ಕೆಲವೊಮ್ಮೆ ನಾವು ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸಲು ಕಾರಣ ನಮ್ಮ ಎಡಬಿಡಂಗಿತನ...

Manollasa Image 27 Jan 20
Published on

ಅರಮನೆಯೊಂದರಲ್ಲಿ, ರಾಣಿಯ ಅತ್ಯಮೂಲ್ಯವಾದ ಹಾರವೊಂದು ಕಳುವಾಯಿತು. ಈ ಸುದ್ದಿಯನ್ನು ತಿಳಿದ ರಾಜನಿಗೆ, ಇಷ್ಟೊಂದು ಸುರಕ್ಷತೆ ನಡುವೆಯೂ ಸ್ನಾನಗೃಹದಿಂದ ಹಾರವನ್ನು ಕಳುವು ಮಾಡಿದ್ದಾನೆಂದರೆ ಅವನು ಸಾದಾ ಕಳ್ಳನಾಗಿರದೆ ಮಹಾ ಚಾಣಾಕ್ಷ ಕಳ್ಳನೇ ಇರಬೇಕು ಎಂದೆನಿಸಿತು. ಕೂಡಲೇ ಡಂಗುರ ಹೊಡಿಸಿದ. ‘ಈ ಹಾರವನ್ನು ಕದ್ದ ಕಳ್ಳನು ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಅರಮನೆ ಮುಂಭಾಗದಲ್ಲಿರುವ ಪ್ರಾಂಗಣಕ್ಕೆ ಬರಬೇಕು. ಅವನಿಗೆ ಯಾವ ಶಿಕ್ಷೆಯೂ ವಿಧಿಸಲ್ಪಡುವದಿಲ್ಲ. ಬದಲಾಗಿ ಅವನ ಚಾತುರ್ಯಕ್ಕೆ ಮೆಚ್ಚಿ ಯೋಗ್ಯ ಸತ್ಕಾರ ಮಾಡಲಾಗುವುದು’. ಅದನ್ನು ಕೇಳಿ ಆ ಊರಲ್ಲಿಯ ಒಬ್ಬ ವ್ಯಕ್ತಿ-‘ಕೇವಲ ಕಳ್ಳನೆನಿಸಿಕೊಂಡ ಮಾತ್ರಕ್ಕೆ ಸನ್ಮಾನ ಸಿಗುವುದಾದರೆ ನಾನೇಕೆ ಪ್ರಯತ್ನಿಸಬಾರದು?’ ಅಂತ ಯೋಚಿಸಿದ. ಮರುದಿನ ಕಳ್ಳನಂತೆ ಪೋಷಾಕು ಹಾಕಿಕೊಂಡು ನಿಗದಿ ಪಡಿಸಿದ ಜಾಗಕ್ಕೆ ಬಂದ. ಅಲ್ಲಿ ತನ್ನ ಹಾಗೆ ಬೇರೆ ಯಾರಾದರೂ ಬಂದಿರುವರೋ ಎಂದು ನೋಡಿ ಖಚಿತ ಪಡಿಸಿಕೊಂಡ. ಯಾರೂ ಇರಲಿಲ್ಲ. ನಿಜವಾದ ಕಳ್ಳನು ಯಾವಾಗಲೋ ರಾಜ್ಯವನ್ನು ದಾಟಿ ಹೋಗಿ ಬಿಟ್ಟಿದ್ದ.

‘ಇಂದು ಸ್ವತಃ ರಾಣಿಯಿಂದಲೇ ನನ್ನ ಸತ್ಕಾರ ಆಗಬಹುದು’ ಎಂದು ಮನದಲ್ಲಿಯೇ ಎಣಿಸುತ್ತ ಮುಂದುವರಿದ. ಪ್ರಾಂಗಣದ ಮಧ್ಯದಲ್ಲಿ ಕಾಲಿಡುತ್ತಲೇ ದ್ವಾರಪಾಲಕರು ತಡೆದು ವಿಚಾರಿಸಿದರು. ಇವನು ತಾನೇ ಕಳ್ಳನೆಂದು ಹೇಳಿಕೊಳ್ಳುವುದೇ ತಡ ಅಲ್ಲಿ ಸೇರಿದ ಜನ ಅವನನ್ನು ಬಡಿಯಲಾರಂಭಿಸಿದರು. ಸಣ್ಣವರು ದೊಡ್ಡವರು ಎನ್ನದೆ ಎಲ್ಲರೂ ‘ಕಳ್ಳ ಕಳ್ಳ’ ಎಂದು ಅವನನ್ನು ಬಡಿದರು. ತಾನು ಕಳ್ಳನಲ್ಲವೆಂದು ಅವನು ಜೋರಾಗಿ ಕಿರುಚತೊಡಗಿದರೂ ಯಾರೂ ಕೇಳಿಸಿಕೊಳ್ಳಲಿಲ್ಲ. ಆಗ ಅವನಿಗನಿಸಿತು ಕಳ್ಳನೆನಿಸಿಕೊಳ್ಳುವುದೂ ಅಷ್ಟು ಸುಲಭವಲ್ಲವೆಂದು. ಒಂದು ವೇಳೆ ಅವನು ನಿಜವಾದ ಕಳ್ಳನೇ ಆಗಿದ್ದರೆ ಎಲ್ಲರನ್ನೂ ಎದುರಿಸಿ ರಾಜನ ಹತ್ತಿರ ಹೋಗಿ ಕೊಟ್ಟ ಮಾತಿನಂತೆ ತನಗೆ ಸನ್ಮಾನ ಮಾಡಲು ಕೇಳಬಹುದಾಗಿತ್ತು. ಆದರೆ ಅವನು ಹುಸಿ ಕಳ್ಳನಾದ್ದರಿಂದ ಸನ್ಮಾನವಂತೂ ದೂರದ ಮಾತು, ತಾನು ಕಳ್ಳನಲ್ಲವೆಂದರೂ ಯಾರೂ ಕೇಳದ ಪರಿಸ್ಥಿತಿಯಾಯಿತು.

ಕೆಲವೊಂದು ಸಲ ನಾವು ಏನೂ ಅಪರಾಧ ಅಥವಾ ತಪ್ಪು ಮಾಡದಿದ್ದರೂ ಶಿಕ್ಷೆ, ಕಷ್ಟ ಅನುಭವಿಸುವುದೇಕೆ ಎಂದು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾವು ಮಾಡುವ ಎಡಬಿಡಂಗಿತನವೇ ಇದಕ್ಕೆ ಕಾರಣ ಎಂದೆನಿಸುತ್ತದೆ. ಈ ಸಂಸಾರವು ನಮ್ಮನ್ನು ಬಂಧನಕ್ಕೆ ಸಿಲುಕಿಸಿ ಗೋಳಾಡಿಸುತ್ತಿದೆ ಎಂದು ದೂರುತ್ತ ಮುಕ್ತಿಯೆಡೆಗೆ ಧಾವಿಸುತ್ತೇವೆ. ಆದರೆ, ಈ ಸಂಸಾರವನ್ನು ನಾವೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದೇವೆ ಎಂಬ ವಾಸ್ತವವನ್ನು ಅರಿತು ಅದನ್ನು ಸಡಲಿಸಿ ಅಂತರಂಗದಲ್ಲಿ ವಿರಕ್ತನಾಗಿ ಕಮಲದೆಲೆಯ ಹಾಗೆ ಬಾಳಿದರೆ ಯಾವ ಕೆಸರೂ ಅಂಟಿಕೊಳ್ಳುವುದಿಲ್ಲ. ಸಂತ ಜ್ಞಾನೇಶ್ವರರು, ‘ಬಂಧನವೇ ಇಲ್ಲದ ಸ್ಥಿತಿ ಇರುವಾಗ ಮುಕ್ತಿಯತ್ತ ಹೊರಳುವುದೇತಕ್ಕೆ?’ ಎಂದಿದ್ದಾರೆ. ಜೈಲಿನೊಳಗಡೆ ಇರುವ ವ್ಯಕ್ತಿ ಬಿಡುಗಡೆಗೆ ಕಾತರಿಸುತ್ತಾನೆಯೇ ಹೊರತು ಹೊರಗಡೆ ಇರುವ ವ್ಯಕ್ತಿ ಅಲ್ಲ. ಯಾರಿಗೆ ಬಂಧನವೇ ಇಲ್ಲವೋ ಅವನು ಯಾವಾಗಲೂ ಜೀವನ್ಮುಕ್ತನು ಅಲ್ಲವೇ?

| ಚಿದಂಬರ ಮುನವಳ್ಳಿ

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net