ಮನೋಲ್ಲಾಸ: ನಿರ್ಮಲ, ನಿಶ್ಚಲ ಭೀಮಭಕ್ತಿ

Bhima-Manollasa Image
Published on

ಭೀಮನ ಭಕ್ತಿ ಕುರಿತಾಗಿ ಮಹಾಭಾರತದಲ್ಲಿ ಒಂದು ಸುಂದರ ಕಥೆ ಇದೆ. ಸಾಮಾನ್ಯವಾಗಿ ಪಾಂಡವರಲ್ಲಿ ಭೀಮನು ಸ್ವಲ್ಪ ಒರಟ ಹಾಗೂ ಹೊಟ್ಟೆಬಾಕನಂತೆ ಕಾಣುತ್ತಾನೆ. ಆದರೆ ಅವನ ಮನಸ್ಸು ಮತ್ತು ದೈವಭಕ್ತಿ ಎಷ್ಟು ವಿಶಿಷ್ಟ ಎಂಬುದು ಈ ಕಥೆಯಿಂದ ತಿಳಿಯುತ್ತದೆ.

ಒಂದು ದಿನ ಪ್ರಾತಃಕಾಲದಲ್ಲಿ ಎಂದಿನಂತೆ ಧರ್ಮರಾಯನು ಭಕ್ತಿಪೂರ್ವಕವಾಗಿ ಮನೆದೇವರಿಗೆ ಪೂಜೆ ಸಲ್ಲಿಸಿದ. ಮಂಗಳಾರತಿಯ ಸಮಯವಾಗಿದೆ. ಧರ್ಮರಾಯ ನೋಡುತ್ತಾನೆ ಭೀಮನೊಬ್ಬನ ಹೊರತು ಉಳಿದವರು ಬಂದಿದ್ದಾರೆ. ‘ಈ ಭೀಮ ಯಾವಾಗಲೂ ಹೀಗೇ. ಹೊಟ್ಟೆ ತುಂಬ ತಿನ್ನುವುದು ಮತ್ತು ಮಲಗುವುದು. ದೇವರಪೂಜೆಗೆ ಏಳದಷ್ಟು ಆಲಸ್ಯವೇ ಇವನಿಗೆ?’ ಎಂದು ಸ್ವಲ್ಪ ಅಸಹನೆಯಿಂದಲೇ ಭೀಮ ಮಲಗಿದ್ದಲ್ಲಿಗೆ ಹೋಗಿ ಅವನ ಮುಸುಕನ್ನು ಹಿಡಿದು ಎಳೆದ. ಆಗ ಅದರ ಒಳಗಿನಿಂದ ಭಗ್ಗನೆ ಬೆಂಕಿಯ ಜ್ವಾಲೆ ಕಾಣಿಸಿತು. ಬೆರಗಾದ ಧರ್ಮರಾಯ ಏನೂ ಮಾತಾಡದೆ ಪೂಜೆಯನ್ನು ಮುಗಿಸಿದ. ಇದಾದ ಕೆಲವೇ ದಿನಗಳಲ್ಲಿ ಅಲ್ಲಿಗೆ ಶ್ರೀಕೃಷ್ಣನ ಆಗಮನವಾಯಿತು. ಆತ ಪಾಂಡವರ ಬಂಧು ಮಾತ್ರವಲ್ಲ ಸದಾ ಅವರ ಹಿತೈಷಿಯೂ ಆಗಿದ್ದ. ಆತನನ್ನು ಯಥೋಚಿತವಾಗಿ ತನ್ನ ತಮ್ಮಂದಿರೊಡನೆ ಕೂಡಿ ಧರ್ಮರಾಯನು ಸತ್ಕರಿಸಿದ. ಬಳಿಕ ಧರ್ಮರಾಯನು, ‘ಕೃಷ್ಣಾ, ನಿನ್ನೊಂದಿಗೆ ಏಕಾಂತದಲ್ಲಿ ಸ್ವಲ್ಪ ಮಾತನಾಡುವುದಿದೆ. ಮನಸ್ಸಿನಲ್ಲಿ ಕೆಲವು ದಿನಗಳಿಂದ ಒಂದು ಪ್ರಶ್ನೆ ಕಾಡುತ್ತಿದೆ. ನೀನಲ್ಲದೆ ಇದಕ್ಕೆ ಉತ್ತರ ಕೊಡುವವರು ಬೇರಾರೂ ಇಲ್ಲ. ನನ್ನ ಸಂದೇಹ ಪರಿಹರಿಸುವೆಯಾ?’ ಎಂದು ಕೈ ಮುಗಿದು ಪ್ರಾರ್ಥಿಸಿದ. ಅದಕ್ಕೆ ಕೃಷ್ಣನು, ‘ಇಷ್ಟಕ್ಕೆ ಇಷ್ಟೊಂದು ಪ್ರಾರ್ಥನೆಯ ಅಗತ್ಯವಿದೆಯೇ? ಖಂಡಿತ ನಿನ್ನ ಸಂಶಯವನ್ನು ಪರಿಹರಿಸುವೆನು’ ಎಂದು ಆತನೊಂದಿಗೆ ನಡೆದ. ಧರ್ಮರಾಯನು ತಾನು ಮಂಗಳಾರತಿ ಸಮಯದಲ್ಲಿ ಭೀಮನು ಎದ್ದು ಬರಲಿಲ್ಲವೆಂದು ಆತನ ಹೊದಿಕೆಯನ್ನು ಎಳೆದಾಗ ಬೆಂಕಿಯ ಜ್ವಾಲೆ ಬಂದ ವೃತ್ತಾಂತವನ್ನು ಹೇಳಿ ಅದರ ರಹಸ್ಯ ಏನೆಂದು ಕೇಳಿದ.

ಅದಕ್ಕೆ ಕೃಷ್ಣನು ಮುಗುಳ್ನಗೆ ನಕ್ಕು, ‘ಧರ್ಮಜಾ, ಭೀಮನು ನೀನೆಣಿಸಿದಂತೆ ಕೇವಲ ಉಂಡಾಡಿ ನಾಸ್ತಿಕನಲ್ಲ. ಆತ ಬಹು ದೊಡ್ಡ ಭಕ್ತ. ಆತ ಎಂಥ ಭಕ್ತ ಎಂದರೆ ಕೇವಲ ಮೂರೂಮುಕ್ಕಾಲು ಗಳಿಗೆಯಲ್ಲಿ ಸಾಕ್ಷಾತ್ ಪರಮಾತ್ಮನನ್ನು ಒಲಿಸಿಕೊಳ್ಳಬಲ್ಲ ಧೀಮಂತ. ಆತನ ಭಕ್ತಿ ಹೊರಗೆ ಯಾರಿಗೂ ಕಾಣದಿದ್ದರೂ ಮನದಲ್ಲಿ ಇರುವ ಪರಮಾತ್ಮನು ಕಾಣುತ್ತಾನೆ. ನೀನು ಅವನ ಹೊದಿಕೆಯನ್ನು ಎಳೆದಾಗ ನಿನಗೆ ಕಂಡದ್ದು ಅವನ ಮಾನಸ ಪೂಜೆಯ ಮಂಗಳಾರತಿ. ಅರ್ಥವಾಯಿತೇ’ ಎಂದು ಕೇಳಿದ. ಧರ್ಮರಾಯ ಅಚ್ಚರಿಗೊಂಡು, ಆ ಮಾತುಗಳನ್ನು ಅರ್ಥ ಮಾಡಿಕೊಂಡ.

ನಾವೂ ಹೀಗೇ ಅಲ್ಲವೇ? ಒಂದು ವಿಷಯ ನಮಗೆ ನೆನಪಿರಲಿ. ಅಂತರ್ಯಾಮಿಯಾದ ಪರಮಾತ್ಮ ಪ್ರತಿ ಜೀವಿಗಳ ಆಂತರ್ಯವನ್ನು ನೋಡುತ್ತಿರುತ್ತಾನೆ. ಅದು ನಿರ್ಮಲವಾಗಿದ್ದರೆ ಅಲ್ಲಿ ಆತನ ಪೂಜೆ ಸದಾ ನಡೆಯುತ್ತಿರುತ್ತದೆ. ಶಂಕರಾಚಾರ್ಯರು ಶಿವ ಮಾನಸ ಪೂಜೆಯಲ್ಲಿ ‘ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ’ ಎಂದರೆ ‘ಹೇ ಶಂಭೋ, ನಾನು ಯಾವುದೇ ಕರ್ಮಗಳನ್ನು ಮಾಡಿದರೂ ಅದು ನಿನ್ನ ಆರಾಧನೆ ಆಗಿರಲಿ’ ಎಂದಿದ್ದಾರೆ. ಇಂಥ ಭಕ್ತಿಯನ್ನು ಬೆಳೆಸಿಕೊಳ್ಳಲು ನಾವೂ ಪ್ರಯತ್ನಿಸೋಣ. ಬಾಹ್ಯಾಡಂಬರವಿಲ್ಲದ ನಿರ್ಮಲ ನಿಶ್ಚಲ ಭೀಮಭಕ್ತಿ ನಮ್ಮದಾಗಲಿ.

(ಕೆ.ಸುಮಂಗಲಾ ಲೇಖಕರು ಬಿಎಸ್​ಎನ್​ಎಲ್ ನಿವೃತ್ತ ಅಧೀಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net