ಶ್ವಾಸ ಇರುವವರೆಗೂ ವಿಶ್ವಾಸವಿರಬೇಕು

asdadasd
Published on
|ಸುಮಾವೀಣಾ

ಪುಟ್ಟ ಗುಬ್ಬಚ್ಚಿಯು ಮುಂಗಾರು ಬರುತ್ತಲೆ ಹೊಸ ಗೂಡನ್ನು ನಿರ್ವಿುಸಿಕೊಳ್ಳಲು ನಿರ್ಧರಿಸುತ್ತದೆ. ಎತ್ತರದ ಗಿಡದ ಹೊದರಿನಲ್ಲಿ ತನಗೆ ಸರಿ ಅನ್ನಿಸಿದ ಹಾಗೆ ಗೂಡನ್ನು ಕಟ್ಟಿಕೊಳ್ಳಲು ಪ್ರಾರಂಭಿಸುತ್ತದೆ. ಮನುಷ್ಯರ ಹಾಗೆ ಮನೆ ಕಟ್ಟುವ ಸಾಮಗ್ರಿಗಳನ್ನು ಒಟ್ಟಿಗೆ ದಾಸ್ತಾನು ಮಾಡಿಕೊಳ್ಳಲಾಗುತ್ತದೆಯೇ ಅದಕ್ಕೆ? ಒಂದೊಂದು ಹುಲ್ಲು-ಬಳ್ಳಿಗಳ ತುಣುಕನ್ನು ಒಂದೊಂದಾಗಿ ತರಬೇಕು, ಗೂಡನ್ನು ನೇಯಬೇಕು. ಅಂತೂ ಗೂಡು ಶೇಕಡಾ 99.99 ಮುಗಿದು ಕಡೆಯ ಹೆಣಿಗೆಯೊಂದು ಬಾಕಿ ಉಳಿದಿರುತ್ತದೆ. ಕಡೆಯ ಹುಲ್ಲಿನ ಗರಿಯನ್ನೂ ತರುತ್ತದೆ. ಆದರೆ, ದುರದೃಷ್ಟ ಎಂಬಂತೆ ಗುಬ್ಬಚ್ಚಿ ಗೂಡು ಮುಂಗಾರಿನ ಅಬ್ಬರಕ್ಕೆ ಧರಾಶಾಯಿಯಾಗಿ ಬಿಡುತ್ತದೆ.

ಗುಬ್ಬಚ್ಚಿಗೆ ತಾನೇ ನೇಯ್ದ ಗೂಡು ಮಣ್ಣುಪಾಲಾಗಿರುವುದನ್ನು ಕಂಡು ದುಃಖ ಉಮ್ಮಳಿಸಿ ಬರುತ್ತದೆ, ಕ್ಷಣ ಕಾಲ ಗೂಡಿನ ಅವಶೇಷಗಳನ್ನೇ ನೋಡುತ್ತ ನಿಲ್ಲುತ್ತದೆ. ಕೊಕ್ಕಿನಲ್ಲಿ ಕಡೆಯ ಹುಲ್ಲುಕಡ್ಡಿ ಎಂದು ತಂದದ್ದು ಹಾಗೆಯೇ ಇರುತ್ತದೆ. ಧೈರ್ಯಗುಂದದೆ ಕಡೆಯ ಹುಲ್ಲು ಕಡ್ಡಿ ಈಗ ಹೊಸ ಗೂಡಿಗೆ ಮೊದಲ ಕಡ್ಡಿಯಾಗಿ ನಾಂದಿಯಾಗುತ್ತದೆ ಎಂದು ಮತ್ತೊಮ್ಮೆ ಮಾನಸಿಕ ಶಕ್ತಿ ಸಂಚಯಿಸಿಕೊಂಡು ಹೊಸದೊಂದು ಗೂಡು ನಿರ್ವಿುಸಲು ತೊಡಗುತ್ತದೆ. ಇದು ಗುಬ್ಬಚ್ಚಿ ಗೂಡಿನ ಮರುನಿರ್ವಿುತಿಯ ಕತೆ.

ಬದುಕಿನ ಮೇಲೆ ಯಾವಾಗಲೂ ಪ್ರೀತಿ, ಬದುಕುವ ಹಂಬಲ ಕಡೆಯವರೆಗೂ ಜೀವಂತವಾಗಿರಬೇಕು. ಬದುಕು ಎಂದರೆ ಕಣ್ಣೀರ ಸಂತೆ ಎನ್ನುವ ತೀರ್ಮಾನ ಬೇಕಿಲ್ಲ. ಸಾಸುವೆ ಕಾಳಿನಷ್ಟು ಮಿದುಳನ್ನು ಹೊಂದಿರುವ ಪಕ್ಷಿಯೇ ಧೈರ್ಯಗುಂದುವುದಿಲ್ಲ ಎಂದ ಮೇಲೆ ಬರೋಬ್ಬರಿ ಮುಷ್ಟಿಯಷ್ಟು ಮಿದುಳು ಹೊಂದಿ ವಿವೇಚನಾಯುಕ್ತ, ಬುದ್ಧಿವಂತ ಪ್ರಾಣಿ ಎನಿಸಿರುವ ಮನುಷ್ಯ ಏಕೆ ಎದೆಗುಂದಬೇಕು? ತಾಳುವಿಕೆಯ ಗುಣ ಇಂದಿಗೆ ಮನುಷ್ಯನಲ್ಲಿ ಕಡಿಮೆಯಾಗುತ್ತಿದೆ. ಎಲ್ಲವೂ ನಿಂತ ನೆಲೆಯಲ್ಲಿ ಆಗಬೇಕು ಎನ್ನುವ ತವಕ. ಹಾಗೊಮ್ಮೆ ಆಗಲಿಲ್ಲ ಎಂದರೆ ಆತುರದ ಜೀವಘಾತುಕ ನಿರ್ಧಾರವನ್ನು ತೆಗೆದುಕೊಂಡು ಬಿಡುವುದು ಇಲ್ಲವೇ ಖಿನ್ನತೆಗೆ ಜಾರಿಬಿಡುವುದು.

ಬದುಕಿನ ಮೇಲೆ ವಿಶ್ವಾಸ ಎನ್ನುವುದು ಕಡಿಮೆಯಾಗುತ್ತಿದೆ. ಕಾರಣ ಆಧುನಿಕ ಪರಿಪ್ರೇಕ್ಷಗಳು. ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಇನಸ್ಟಂಟ್ ಫುಡ್​ಗೆ ದಾಸರಾಗಿರುವ ನಾವು ಬದುಕಿನ ಪ್ರಚಲನೆಯೂ ಹಾಗಿರಬೇಕು ಎಂದು ಬಯಸುತ್ತೇವೆ. ಮನುಷ್ಯರಿಗೆ ಅವಸರವಿದೆ. ಆದರೆ, ಪ್ರಕೃತಿಗೆ ಅವಸರವಿಲ್ಲ. ಗೊನೆ ಮೂಡಿ ಬಾಗಿ ಬಾಳೆ ಗೊನೆ ಹಣ್ಣಾಗುವಂತೆ ಯಾವ ಯಾವ ಕಾಲಕ್ಕೆ ಏನು ಬೇಕು ಎನ್ನುವುದು ನಮಗಿಂತ ಸೂಕ್ಷ್ಮವಾಗಿ ಪ್ರಕೃತಿಗೆ ತಿಳಿದಿದೆ. ಹೀಗಿದ್ದ ಮೇಲೆ ಬಾಳಿನ ಎಲ್ಲ ಬದಲಾವಣೆಗಳಿಗೂ ಸುಖ -ದುಃಖಗಳಿಗೂ ಮನುಷ್ಯನೂ ಅತಿ ಎನ್ನುವ ಹಾಗೆ ಪ್ರತಿಕ್ರಿಯಿಸದೆ ಸಹಜವಾಗಿ ಸ್ಪಂದಿಸಬೇಕಿದೆ. ಬೇಡ ಎಂದರೂ, ಹಣೆ ಚಚ್ಚಿಕೊಂಡರೂ ಆಗುವುದೇ ಆಗುವುದು. ವಸ್ತುಸುಖ ಶಾಶ್ವತವಲ್ಲ, ಬದಲಿಗೆ ಅಗಾಧ ವಿಶ್ವಾಸವೇ ನಮ್ಮ ಬಾಳಪಯಣದ ಊರುಗೋಲು. ಅಚಲವಾದ ನಂಬಿಕೆ ಇದ್ದಲ್ಲಿ ಮನುಷ್ಯ ಸುಖಾಂಬುಧಿಯ ಬದುಕನ್ನು ಬದುಕಬಹುದು. ಹಾಗಾಗಿ ನೆಲವನ್ನು ಗುದ್ದುವ, ಬೆಟ್ಟವನ್ನು ತಳ್ಳುವ, ಕಲ್ಲನ್ನೇ ಜೀರ್ಣಿಸಿಕೊಳ್ಳುವ ಕ್ಷಮತೆ ಇಲ್ಲದಿದ್ದರೂ ಕಡೆಯ ಶ್ವಾಸವಿರುವವರೆಗೂ ವಿಶ್ವಾಸವನ್ನು ಕಳೆದುಕೊಳ್ಳಬಾರದು.

(ಪ್ರತಿಕ್ರಿಯಿಸಿ;manollasavv@gmail.com)

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net