

| ಸುಬ್ರಹ್ಮಣ್ಯ ಸೋಮಯಾಜಿ
ಅವನೊಬ್ಬ ಹನ್ನೆರಡು ವರ್ಷದ ಬಾಲಕ. ಅವನ ತಂದೆ ಆಕ್ರಮಣಕಾರಿ ಮೊಗಲ್ ಬಾದಶಹ ಅದಿಲ ಶಾನ ಒಬ್ಬ ಸಾಮಂತ ಸರದಾರ. ಈ ಮಗುವನ್ನು ಬಾದಶಹನಿಗೆ ಮುಜರೆ ಸಲ್ಲಿಸಲು ವಿಜಾಪುರದ (ಈಗಿನ ವಿಜಯಪುರ) ದರ್ಬಾರಿಗೆ ಕರೆದೊಯ್ಯುತ್ತಾನೆ. ಅಲ್ಲಿ ಎಲ್ಲರೂ ಬಾದಶಹನ ಸಿಂಹಾಸನದೆಡೆಗೆ ತಲೆಬಾಗಿ ಮೂರು ಬಾರಿ ಪ್ರಣಾಮ ಸಲ್ಲಿಸಿ ಕುಳಿತುಕೊಳ್ಳುತ್ತಿದ್ದರು. ಇವನ ತಂದೆಯ ಸರದಿಯೂ ಆಯಿತು. ಈಗ ಬಾಲಕನ ಸರದಿ. ತಂದೆಯು ‘ಮಗು, ಬೇಗ ಮುಜರೆ ಸಲ್ಲಿಸು. ಮಹಾರಾಜರಿಗೆ ಪ್ರಣಾಮ ಮಾಡು’ ಎಂದು ಅನೇಕ ಬಾರಿ ಹೇಳಿ ನೋಡಿದರು. ಆದರೆ ಹುಡುಗ ನೇರವಾಗಿ ನಿಂತಿದ್ದ. ತಂದೆಯನ್ನು ನೋಡಿ, ‘ನಿಮಗೆ, ತಾಯಿಗೆ, ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ, ಆದರೆ ಈ ಆಕ್ರಮಣಕಾರ, ನಮ್ಮ ಸಂಸ್ಕೃತಿಯನ್ನು ವಿನಾಶಗೈಯಲು ಬಂದ ಈ ಪರಕೀಯನಿಗೆ ಎಂದೂ ತಲೆಬಾಗೆನು’ ಎಂದುಬಿಟ್ಟ.
ಈ ಬಾಲಕನೇ ಮುಂದೊಂದು ದಿನ ಇಡೀ ಮೊಗಲ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗುತ್ತಾನೆ ಎಂಬುದರ ಅರಿವು ಆಗ ಆ ಬಾದಶಹನಿಗೆ ಆಗಿರಲಿಲ್ಲ. ಆ ಧೀರಬಾಲಕನೇ ಈ ದೇಶದ ಆದರ್ಶ ಪುರುಷ ಛತ್ರಪತಿ ಶಿವಾಜಿ ಮಹಾರಾಜರು. ಶಿವಾಜಿ ಇದ್ದ ಕಾಲವಾದರೂ ಎಂತಹದು! ಸುತ್ತಲೂ ಸನಾತನ ಧರ್ಮ ಸಂಸ್ಕೃತಿಯ ಶತ್ರುಗಳು. ರಾಜರೆಲ್ಲರಿಗೂ ಪರಸ್ಪರ ವೈಮನಸ್ಯ. ಕುಟುಂಬದ ಸಣ್ಣ ಸಮಸ್ಯೆಗಳಿಗಾಗಿ ಒಬ್ಬರನ್ನೊಬ್ಬರು ಬಲಿಕೊಡಲು ಸಿದ್ಧರಿದ್ದ ಆತಂಕಕಾರಿ ಮಾನಸಿಕತೆ. ಸ್ವತಃ ಶಿವಾಜಿಯ ತಂದೆಯೇ ಅನಿವಾರ್ಯವಾಗಿ ಮೊಗಲರ ಸರದಾರ. ಇಂಥ ಉದ್ವಿಗ್ನ ಪರಿಸ್ಥಿತಿಯಲ್ಲಿ ನಮ್ಮ ಧರ್ಮರಕ್ಷಣೆ, ಅಸ್ಮಿತೆಯ ಸ್ಥಾಪನೆ, ಸ್ವರಾಜ್ಯದ ಘೊಷಣೆ ಕನಸಿನ ಮಾತಾಗಿತ್ತು. ಮಾವಳಿ ಜನಾಂಗವನ್ನು ಸಂಘಟಿಸಿ ಅವರಿಗೆ ಅರ್ಥವಾಗುವಂತೆ ದೇಶ, ಧರ್ಮಗಳ, ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ತಿಳಿಹೇಳಿ ಅದಕ್ಕಾಗಿ ಅವರ ಜೀವನವನ್ನೇ ಮುಡುಪಿಡುವ ಸಂಕಲ್ಪವನ್ನು ಅವರೆಲ್ಲ ಮಾಡುವಂತೆ ಅವರನ್ನು ತಯಾರು ಮಾಡಲು ಎಂತಹ ದೂರದೃಷ್ಟಿ, ಧೈರ್ಯ ಇರಬೇಕು! ಇಂತಹ ನಿಷ್ಠಾವಂತರ ಸೈನ್ಯವನ್ನೇ ನಿರ್ವಿುಸಿ ನಮ್ಮ ಧರ್ಮ, ಸಂಸ್ಕೃತಿಗಳನ್ನು ಕಾಪಾಡಿದ ಶ್ರೇಯಸ್ಸು ಶಿವಾಜಿಯದು.
ಶ್ರೀರಂಗ ಮಹಾಗುರುಗಳು ತಿಳಿಸಿ ದಂತೆ-‘ಧರ್ಮಕ್ಕಾಗಿ ತಪಸ್ಸು ಮಾಡಿದ ಭೂಮಿ ಭಾರತ. ಧರ್ಮಚ್ಯುತರಾಗುವ ಬದಲು ಹತರಾದರೂ ಪರವಾಗಿಲ್ಲ ಎಂಬ ಸತ್ಯಸಂಗರವನ್ನು ಹೊಂದಿದ ನಾಡಿದಾಗಿದೆ’. ಈ ಸತ್ಯಾರ್ಥವನ್ನು ಪಾಲಿಸಿ ಜೀವನದುದ್ದಕ್ಕೂ ಕಷ್ಟ ಪರಂಪರೆಯನ್ನೇ ಎದುರಿಸಿ ಸ್ವರಾಜ್ಯ, ಸನಾತನ ಧರ್ಮರಕ್ಷಣೆ, ಸ್ವಾತಂತ್ರ್ಯ ಎಲ್ಲವನ್ನೂ ಶಿವಾಜಿ ಸಾಧಿಸಿ ತೋರಿಸಿದ್ದು ಈಗ ವೈಭವದ ಇತಿಹಾಸ.
ಎಂತಹ ವಿಷಮ ಪರಿಸ್ಥಿತಿಯಲ್ಲೂ ಜೀವನಧ್ಯೇಯವನ್ನು ಮರೆಯದೆ ಸಾಧಿಸುವ ಛಲ ಹಾಗೂ ಸಾಧಿಸಲೇಬೇಕಂಬ ಹುಚ್ಚು ಇರುವವರೇ ಚರಿತ್ರೆಯನ್ನು ನಿರ್ಮಾಣ ಮಾಡಬಲ್ಲರು. ಶಿವಾಜಿಯ ಜೀವನ ಇದಕ್ಕೊಂದು ಸಾಕ್ಷಿ. ನಾವೆಲ್ಲರೂ, ಈ ದೇಶದ ಋಷಿಮುನಿಗಳು ಕಂಡರುಹಿದ ಸನಾತನವಾದ ಲೋಕದ ನೆಮ್ಮದಿಗೆ ಕಾರಣವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಬೆಳಗಿಸುವ ಸಂಕಲ್ಪ ಮಾಡುವಂತಾದರೆ ಮಾತ್ರವೇ ನಮ್ಮೆಲ್ಲ ಪೂರ್ವಜರ ವಾರಸುದಾರರಾಗುತ್ತೇವೆ.
(ಲೇಖಕರು ಅಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು)