

| ಮಹಾದೇವ ಬಸರಕೋಡ
ಸಂತರೊಬ್ಬರು ತಾವು ಒಂದು ಬಾರಿಯೂ ಫುಟ್ಬಾಲ್ ಪಂದ್ಯ ನೋಡಿಲ್ಲ ಎಂದು ಒಮ್ಮೆ ನುಯಾಯಿಗಳ ಮುಂದೆ ಆಕಸ್ಮಿಕವಾಗಿ ನುಡಿದರು. ಕೆಲ ದಿನಗಳ ಬಳಿಕ ಅನುಯಾಯಿಗಳು ಅವರನ್ನು ಆಗ್ರಹಪೂರ್ವಕವಾಗಿ ಫುಟ್ಬಾಲ್ ಪಂದ್ಯವನ್ನು ನೋಡಲು ಕರೆದುಕೊಂಡು ಹೋದರು. ದಿಗ್ಗಜ ತಂಡಗಳ ನಡುವೆ ಸಮಬಲ ಹೋರಾಟದಿಂದ ಪಂದ್ಯ ತುಂಬ ರೋಚಕತೆಯಿಂದ ನಡೆಯುತ್ತಿತ್ತು. ಈ ಸಂತರು ತನ್ಮಯರಾಗಿ ಫುಟ್ಬಾಲ್ ಪಂದ್ಯವನ್ನು ನೋಡತೊಡಗಿದರು. ತಂಡವೊಂದು ಗೋಲು ಗಳಿಸುವ ಕೊನೆಕ್ಷಣದಲ್ಲಿತ್ತು. ಇವರು ಉತ್ಸಾಹದಿಂದ ಎದ್ದು ನಿಂತು, ತಂಡ ಗೋಲು ಗಳಿಸಿದ ತಕ್ಷಣ ತಲೆಯ ಮೇಲಿನ ಟೋಪಿಯನ್ನು ಬೀಸುತ್ತ, ಎತ್ತರಕ್ಕೆ ಹಾರಿಸುತ್ತ ಸಂತಸ ವ್ಯಕ್ತಪಡಿಸಿದರು. ಮತ್ತೆ ಪಂದ್ಯ ಮುಂದುವರಿಯಿತು. ಈ ಬಾರಿ ಎದುರಾಳಿ ತಂಡದ ಕೈಮೇಲಾಗತೊಡಗಿತು. ಅವರು ಗಮ್ಯದತ್ತ ಬಾಲ್ ತಳ್ಳಿಕೊಂಡು ಬರತೊಡಗಿದರು. ಸಂತರು ಸಂಭ್ರಮಿಸತೊಡಗಿದರು. ಎದುರಾಳಿ ತಂಡ ಗೋಲು ಗಳಿಸಿತು. ಸಂತರು ಮೊದಲಿನ ರೀತಿಯಲ್ಲಿಯೇ ಟೋಪಿ ಹಾರಿಸಿ ಜೋರಾಗಿ ಕೂಗಿ ಸಂತಸ ವ್ಯಕ್ತಪಡಿಸಿದರು. ಇದನ್ನು ಗಮನಿಸುತ್ತಿದ್ದ ಅನುಯಾಯಿಗಳು ಗೊಂದಲಕ್ಕೆ ಒಳಗಾಗಿ, ಕೇಳಿದರು, ‘ತಾವು ಯಾವ ತಂಡದ ಪರವಾಗಿದ್ದೀರಿ?’ ಸಂತರು ಸಹಜವಾಗಿ ಉತ್ತರಿಸಿದರು-‘ನಾನು ಯಾರ ಪರವಾಗಿಯೂ ಇಲ್ಲ. ನಾನು ಕೇವಲ ಪಂದ್ಯದ ರೋಚಕತೆಯನ್ನು ಆನಂದಿಸುತ್ತಿದ್ದೇನೆ. ನನಗೆ ಅದುಮಾತ್ರವೇ ಮುಖ್ಯವಾಗಿ ಕಾಣುತ್ತಿದೆಯೇ ಹೊರತು ಇನ್ನಾವುದೂ ಅಲ್ಲ’. ಇದನ್ನೂ ಓದಿ: ಮನೋಲ್ಲಾಸ: ಧನದ ಪರಿವರ್ತನೆ ಹೇಗೆ?
ಇದುವೇ ನಿಜವಾದ ಆನಂದವನ್ನು ಅನುಭವಿಸುವ ರೀತಿ. ಬದುಕಿನಲ್ಲಿ ಬಂದ ಕ್ಷಣಗಳ ರೋಚಕತೆ ಅರ್ಥ ಮಾಡಿಕೊಂಡು, ಅದನ್ನು ಸಾರ್ಥಕ ಪಡಿಸಿಕೊಳ್ಳುವುದೇ ವಿಶೇಷ. ಆದರೆ, ಯಾವುದರೊಡನೆಯಾದರೂ ಭಾವನಾತ್ಮಕವಾಗಿ ಅತಿಯಾಗಿ ಬೆಸೆದುಕೊಂಡರೆ ಅದು ನಮ್ಮನ್ನು ಕ್ಲೇಶಗಳಿಗೆ ತಳ್ಳುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ನಾವು ಚಲನಶೀಲಗೊಳಿಸುವ ವಿಚಾರವಂತಿಕೆಯನ್ನು ನಮ್ಮದಾಗಿಸಿಕೊಳ್ಳಬೇಕು. ಮತ್ತೆ ಮತ್ತೆ ಯಾವುದೋ ಸಿದ್ಧಸೂತ್ರಗಳನ್ನು ಅವಲಂಬಿಸುವುದು ಜಾಣತನವಾಗಲಾರದು.
ಪ್ರತಿಯೊಂದು ಕ್ಷಣವೂ ಆನಂದವನ್ನು ಕಂಡುಕೊಳ್ಳಬೇಕೆಂಬುದು ಮನುಷ್ಯನ ಮೂಲಬಯಕೆ. ನಮ್ಮ ಆಂತರ್ಯದಲ್ಲಿರುವ ಆನಂದದ ಅಸ್ತಿತ್ವ ಅರಿಯಲು ನಾವು ಒಂದಷ್ಟು ನಿರ್ಭಾವುಕರಾಬೇಕು. ಮೂಲ ಅಸ್ತಿತ್ವದೊಡನೆ ನಮ್ಮನ್ನು ಮಿಳಿತಗೊಳಿಸಿಕೊಳ್ಳಬೇಕು. ಆನಂದವೇ ಬದುಕಿನ ಮೂಲಾಧಾರ ಎಂಬ ಸತ್ಯವನ್ನು ಅರಿಯಬೇಕು. ಇದು ಬದುಕಿನ ಚೆಲುವನ್ನು ಅನುಭವಿಸಲು ಸಹಕಾರಿಯಾಗುತ್ತದೆ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)