ಆರೋಗ್ಯ; ಔಷಧಗಳ ಅರಸ ಭೃಂಗರಾಜ

BRINGA RAJA
Published on

ಭೃಂಗರಾಜ ಸಸ್ಯಕ್ಕೆ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ವಿಶೇಷ ಮಹತ್ವವಿದೆ. ಮನೆಯೆದುರು ಕಳೆಗಳ ಮಧ್ಯೆ ಬೆಳೆಯುವ ಇದು ಸುಮಾರು ಎರಡು ಅಡಿ ಎತ್ತರ ಬೆಳೆಯುತ್ತದೆ.

ಹಳ್ಳಿಗಳಲ್ಲಿ ಈ ಸಸ್ಯವನ್ನು ಗರುಗದ ಗಿಡವೆಂದೂ ಕರೆಯುತ್ತಾರೆ. ಭೃಂಗರಾಜದ ಎಲೆಗಳನ್ನು ಸೂಪ್ ಮಾಡಿಕೊಂಡು ಆಹಾರೌಷಧವಾಗಿ ಬಳಸುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

  • ಭೃಂಗರಾಜದ ಎಲೆಯ ಕಷಾಯ ಕುಡಿಯುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುತ್ತದೆ.
  • ಭೃಂಗರಾಜ ಎಲೆಯ ರಸಕ್ಕೆ ಎಳ್ಳೆಣ್ಣೆ ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಗುಣವಾಗುತ್ತದೆ.
  • ಭೃಂಗರಾಜ ಎಲೆಯ ಕಷಾಯದಿಂದ ಬಾಯಿ ಮುಕ್ಕಳಿಯುವುದರಿಂದ ಗಂಟಲುನೋವು ನಿವಾರಣೆಯಾಗುತ್ತದೆ.  ಭೃಂಗರಾಜ ಎಲೆಯಿಂದ ಹಲ್ಲುಗಳನ್ನುಜ್ಜುವುದರಿಂದ ಹಲ್ಲುನೋವು ಹಾಗೂ ಒಸಡುಗಳ ಸಮಸ್ಯೆಯನ್ನು ನಿವಾರಿಸಬಹುದು.
  • ಸಣ್ಣಗೆ ಹೆಚ್ಚಿದ ಭೃಂಗರಾಜದ ಎಲೆಯನ್ನು ತುಪ್ಪದಲ್ಲಿ ಹುರಿದು, ಮೊಸರು, ಜೀರಿಗೆ ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
  • ಪ್ರತಿನಿತ್ಯ ಬೆಳಗ್ಗೆ ಭೃಂಗರಾಜದ 5-6 ಹಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹ ತಂಪಾಗಿರುವಂತೆ ನೋಡಿಕೊಳ್ಳಬಹುದು.
  • ಚಳಿಗಾಲದಲ್ಲಿ ಭೃಂಗರಾಜದ ಎಲೆಯ ರಸಕ್ಕೆ ಸ್ವಲ್ಪ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಒಡೆಯುವುದು ಕಡಿಮೆಯಾಗುತ್ತದೆ.
  • ಭೃಂಗರಾಜ ಎಲೆಯ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರಸಿ ಕುದಿಸಿಟ್ಟುಕೊಳ್ಳಬೇಕು. ಅದು ತಣ್ಣಗಾದ ನಂತರ ತಲೆಗೆ ಹಾಕಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
  • ಭೃಂಗರಾಜದ ಪುಡಿ ಮತ್ತು ಮೆಂತ್ಯ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು, ಸ್ವಲ್ಪ ನೀರು ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿಕೊಂಡು, ಒಂದು ಗಂಟೆ ನಂತರ ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು.
  • ಭೃಂಗರಾಜ ಎಲೆಯ ರಸವನ್ನು ಮೈಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಹಾಗೂ ಚರ್ಮ ಆರೋಗ್ಯದಿಂದಿರುತ್ತದೆ. ಭೃಂಗರಾಜ ಗಿಡದ ಬೇರಿನ ಪುಡಿಗೆ ಸ್ವಲ್ಪ ನೀರು ಸೇರಿಸಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net