

ರಾಮಸುಬ್ರಾಯ ಶೇಟ್
ಉತ್ತಮ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ ಲಕ್ಷ್ಮಿಗೆ ಕೊಟ್ಟ ಮನೆಯಲ್ಲಿ ಸ್ವಲ್ಪವೂ ನೆಮ್ಮದಿ ಇರಲಿಲ್ಲ. ಅತ್ತೆ-ನಾದಿನಿಯರ ಕ್ರೌರ್ಯ, ಉಪಟಳ, ಪತಿಯ ಅನಾಸಕ್ತಿ, ಗಳಿಕೆಯಲ್ಲಿಯೇ ಮುಳುಗಿದ ವೇದನೆ. ಮೌನವಾಗಿ ತವರಿಗೂ ಹೇಳದೆ ಸಹಿಸಿದಳು. ಕಡೆಗೊಮ್ಮೆ ತಾಳ್ಮೆಯ ಕಟ್ಟೆ ಒಡೆಯಿತು. ಕೊನೆಗೆ ಸಾವೇ ಗತಿ ಎಂದು ತೀಮಾನಿಸಿ ಪತ್ರ ಬರೆದಿಟ್ಟು ದೇವಸ್ಥಾನಕ್ಕೆ ಹೋಗಿ ಬರುವೆನೆಂದು ಅತ್ತೆಯನ್ನು ಒಪ್ಪಿಸಿ ದೇಗುಲಕ್ಕೆ ಬಂದರೆ ಸುಶ್ರಾವ್ಯ ಹಾಡಿನ ವಿರಾಟ ಪರ್ವದ ಕತೆ ಕೇಳಿಸುತ್ತದೆ. ತುಸು ಹೊತ್ತು ಅಲ್ಲೇ ಕುಳಿತಳು. ದಾಸರು ಕೀಚಕನ ಕಾಮುಕತನವನ್ನು ಪಾಂಚಾಲಿಯ ಅಸಹಾಯಕತೆಯನ್ನು ಭಾವಪೂರ್ಣವಾಗಿ ವಿವರಿಸುತ್ತಿದ್ದಾರೆ. ‘ಈ ರೀತಿ ಮಹಾರಾಣಿಯಾಗಿ ಸೇವಕಿಯರಿಂದ ಸೇವೆ ಮಾಡಿಸಿಕೊಳ್ಳಬೇಕಾದ ಐವರ ಪತ್ನಿಯಾದ ಪಾಂಚಾಲಿ, ಮಾರುವೇಶದಲ್ಲಿ ವಿರಾಟನ ರಾಣಿಯ ಸೇವೆ ಮಾಡುವ ದುರಂತ! ವಲಲನನ್ನು ಕಾಣಲು ಹೋದರೆ ಬಾಣಸಿಗರೊಡನೆ ಅಡುಗೆಮನೆಯಲ್ಲಿ ಮಲಗಿದ್ದಾನೆ! ಇದನ್ನು ಕಾಣುತ್ತಿದ್ದಂತೆ ದುಃಖದ ಕಟ್ಟೆ ಒಡೆಯಿತು ದ್ರೌಪದಿಗೆ. ಎಚ್ಚೆತ್ತ ಭೀಮನಿಗೆ ದುಸ್ಥಿತಿಯ ಅರಿವಾಯಿತು. ಅರ್ಧಾಂಗಿಗೆ ಅಭಯವಿತ್ತು ಕಾರ್ಯಪ್ರವೃತ್ತನಾದ. ಹೀಗೆ ಪುರಾಣೇತಿಹಾಸಗಳಲ್ಲಿ ಎಂತೆಂಥ ಮಹಾತ್ಮರು ಎಂತೆಂತಹ ಕಷ್ಟನಷ್ಟಗಳನ್ನು ಅನುಭವಿಸಿ ಜಯಿಸಿದ್ದಾರೆ. ಹಾಗಾಗಿ ಮಾನವರಾದ ನಾವು ಕಷ್ಟಗಳಿಗೆ ಸೋಲಬಾರದು....’ ಲಕ್ಷ್ಮಿ ಥಟ್ಟನೆ ಎದ್ದು ಮನೆಗೆ ಹೋದಳು. ತನ್ನ ಕ್ಷಣಿಕ ದೌರ್ಬಲ್ಯದ ನಿರ್ಧಾರಕ್ಕೆ ಮರುಗಿದಳು. ಧೈರ್ಯದಿಂದ ಜೀವನ ಎದುರಿಸುವ ನಿರ್ಧಾರ ಕೈಗೊಂಡಳು. ಅದರಂತೆ ಬದುಕಿದಳು. ಅಲ್ಲದೆ, ಮನೆಯ ಎಲ್ಲರನ್ನೂ ಪ್ರೀತಿ, ಮಮತೆಯಿಂದ ಗೆದ್ದು ಜೀವನವನ್ನು ಸುಖಕರವಾಗಿಸಿಕೊಂಡಳು.
ನಮ್ಮ ವೇದ, ಪುರಾಣಗಳು ನೀತಿಯ ಗಣಿಗಳು. ಅತ್ಯುತ್ತಮ ಮಾರ್ಗದರ್ಶನ ನೀಡುತ್ತವೆ. ನಳದಮಯಂತಿಯರ ಕಷ್ಟದೆದುರು ಪಾಂಡವರ ಕಷ್ಟಗಳು ಗೌಣ. ಪಾಂಡವರ ಕಷ್ಟಗಳ ಎದುರು ನಮ್ಮ ಕಷ್ಟಗಳು ತೀರಾ ಗೌಣ. ಅನೇಕರು ತಮ್ಮಷ್ಟು ದುಃಖ, ಕಷ್ಟ ಇತರರಿಗೆ ಇಲ್ಲ ಎಂದು ಭಾವಿಸುತ್ತಾರೆ. ಅದೇ ನೋವಿನಲ್ಲಿ ತೋಳಲಾಡುತ್ತಾರೆ. ಇರುವ ನೆಮ್ಮದಿಯನ್ನೂ ದೂರ ಮಾಡಿಕೊಳ್ಳುತ್ತಾರೆ. ಆದರೆ ನಾವು ಯಾವತ್ತೂ ಹೆಚ್ಚು ಕಷ್ಟ ಪಡುವವರನ್ನು ಮತ್ತು ಕಡಿಮೆ ಸುಖ ಪಡುವವರನ್ನು ಕಂಡು ಸಮಾಧಾನಿಗಳಾಗಿ ಇರಬೇಕು. ಬಂದದ್ದೆಲ್ಲ ಸಹನೆ, ತಾಳ್ಮೆಯಿಂದ ಎದುರಿಸುತ್ತ ಭಗವಂತ ನಮಗೆ ಏನು ನೀಡಿದ್ದಾನೋ ಅದಕ್ಕೆ ಸಂತೋಷ ಪಡಬೇಕು, ಕೃತಜ್ಞರಾಗಿರಬೇಕು. ‘ಶರೀರ ಮಾಧ್ಯಂ ಖಲು ಧರ್ಮ ಸಾಧನಂ’ ಎಂಬಂತೆ ಈಸಬೇಕು ಇದ್ದು ಜಯಿಸಬೇಕು. ಅದಕ್ಕೆ ವಿರಳವಾದ ಮಾನವ ಜನ್ಮ ದೊರಕಿದುದನ್ನು ದೇಶಸೇವೆ ಈಶಸೇವೆ, ದೀನದಲಿತರ ಸೇವೆಯಲ್ಲಿ ಪಂಚ ಋಣಗಳನ್ನು ತೀರಿಸುವಲ್ಲಿ ಸಾರ್ಥಕ ಪಡಿಸಿಕೊಳ್ಳಬೇಕು. ಹೀಗೆ ಧನಾತ್ಮಕ ಚಿಂತನೆಗಳಿಂದ ದೌರ್ಬಲ್ಯಗಳನ್ನು ದೂರಕ್ಕೆ ಅಟ್ಟಿ ಜನ್ಮವನ್ನು ಸಾಫಲ್ಯಗೊಳಿಸಿಕೊಳ್ಳೋಣ.
(ಲೇಖಕರು ಗಮಕ ವ್ಯಾಖ್ಯಾನಕಾರರು)