

| ವಿದ್ಯಾ ಉಪೇಂದ್ರ ಜೋಶಿ
ಅಲ್ಲೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ. ತುಂಬ ಕ್ರೂರಿ. ಪ್ರಜೆಗಳಿಗೆ ನಾನಾ ರೀತಿಯಲ್ಲಿ ಕಿರುಕುಳ ಕೊಡುತ್ತಿದ್ದ. ಅದೊಂದು ದಿನ ಸೈನಿಕರೊಂದಿಗೆ ಕುದುರೆಗಳ ಮೇಲೆ ಬರುತ್ತಿದ್ದ. ತುಂಬ ದೂರ ಕ್ರಮಿಸಿದ್ದರಿಂದ ಕುದುರೆಗಳು ದಣಿದವು. ಅವುಗಳ ಮೇವಿನ ಬಗ್ಗೆ ಯೋಚಿಸುತ್ತಿದ್ದಂತೆ, ಅಲ್ಲೊಬ್ಬ ರೈತ ಕಾಣಿಸಿದ. ಆತನನ್ನು ರಾಜ, ‘ನಮ್ಮ ಕುದುರೆಗಳಿಗೆ ಮೇವು ಬೇಕಾಗಿದೆ. ಯಾರ ಹೊಲದಲ್ಲಿ ಮೇವು ಸಮೃದ್ಧಿಯಾಗಿ ದೊರೆಯುತ್ತದೆ’ ಎಂದು ಪ್ರಶ್ನಿಸಿದ.
ರೈತ ಯೋಚಿಸಿದ: ಈ ಕುದುರೆಗಳು ಯಾರ ಹೊಲವನ್ನೇ ಹೊಕ್ಕರೂ ಧ್ವಂಸಮಾಡದೆ ಬಿಡುವುದಿಲ್ಲ. ಬೇರೆಯವರ ಹೊಲಕ್ಕೆ ಬಿಟ್ಟರೂ ಆ ಪಾಪಕೃತ್ಯದ ಫಲ ನನಗೂ ಸೇರುತ್ತದೆ. ಹೀಗಿರುವಾಗ ನನ್ನ ಹೊಲಕ್ಕೆ ಕರೆದೊಯ್ದರಾಯಿತು ಎಂದೆನಿಸಿ ರಾಜನಿಗೆ, ‘ಬನ್ನಿ ಪ್ರಭುಗಳೇ, ಹೊಲ ತೋರಿಸುತ್ತೇನೆ’ ಎಂದ.
ರೈತ ಮುಂದೆ ಮುಂದೆ ನಡೆದ. ಅವನ ಹಿಂದೆ ರಾಜನೂ ಸೈನಿಕರೂ ಕುದುರೆಗಳ ಮೇಲೆ ಹಿಂಬಾಲಿಸಿದರು. ಅಲ್ಲೊಂದು ಹೊಲ ಕಂಡು ರಾಜನು, ‘ಇಲ್ಲಿ ಮೇವು ಸಮೃದ್ಧವಾಗಿದೆ. ಅಲ್ಲವಾ?’ ಎಂದಾಗ, ರೈತ, ‘ಮುಂದಿನ ಹೊಲದಲ್ಲಿ ಇದಕ್ಕಿಂತಲೂ ಹುಲುಸಾದ ಮೇವಿದೆ. ಬೇಗ ಬನ್ನಿ, ಹೋಗೋಣ’ ಎಂದ. ಹೀಗೆಯೇ ಎಷ್ಟೋ ಹೊಲಗಳು ದಾಟಿ ಆಯಿತು. ಅದೇ ಉತ್ತರವನ್ನೇ ಹೇಳುತ್ತ ರೈತ ತನ್ನ ಹೊಲಕ್ಕೇ ಕರೆದುಕೊಂಡು ಬಂದ. ಅಲ್ಲಿ ಮೇವು ಅಷ್ಟೇನೂ ಹುಲುಸಾಗಿ ಬೆಳೆದಿರಲಿಲ್ಲ. ಆದರೂ ರೈತ ಹೇಳಿದ-‘ನೋಡಿ ಸ್ವಾಮಿ, ಈ ಹೊಲದಲ್ಲಿ ಕುದುರೆಗಳನ್ನು ಧಾರಾಳವಾಗಿ ಮೇಯಲು ಬಿಡಬಹುದು’. ರೈತನ ಮೇಲೆ ಕೆಂಗಣ್ಣು ಬೀರುತ್ತ ರಾಜ, ‘ನನ್ನ ಕಣ್ಣಿಗೆ ಮಣ್ಣೇರುಚುತ್ತಿಯಾ? ಈ ಕಳಪೆ ಜೋಳದ ಮೊಟಕುಗರಿಗಳನ್ನು ಮೇಯಲು ಕುದುರೆಗಳನ್ನು ಬಿಡಬೇಕಾ? ಈ ಮೊದಲಿನ ಹೊಲಗಳಲ್ಲಿ ಒಳ್ಳೆಯ ಮೇವಿದ್ದರೂ ಸುಳ್ಳು ಹೇಳಿ ಇಲ್ಲಿಗೇಕೆ ಕರೆದುಕೊಂಡು ಬಂದೆ?’ ಎಂದು ಪ್ರಶ್ನಿಸಿದ.
ರೈತ ಕೈ ಜೋಡಿಸಿ ಹೇಳಿದ-‘ಹಾಗೇನಿಲ್ಲ ಪ್ರಭುಗಳೇ, ಇದು ನನ್ನ ಹೊಲ, ಅಷ್ಟಾಗಿ ಹುಲಸಿಲ್ಲದಿದ್ರೂ ಚಿಂತೆ ಇಲ್ಲ. ನೀವೇನೂ ಮೇವಿಗೆ ಹಣ ಕೊಡುವವರಲ್ಲ ಎಂಬ ವಿಷಯ ರೈತರಿಗೆಲ್ಲರಿಗೂ ತಿಳಿದೇ ಇದೆ. ಆದುದರಿಂದ ಬೇರೆಯವರಿಗೆ ಏಕೆ ನಷ್ಟ ಮಾಡಬೇಕು?’ ಎಂದು ಯೋಚಿಸಿ, ನನ್ನ ಹೊಲಕ್ಕೆ ಕರೆದುಕೊಂಡುಬಂದೆ. ಇತರ ನನ್ನ ಸೋದರ ರೈತರ ಬಗ್ಗೆ ನನಗಿದ್ದ ಮಾನವೀಯತೆ ಈ ರೀತಿ ಮಾಡಿಸಿತು. ತಪ್ಪಾಗಿದ್ದಲ್ಲಿ ಪ್ರಭುಗಳೇ ಕ್ಷಮಿಸಬೇಕು’. ರೈತನ ಮಾತುಗಳನ್ನು ಕೇಳುತ್ತಿದ್ದಂತೆ ರಾಜ ದಂಗು ಬಡಿದಂತಾದ. ತನ್ನ ಅವಿವೇಕ ಬುದ್ಧಿಗಾಗಿ ಮರುಗಿದ. ರಾಜ ರೈತನಿಂದಲೇ ಪಾಠ ಕಲಿತವನಂತೆ ಅವನ ಕೈ ಹಿಡಿದು ಹೇಳಿದ: ‘ನೀನು ನನ್ನ ಅಜ್ಞಾನದ ಕಣ್ಣುಗಳನ್ನು ತೆರೆಸಿದೆ. ಇದಕ್ಕಾಗಿ ನಾನು ಋಣಿ. ಇನ್ನೆಂದೂ ಯಾರಿಗೂ ನನ್ನ ಸ್ವಾರ್ಥಕ್ಕಾಗಿ ತೊಂದರೆಯನ್ನು ಕೊಡುವುದಿಲ್ಲ’. ಮುಂದೆ ರಾಜ ಹಾಗೆಯೇ ನಡೆದುಕೊಂಡ. ಪ್ರಜೆಗಳಿಂದ, ನೆರೆಯ ರಾಜರಿಂದ ಮೆಚ್ಚುಗೆ ಪಡೆದ. ಮನುಷ್ಯ ತನ್ನಲ್ಲಿರುವ ಗುಣ ಮತ್ತು ನಡತೆಯಿಂದ ದೊಡ್ಡವನಾಗುತ್ತಾನೆಯೇ ಹೊರತು ಅವನ ಆಸ್ತಿ, ಅಂತಸ್ತಿನಿಂದಲ್ಲ. ಆಸೆ/ದುರಾಸೆ ರಾಜನನ್ನು ಗುಲಾಮನನ್ನಾಗಿಸುತ್ತದೆ. ಆದರೆ ಅದೇ ತಾಳ್ಮೆ ಗುಲಾಮನನ್ನು ರಾಜನನ್ನಾಗಿಸುತ್ತದೆ.
(ಲೇಖಕಿ ಹವ್ಯಾಸಿ ಬರಹಗಾರ್ತಿ)