

ಇಂದ್ರನು ಕಾಡಿನಲ್ಲಿ ಅಪ್ಸರೆಯರೊಡನೆ ವಿಹರಿಸುತ್ತಿದ್ದ. ಜಲಕ್ರೀಡೆಯ ರಂಗು ಆವರಿಸಿತು. ದುರ್ವಾಸರ ಆಗಮನದಿಂದ ಕ್ರೀಡೆ ಭಂಗವಾಯಿತು. ಶ್ರೀಮನ್ನಾರಾಯಣನ ಪ್ರಸಾದವಾಗಿ ಒಂದು ಕಮಲದ ಹೂವನ್ನು ಪ್ರಸಾದವಾಗಿ ಇಂದ್ರನಿಗೆ ಕೊಟ್ಟು ಅವರು ಹೇಳಿದರು-‘ಯಾರು ಇದನ್ನು ಶಿರದಲ್ಲಿ ಮುಡಿದಿರುತ್ತಾರೋ, ಶ್ರೀದೇವಿಯ ಕೃಪಾಕಟಾಕ್ಷ ಸದಾ ಅವರ ಮೇಲಿರುತ್ತೆ’. ಇಂದ್ರನು ಅವರ ಮಾತನ್ನು ಹಗುರವಾಗಿ ಭಾವಿಸಿ ಪ್ರಸಾದವನ್ನು ಆನೆಯ ನೆತ್ತಿಯಲ್ಲಿಟ್ಟ. ಆನೆಯು, ಹೂವನ್ನು ಕೆಡವಿ ಮದೋನ್ಮತ್ತವಾಗಿ ಅರಣ್ಯವನ್ನು ಪ್ರವೇಶಿಸಿತು. ಇಂದ್ರನ ನಡೆಯಿಂದ ಲಕ್ಷ್ಮೀದೇವಿಯು ಇಂದ್ರನಿಂದ ವಿಮುಖಳಾದಳು. ಇಂದ್ರನ ಸಂಪತ್ತು, ವಿಲಾಸತ್ವವೆಲ್ಲ ಏಕಾಏಕಿ ನಷ್ಟವಾಯಿತು. ಆರ್ತನಾಗಿ ಬ್ರಹ್ಮದೇವರ ಮೊರೆಹೊಕ್ಕ. ಅವರ ಸಲಹೆಯಂತೆ ಪುಷ್ಕರವೆಂಬ ತೀರ್ಥಕ್ಷೇತ್ರದಲ್ಲಿ ನಾರಾಯಣನ ಪೂಜೆ, ತಪಸ್ಸಿನಿಂದ ತನ್ನ ಐಶ್ವರ್ಯವನ್ನು ಮತ್ತೆ ಪಡೆದ.
ಪೌರಾಣಿಕ ಕಥೆಗಳನ್ನು ತಾತ್ವಿಕವಾದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕೆಂಬುದು ಶ್ರೀರಂಗಮಹಾಗುರುಗಳ ಅನುಭವಸಿದ್ಧವಾದ ಮಾತು. ‘ಬ್ರಹ್ಮವೈವರ್ತ’ ಪುರಾಣದ ಈ ಕಥೆಯು ಅಹಂಕಾರವನ್ನು ತೊರೆವ ಪಾಠವನ್ನೂ, ವಿನಯ, ವಿವೇಕಗಳ ಮಹಿಮೆಯನ್ನೂ ಸಾರುತ್ತಿದೆ ಎಂಬುದು ಸ್ಥೂಲದೃಷ್ಟಿಗೂ ಸ್ಪಷ್ಟ. ಆದರೆ ಇಂದ್ರನೇಕೆ ಇಲ್ಲಿ ನಾಯಕನಾಗಬೇಕು? ಆನೆಯ ಬದಲಾಗಿ ಕುದುರೆ ಏಕೆ ಆಗಿರಬಾರದೆಂಬ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಸೂತ್ರರೂಪವಾದ ಉತ್ತರವೆಂದರೆ ಪುರಾಣಗಳು ಅಂತರಂಗದ ತಪೋದೃಷ್ಟಿಗೆ ಕಾಣುವ ಸತ್ಯಗಳ ಕಾವ್ಯಾತ್ಮಕ ವರ್ಣನೆ. ಇಲ್ಲಿ ಇಂದ್ರ ಎಂದರೆ ಇಂದ್ರಿಯಗಳ ರಾಜ. ಮನಸ್ಸು ಎಂಬುದಾಗಿಯೂ ಹೇಳುತ್ತಾರೆ.
ಲಕ್ಷ್ಮೀನಾರಾಯಣರ ಪ್ರಸಾದರೂಪವಾದ ಪುಷ್ಪವನ್ನು ಶಿರದಲ್ಲಿ ಮುಡಿಯುವುದೆಂದರೆ ಸಹಸ್ರಾರವೆಂಬ ಕಮಲದಲ್ಲಿ ಯೋಗಿಯು ಅನುಭವಿಸುವ ಸಮಾ ಮತ್ತು ಅದರಿಂದ ಇಂದ್ರಿಯ, ಮನೋಬುದ್ಧಿಗಳಿಗೆ ಉಂಟಾಗುವ ಅಪಾರವಾದ ತೃಪ್ತಿ-ನೆಮ್ಮದಿಗಳು. ಅಂತಹ ತೃಪ್ತ ಮನಸ್ಕನೊಬ್ಬನ ನಡೆ ಲೋಕಹಿತಕಾರಿ. ಅಯಾಚಿತವಾಗಿಯೇ ಸಂಪತ್ತು ಅವನನ್ನು ವರಿಸುತ್ತದೆ. ಅಂತಹವನ ನುಡಿಗಳು ಅಮರ ಸತ್ಯಗಳು. ಅವನಿರುವ ಜಾಗವೇ ಇಂದ್ರನ ರಾಜಧಾನಿಯೆಂದು ಪ್ರಸಿದ್ಧವಾದ ಅಮರಾವತಿ. ಯೋಗ-ಭೋಗಗಳ ನೆಲೆವೀಡು. ಸಿರಿಯ ಆವಾಸ. ಆದರೆ ಕಾಮ-ಕ್ರೋಧ-ಮದವೇ ಮೊದಲಾದ ದುಷ್ಟಕೃತಿಗಳು ತುಂಬಿದ ಅರಣ್ಯದಲ್ಲಿ, ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಮೋಜುಗಾರಿಕೆಯಲ್ಲಿ ತಲ್ಲೀನನಾದ ಅವನ ನಡತೆಗೆ ತಕ್ಕ ಉಪಮಾನವೆಂದರೆ ಮದಿಸಿದ ಆನೆ. ಆನೆಯು ತನ್ನ ಮದದಲ್ಲಿ ಸಂಪತ್ತಿಗೆ ಮೂಲವೇ ಸಹಸ್ರಾರದ ಅನುಭವ ಎಂಬುದನ್ನು ಮರೆತು, ಅದಕ್ಕೆ ವಿಮುಖವಾಗಿ ಆ ಕಮಲವನ್ನು ಕೆಡಹುವುದು. ಅಲ್ಲಿಗೆ ಪತನದ ಆರಂಭ.
ಕಾಮಕ್ರೋಧಾದಿ ಅಸುರರು ಅಮರಾವತಿಯನ್ನು ಲೂಟಿಹೊಡೆದು ಅಪಹರಿಸುವರು. ಮನೋರೂಪಿಯಾದ ಇಂದ್ರನು ಮತ್ತೆ ಆ ಸ್ವರ್ಗವನ್ನು ಪಡೆಯಬೇಕಾದರೆ, ಪುಷ್ಕರದಲ್ಲಿ ತಪವನ್ನಾಚರಿಸಬೇಕು. ಪುಷ್ಕರವೆಂಬುದು ಬ್ರಹ್ಮದೇವರಿಗೆ ಪ್ರಿಯವಾದ ತೀರ್ಥ. ಪರಬ್ರಹ್ಮಭಾವಕ್ಕೆ ಪೋಷಕ. ಪುಷ್ಕರವೆಂಬುದು ಅನೇಕ ದಳಗಳಿಂದ ಕೂಡಿದ ಹೂವಾಗಿ ಒಳಧ್ಯಾನವು ಜರುಗುವ ಹೃದಯ ಕಮಲವನ್ನು ಜ್ಞಾಪಿಸುತ್ತದೆ. ಆಯುರ್ವೆದದಲ್ಲಿ ಜ್ವರ ನಿವಾರಣೆಗೆ ಔಷಧವಾಗಿ ಪುಷ್ಕರವನ್ನು ಬಳಸುವುದುಂಟು. ಇಲ್ಲಿ ಮದಜ್ವರವನ್ನು ಇಳಿಸುವ ಔಷಧವಾಗಿ ಇಂದ್ರನಿಗೆ ಉಪಯುಕ್ತವಾಗಿದೆ. ನಮ್ಮೊಳಗಿನ ಮುಡಿಗುಸುಮವನ್ನು ಪೋಷಿಸಿ, ರಕ್ಷಿಸಿ, ನಿಜಯೋಗದ ಅಭ್ಯಾಸವನ್ನು ಬೆಳೆಸಿಕೊಂಡು, ನಮ್ಮ ನಮ್ಮ ಮನದಂಗಳಗಳಲ್ಲಿ ಇಂದ್ರನ ಅಮರಾವತಿಯನ್ನೂ ರೂಪಿಸಿಕೊಂಡು ಸುಖಿಸುವಂತಾಗಲಿ.
(ಲೇಖಕರು ಹೈದರಾಬಾದ್ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕರು)