ಶುದ್ಧ ಮನಸಿನ ಮೂಲ

Edit 4
Published on

| ಕಾಂತೇಶಾಚಾರ್ಯ ಕದರಮಂಡಲಗಿ

ಅವರೊಬ್ಬ ಸಂನ್ಯಾಸಿಗಳು. ವಿರಕ್ತರು. ವೈರಾಗ್ಯವೇ ಅವರಲ್ಲಿ ಭೂಷಣ. ಹೆಸರು ಅಚ್ಯುತಪ್ರೇಕ್ಷರು. ಹೆಸರಿಗೆ ತಕ್ಕಂತೆ ಅಚ್ಯುತನಲ್ಲಿಯೇ ಸದಾ ಮನಸ್ಸುಳ್ಳವರು. ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರಿಗೇ ಸಂನ್ಯಾಸಾಶ್ರಮ ಕೊಟ್ಟ ಭಾಗ್ಯಶಾಲಿಗಳು. ಅಂತಹ ಸೌಭಾಗ್ಯ ಅವರಿಗೆ ಹೇಗೆ ಲಭಿಸಿತು? ‘ಪುರೈಷ ಕೃಷ್ಣಾಸಿದ್ಧಾನ್ನಭುಕ್ಱಾ ಶೋಚಿತಮಾನಸಮ್- ಹಿಂದೆ ಪಾಂಡವರ ಕಾಲದಲ್ಲಿ ದ್ರೌಪದೀದೇವಿಯೇ ಅಡುಗೆ ಮಾಡಿ ಬಡಿಸಿದ ಪರಿಶುದ್ಧವಾದ ಅನ್ನವನ್ನು ಉಂಡವರು ಇವರು. ಹೀಗಾಗಿ ಇವರ ದೇಹ, ಮನಸ್ಸು ಅತ್ಯಂತ ಶುದ್ಧವಾಗಿತ್ತು. ಅಂತೆಯೇ ಶ್ರೀಮಧ್ವಾಚಾರ್ಯರು ಇವರನ್ನೇ ಆಶ್ರಮಗುರುಗಳನ್ನಾಗಿ ಆರಿಸಿದರು. ಪರಿಶುದ್ಧ ಅನ್ನದ ಫಲ ಅದೆಂತಹದು ನೋಡಿ?

ಇದು ಇತಿಹಾಸ. ನಡೆದ ನೈಜಘಟನೆ. ಘಟನೆ ಬಹಳ ಹಿಂದಿನದಾದರೂ ಆಚಂದ್ರಾರ್ಕವಾಗಿ ಎಲ್ಲರಿಗೂ ಬಹುದೊಡ್ಡ ಸಂದೇಶ ನೀಡುತ್ತದೆ. ಇಂದಿನ ಕಾಲ ಬಹಳ ಸೂಕ್ಷ್ಮವಾಗಿದೆ. ಶಾಸ್ತ್ರ ತಿಳಿಸುವಂತೆ ಇಂದು ನಾವೆಲ್ಲ ಅನ್ನಗತಪ್ರಾಣರು. ಉಂಡರೆ ಬದುಕುತ್ತೇವೆ. ಆಹಾರವಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಹೀಗಾಗಿ ಇಂದು ಆಹಾರ ಎಲ್ಲರಿಗೂ ಅತ್ಯಂತ ಅನಿವಾರ್ಯ, ಅವಶ್ಯ. ಸಕ್ಕರೆಕಾಯಿಲೆ ಮುಂತಾದ ರೋಗಿಗಳಂತೂ ಮೇಲಿಂದಮೇಲೆ ಆಹಾರ ಸ್ವೀಕರಿಸುತ್ತಲೇ ಇರಬೇಕು ಎಂದು ವೈದ್ಯರೇ ಸಲಹೆ ನೀಡುವುದನ್ನು ಕೇಳಿದ್ದೇವೆ. ಇದನ್ನೂ ಓದಿ:  ಮತ್ತೆ ನ್ಯೂಕ್ಲಿಯರ್​ ದಾಳಿಯ ಗೊಡ್ಡು ಬೆದರಿಕೆಯನ್ನೊಡ್ಡಿದ ಪಾಕಿಸ್ತಾನ; ಅವರ ಅಸ್ತ್ರ ಪರ್ಫೆಕ್ಟ್​ ಇದ್ಯಂತೆ !

ಆದರೆ, ಆಹಾರ ಹೇಗಿರಬೇಕು? ಹೇಗೆ ಸೇವಿಸಬೇಕು? ಈ ಬಗ್ಗೆಯೂ ಚಿಂತನೆ, ಅರಿವು ಅತ್ಯಗತ್ಯ. ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸೇವಿಸುವುದಲ್ಲ. ಇಂದು ಆಹಾರ ಅನಿವಾರ್ಯವಾದರೂ ಆ ಆಹಾರ ಪರಿಶುದ್ಧವಾಗಿ ಇರಬೇಕು ಎಂಬುದನ್ನು ಮರೆಯುವಂತಿಲ್ಲ. ಸ್ವೀಕರಿಸುವ ಆಹಾರ ಹಿತ-ಮಿತವಾಗಿರಲಿ. ಅದರಿಂದ ಆರೋಗ್ಯಕ್ಕೂ ಹಿತಕರ. ಮನುಷ್ಯನ ಸದ್ಬುದ್ಧಿಗೂ ಅನುಕೂಲ. ಅನ್ನ ಶುದ್ಧವಾಗುವುದು ಎಂದರೆ, ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅನ್ನ ಮಾಡಿದರೆ ಸಾಲದು. ಕಿಂತು ಅದನ್ನು ದೇವರಿಗೆ ಸಮರ್ಪಣೆ ಮಾಡಬೇಕು. ‘ಈಶಾವಾಸ್ಯಮಿದಂ ಸರ್ವಂ, ತೇನ ತ್ಯಕ್ತೇನ ಭುಂಜೀಥಾಃ’- ‘ದೇವರೇ ಕೊಟ್ಟ ಪದಾರ್ಥ. ಅದನ್ನು ದೇವರಿಗೆ, ದೇವತೆಗಳಿಗೆ (ನೈವೇದ್ಯ) ಸಮರ್ಪಣೆ ಮಾಡಿ, ಅತಿಥಿ-ಅಭ್ಯಾಗತರಿಗೆ ಬಡಿಸಿ, ಉಳಿದ ಅನ್ನವೇನಿದೆ ಅದುವೇ ಪರಿಶುದ್ಧವಾದ ಅನ್ನ ಎನ್ನುತ್ತದೆ’ ಮಹಾಭಾರತ. ಇದನ್ನೂ ಓದಿ: ಏರಿಕೆಯಾಗಲಿದೆ ಖೇಲ್‌ರತ್ನ, ಅರ್ಜುನ ಪ್ರಶಸ್ತಿ ಬಹುಮಾನ ಮೊತ್ತ

ಛಾಂದೋಗ್ಯೋಪನಿಷತ್ತು ತಿಳಿಸುವಂತೆ ನಾವು ಉಣ್ಣುವ ಆಹಾರ ನಮ್ಮ ದೇಹಕ್ಕೂ ಶಕ್ತಿ ನೀಡಿ, ಮನಸ್ಸಿಗೂ ಪ್ರೇರಕವಾಗುತ್ತದೆ. ಹೀಗಾಗಿ ಶುದ್ಧವಾದ ಆಹಾರ ಸ್ವೀಕರಿಸಿದರೆ ನಮ್ಮ ಮನಸ್ಸೂ ಶುದ್ಧವಾಗಿ ಇರುತ್ತದೆ. ಅದೇ ಆಹಾರ ಅಶುದ್ಧವಾಗಿದ್ದರೆ ಮನಸ್ಸೂ ಅಶುದ್ಧವಾಗುವುದರಲ್ಲಿ ಸಂಶಯವಿಲ್ಲ.

ಮನಸ್ಸಿನಲ್ಲಿ ದುಷ್ಟವಾದ ಕಾಮ, ಎಲ್ಲರಲ್ಲಿ ಕ್ರೋಧ, ದುಷ್ಟವಾದ ಆಲೋಚನೆಗಳು ಇವುಗಳೆಲ್ಲ ಅಶುದ್ಧಆಹಾರದ ಪರಿಣಾಮವೇ. ಪ್ರಕೃತಿಗೆ ವಿರುದ್ಧವಾಗಿ ಆಹಾರಕ್ರಮ ಬೆಳೆಸಿಕೊಂಡರೆ ಹಲವು ವಿಧವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ವೀಕರಿಸುವ ಆಹಾರ ಶುದ್ಧವಾಗಿದ್ದರೆ, ಮನಸ್ಸು ದುಷ್ಟವಾದ ಕಾಮ-ಕ್ರೋಧಾದಿಗಳಿಂದ ಕಲುಷಿತವಾಗದೇ ನಿರ್ಮಲವಾಗಿ ಇರುತ್ತದೆ. ಉತ್ತಮ ಆಲೋಚನೆಗಳು ಮೂಡುತ್ತವೆ. ಒಳ್ಳೆಯ ಕೆಲಸಗಳನ್ನು ಮಾಡುವುದರಲ್ಲಿ ಪ್ರೇರಿಸುತ್ತದೆ. ಹಾಗಾಗಿ ಶುದ್ಧವಾದ ಆಹಾರದ ಮಹಿಮೆಯನ್ನು ಅರಿತು, ಅನುಷ್ಠಾನಕ್ಕೆ ತಂದು ನಿಜವಾದ ‘ಮಾನವ’ರಾಗಿರೋಣ. ಅಶುದ್ಧ ಆಹಾರದಿಂದ ‘ದಾನವ’ರಾಗುವುದು ಬೇಡ.

(ಲೇಖಕರು ಸಂಸ್ಕೃತ ಸಂಶೋಧಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net