವ-ಹಾವಭಾವ, ಆಸೆ-ಆಕಾಂಕ್ಷೆ, ಮಿಡಿತ-ತುಡಿತಗಳನ್ನೆಲ್ಲ ಒಟ್ಟಾಗಿ ವ್ಯಕ್ತಿಯ ಆಚಾರ-ವಿಚಾರಗಳೆನ್ನುತ್ತೇವೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಇವೆಲ್ಲವುಗಳ ಆಧಾರದಲ್ಲಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಂಸ್ಕೃತಿ, ಜೀವನಮೌಲ್ಯ, ನೈತಿಕತೆ, ಸಂಬಂಧ, ಪರಂಪರೆ, ಸಹವಾಸ, ಸಂಕಲ್ಪ, ಸಮಾಜ, ಪರಿಸರ ಹಾಗೂ ಅನಿವಾರ್ಯತೆಗಳ ಪ್ರತಿಫಲವನ್ನು ವ್ಯಕ್ತಿತ್ವದಲ್ಲಿ ಕಾಣಬಹುದು. ಈ ರೀತಿಯಲ್ಲಿ ಮಾನವನ ನಡೆ-ನುಡಿಗಳು ಅನೇಕ ವಿಚಾರಗಳಿಂದ ಪ್ರಭಾವಿತವಾಗಿ ಅಂತಿಮವಾಗಿ ಅಭಿವ್ಯಕ್ತವಾಗುತ್ತದೆ.
ಭಾವನೆ ಎಂಬುದು ಕೇವಲ ಮನಸ್ಸಿಗೆ ಸಂಬಂಧಪಟ್ಟದ್ದಲ್ಲ. ದೈಹಿಕ ಅಂಶಗಳೂ ಭಾವನೆಯು ಪ್ರಕಟವಾಗಲು ಕಾರಣವಾಗಿರುತ್ತವೆ. ಅಭಿಪ್ರಾಯ, ಆಲೋಚನೆ, ಮನಃಸ್ಥಿತಿ, ಒಲವು, ಸ್ವಭಾವ, ನಡತೆ, ವ್ಯಕ್ತಿತ್ವಗಳಿಗೆ ಹೊಂದಿಕೊಂಡು ಭಾವನೆಯು ಸೃಜಿಸುತ್ತದೆ. ಹಾಗಾಗಿ ವಾಸ್ತವ ಒಂದೇ ಆಗಿದ್ದರೂ ಭಾವನೆಯ ಅನುಭವ ಎಲ್ಲರಿಗೂ ಒಂದೇ ರೀತಿಯಾಗಿ ಆಗುವುದಿಲ್ಲ! ಶುಭಸಮಾರಂಭದಲ್ಲಿ ಯಾರಾದರೂ ಮಾತನಾಡದಿದ್ದರೆ ಅವರಿಗೆಷ್ಟು ಅಹಂಕಾರ ಎಂದು ಒಬ್ಬರು ನಿರ್ಣಯಿಸುತ್ತಾರೆ. ಒಂದುವೇಳೆ ಮಾತನಾಡಿಸಿದರೆ ಅವರನ್ನು ಹೊಗಳಿಕೊಳ್ಳಲೆಂದೇ ಮಾತನಾಡಿದರೆಂದು ಉಸುರುತ್ತಾರೆ! ನೋಡಿಯೂ ನೋಡದಂತಿದ್ದರೆ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಅಂದುಕೊಳ್ಳುತ್ತಾರೆ. ಮಾತನಾಡಿಸದೆ ಹಾಗೆಯೇ ನೋಡಿ ಸುಮ್ಮನಾದರೆ ನಮ್ಮ ದುಃಸ್ಥಿತಿಯನ್ನು ನೋಡಿ ಖುಷಿಪಡುವ ನೀಚರೆಂದು ಅವರನ್ನು ಹಳಿಯುತ್ತಾರೆ! ಬೇರೆ ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ನಮ್ಮನ್ನು ನೋಡಿಯೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದರೆ ಗರ್ವದ ಪರಮಾವಧಿ ಎಂದುಕೊಳ್ಳುತ್ತಾರೆ. ಬೇರ್ಯಾವುದೋ ಆಲೋಚನೆಯಲ್ಲಿ ಅವರಷ್ಟಕ್ಕೇ ನಸುನಕ್ಕರೆ ಅಥವಾ ಕೋಪದ ಭಾವನೆ ಮುಖದಲ್ಲಿ ಬಿಂಬಿತವಾದರೆ ತಲೆ ಸರಿಯಿಲ್ಲವೆಂದೋ, ಅದೆಷ್ಟು ಸೊಕ್ಕೆಂದೋ ಹೇಳಿ ಹಲುಬುತ್ತಾರೆ!
ಸುಖ-ದುಃಖ, ನೋವು-ನಲಿವು, ತಣ್ಣಗೆ-ಬೆಚ್ಚಗೆ ಎಂಬಿತ್ಯಾದಿ ಅನಿಸಿಕೆಗಳು ನಮ್ಮ ಅರಿವಿಗೆ ಬಂದಾಗ ಅದಕ್ಕನುಗುಣವಾಗಿ ಭಾವನೆಗಳೂ ಹೊರಹೊಮ್ಮುತ್ತವೆ. ಮನೋಭಾವವನ್ನು ಹೊಂದಿಕೊಂಡು ಹಾವಭಾವಗಳು ವ್ಯಕ್ತವಾಗುತ್ತವೆ. ಮನಸ್ಸು ಹೇಗೋ, ಅಭಿವ್ಯಕ್ತಿ ಹಾಗೆಯೇ. ಹಾವಭಾವ ಹೇಗೋ, ಮನಸ್ಸೂ ಹಾಗೆಯೇ! ಒಂದರ ಜಾಡು ಹಿಡಿದರೆ ಇನ್ನೊಂದು ಅರ್ಥವಾಗುತ್ತದೆ. ಇವು ಒಂದೇ ನಾಣ್ಯದ ಎರಡು ಮುಖಗಳಂತಿವೆ. ಹಾಗಿದ್ದರೆ ಈ ಮನಃಸ್ಥಿತಿಯನ್ನು ಯೋಗ್ಯ ರೀತಿಯಲ್ಲಿ, ಉನ್ನತ ಮಟ್ಟದಲ್ಲಿ, ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕಾದರೆ ಮಾನವಪ್ರಯತ್ನವೂ ಅದೇ ದಿಕ್ಕಿನಲ್ಲಿರಬೇಕು. ಸನ್ನಡತೆ ಕಲಿತುಕೊಂಡರೆ ಮಾತ್ರ ಆರೋಗ್ಯ ಸಾಧ್ಯ ಎಂಬುದನ್ನು ಚರಕಸಂಹಿತೆಯಿಂದ ಮೊದಲ್ಗೊಂಡು ಆಯುರ್ವೆದದ ಗ್ರಂಥಗಳೆಲ್ಲ ಸಾರಿವೆ. ಸದಾಚಾರದ ಅರಿವು ಹಾಗೂ ಅನುಷ್ಠಾನದಲ್ಲಿ ಸಮಾಜದ ಸ್ವಾಸ್ಥ್ಯ ಸಮ್ಮಿಳಿತವಾಗಿದೆ.