'ಕುಡುಕರಿಗೆ, ಮೂರ್ಖರಿಗೆ, ಮತಿಹೀನರಿಗೆ, ಕೋಪಿಷ್ಠರಿಗೆ ಉಪದೇಶ ಮಾಡಬಾರದು...'

Manollasa 29 Jan 20
Published on
ಒಂದು ದಿನ ಮುಸ್ಸಂಜೆ ಹೊತ್ತಿನಲ್ಲಿ ಸ್ವಾಮೀಜಿಯೊಬ್ಬರು ಶಿಷ್ಯರೊಂದಿಗೆ ಸಮುದ್ರತೀರಕ್ಕೆ ವಾಯುವಿಹಾರಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ವಿಚಿತ್ರ ಪ್ರಸಂಗವೊಂದನ್ನು ಕಂಡರು. ಅಲ್ಲಿ ಒಬ್ಬ ಕುಡುಕ ಬಿಂದಿಗೆಯಿಂದ ಸಮುದ್ರದ ನೀರನ್ನು ತೆಗೆದುಕೊಂಡು ಸಮುದ್ರದ ಬಳಿ ಇರುವ ತೆಂಗಿನ ಮರಗಳಿಗೆ ಹಾಕುತ್ತಿದ್ದ. ಇದನ್ನು ಗಮನಿಸಿದ ಸ್ವಾಮೀಜಿ ಅವನನ್ನು ಕೇಳಿದರು-‘ನೀನ್ಯಾಕೆ ಸಮುದ್ರದ ನೀರನ್ನು ತೆಂಗಿನಮರಗಳಿಗೆ ಹಾಕುತ್ತಿರುವೇ?’ ಆತ-‘ಸಮುದ್ರದಲ್ಲಿ ಎಷ್ಟೊಂದು ನೀರಿದೆ! ಸುಮ್ಮನೆ ಪೋಲಾಗುತ್ತಿದೆ. ಹಾಗಾಗಿ ಈ ನೀರನ್ನು ಮರ-ಗಿಡಗಳಿಗೆ ಹಾಕಿ ಸಮುದ್ರದ ನೀರನ್ನು ಖಾಲಿ ಮಾಡಬೇಕೆಂದುಕೊಂಡಿರುವೆ’ ‘ಈ ಅಗಾಧವಾದ ಜಲರಾಶಿಯನ್ನು ನಿನ್ನಿಂದ ಬತ್ತಿಸಲು ಸಾಧ್ಯವೇ?’ ಎಂದಾಗ ಕುಡುಕ-‘ಯಾಕೆ ಸಾಧ್ಯವಿಲ್ಲ? ಬಾವಿಯಿಂದ ನೀರನ್ನು ತೆಗೆದು ತೆಗೆದು ಖಾಲಿ ಮಾಡಿದಂತೆಯೇ ಸಮುದ್ರದ ನೀರನ್ನು ಖಾಲಿ ಮಾಡಲು ಸಾಧ್ಯ’ ಎಂದ. ಅವನ ಮಾತನ್ನು ಆಲಿಸಿದ ಸ್ವಾಮೀಜಿ, ‘ಆಗಲಪ್ಪ, ನಿನ್ನ ಕಾಯಕದಲ್ಲಿ ಮುಂದುವರಿ’ ಎಂದು ಮುಗುಳ್ನಗುತ್ತ ಅಲ್ಲಿಂದ ತೆರೆಳಿದರು.

ಇವರಿಬ್ಬರ ಸಂಭಾಷಣೆ ಗಮನಿಸಿದ ಶಿಷ್ಯಂದಿರು, ‘ಗುರುಗಳೇ, ಸಮುದ್ರದ ನೀರನ್ನು ಬತ್ತಿಸಲು ಸಾಧ್ಯವಿಲ್ಲ ಎಂದು ನೀವ್ಯಾಕೆ ಅವನಿಗೆ ತಿಳಿಹೇಳಲಿಲ್ಲ?’ ಎಂದು ಕೇಳಿದರು. ಆಗ ಸ್ವಾಮೀಜಿ, ‘ಅವನು ಸಮುದ್ರದ ನೀರನ್ನು ಅಲ್ಲೇ ಇರುವ ತೆಂಗಿನ ಮರಗಳಿಗೆ ಹಾಕುವ ಉದ್ದೇಶವೇನೆಂದು ತಿಳಿದುಕೊಳ್ಳುವ ಜಿಜ್ಞಾಸೆ ನನಗಿತ್ತು. ಹಾಗಾಗಿ ಅವನಲ್ಲಿ ಕೇಳಿದೆ. ಆದರೆ ಸಮುದ್ರದ ನೀರನ್ನು ಬತ್ತಿಸಲು ಸಾಧ್ಯವಿಲ್ಲ ಎಂಬ ನನ್ನ ಮಾತನ್ನು ಕೇಳಿ ತಿಳಿದುಕೊಳ್ಳುವ ಮನಸ್ಥಿತಿ ಅವನಲ್ಲಿಲ್ಲ. ಕುಡಿತದ ನಶೆ ಇಳಿದಾಗ ಅವನಿಗೆ ತನ್ನ ಕೆಲಸ ವ್ಯರ್ಥವೆಂದು ತಿಳಿಯುತ್ತದೆ. ನಿಜವಾಗಿ ಉಪದೇಶ ಅವನಿಗಲ್ಲ, ನಿಮಗೆ ಅಗತ್ಯವಿದೆ’ ಎಂದರು.

‘ನಮಗೇನು ಉಪದೇಶ ಗುರುಗಳೇ?’ ಎಂಬ ಪ್ರಶ್ನೆಗೆ, ‘ಕುಡುಕರಿಗೆ, ಮೂರ್ಖರಿಗೆ, ಮತಿಹೀನರಿಗೆ, ಕೋಪಿಷ್ಠರಿಗೆ ಉಪದೇಶ ಮಾಡಬಾರದು, ಯಾಕೆಂದರೆ ಅವರ ಬುದ್ಧಿ ಅವರ ಕೈಯಲ್ಲಿಲ್ಲ. ವಿಷಯ ತಿಳಿದುಕೊಳ್ಳುವ ಮನಸ್ಥಿತಿ ಅವರಿಗಿರುವುದಿಲ್ಲ. ಅವರಿಗೆ ತಿಳಿ ಹೇಳಿದರೆ ಬರೀ ವಿವಾದವೇ ಸೃಷ್ಟಿಯಾಗುತ್ತದೆ. ಅವರಲ್ಲಿ ವಿವೇಕ ಶೂನ್ಯವಾಗಿರುತ್ತದೆ. ಅಂಥ ಸಮಯದಲ್ಲಿ ನಮ್ಮ ಉಪದೇಶ ಕೂಡ ವ್ಯರ್ಥವಾಗುತ್ತದೆ. ಸಮುದ್ರದ ನೀರನ್ನು ಅಲ್ಲೇ ಇರುವ ತೆಂಗಿನಮರಕ್ಕೆ ಹಾಕಿದರೂ, ಆ ನೀರು ಮತ್ತೆ ಸಮುದ್ರವನ್ನೇ ಸೇರುತ್ತದೆ. ಹಾಗೆಯೇ ನಿಜವಾಗಿ ಸಂತೃಪ್ತಿಯ ಮೂಲ ಆಂತರ್ಯದಲ್ಲಿದೆ. ಬ್ರಹಾಂಡದಲ್ಲಿ ಏನಿದೆಯೋ ಅದೇ ಪಿಂಡಾಂಡದಲ್ಲಿರುವುದು. ಬ್ರಹ್ಮಾಂಡದಲ್ಲಿರುವ ಅನಂತ ಶಕ್ತಿ ನಮ್ಮೊಳಗೇ ಇದೆ. ಅದನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ನಾವು ಕಲಿಯುತ್ತ ಸಾಗಬೇಕಾಗಿದೆ. ನಮ್ಮ ಜೀವನ ವ್ಯರ್ಥವಾಗಬಾರದು’ ಎಂದರು.

ಹೌದು, ಜೀವನದಲ್ಲಿ ಬೇರೆಯವರ ತಪ್ಪಿನಿಂದ ತಿಳಿದುಕೊಳ್ಳಬೇಕಾದ ಪಾಠ ತುಂಬಾನೇ ಇದೆ. ಕಲಿಕೆ ನಿರಂತರ ಪ್ರಕ್ರಿಯೆ ಆಗಿದೆ. ಕಲಿಯುತ್ತ ಸಾಗಿದಾಗ ಜೀವನ ಸಾರ್ಥಕವಾಗುತ್ತದೆ.

| ಹೇಮಲತಾ

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net