

ಆ ಮನೆಯಲ್ಲಿ ಅಜ್ಜ, ಅಪ್ಪ, ಅಮ್ಮ ಮತ್ತು ಇಬ್ಬರು ಪುಟಾಣಿ ಮಕ್ಕಳು ವಾಸವಾಗಿದ್ದರು. ಅಜ್ಜನಿಗೆ ಎಂಬತ್ತರ ಆಸುಪಾಸು. ಸುಕ್ಕುಗಟ್ಟಿದ ಚರ್ಮ, ಬಾಗಿದ ಬೆನ್ನು, ಹಲ್ಲುಗಳಿಲ್ಲದ ಬೊಚ್ಚು ಬಾಯಿ ಅಜ್ಜನ ರೂಪವನ್ನು ವಿಕಾರಗೊಳಿಸಿದ್ದವು. ಅಜ್ಜ ಎಷ್ಟೇ ಪ್ರೀತಿಯಿಂದ ಮಕ್ಕಳನ್ನು ಕಂಡರೂ ಅವರು ದೂರ ಓಡುತ್ತಿದ್ದರು. ಅಜ್ಜನ ಸುಕ್ಕಾದ ಚರ್ಮವನ್ನು ಕಂಡು ಹೇಸಿಗೆ ಪಟ್ಟುಕೊಳ್ಳುತ್ತಿದ್ದರು. ಹಲ್ಲುಗಳಿಲ್ಲವೆಂದು ಚೇಷ್ಟೆ ಮಾಡುತ್ತಿದ್ದರು. ಇದರಿಂದ ಅಜ್ಜನ ಮನಸ್ಸಿಗೆ ನೋವಾಗುತ್ತಿತ್ತು. ಮಕ್ಕಳು ಅಜ್ಜನಿಗೆ ಎದುರಾಡುವುದನ್ನು, ಹಂಗಿಸುವುದನ್ನು, ಅವರ ಅಪ್ಪ, ಅಮ್ಮ ಗಮನಿಸುತ್ತಲೇ ಇದ್ದರು. ಅವರನ್ನು ತಿದ್ದಿ, ಸರಿದಾರಿಗೆ ತರಲು ನಿರ್ಧರಿಸಿದರು.
ತಂದೆ ಒಂದು ದಿನ ಇಬ್ಬರೂ ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದ. ಅಲ್ಲೇ ಪಕ್ಕದಲ್ಲಿದ್ದ ಮರದಡಿಗೆ ಹಣ್ಣೆಲೆಗಳು ರಾಶಿಯಾಗಿ ಬಿದ್ದಿದ್ದವು. ಆ ಮರವನ್ನು ತೋರಿಸುತ್ತ, "ಮಕ್ಕಳೇ, ಇಲ್ಲೊಂದು ಮರವಿದೆಯಲ್ಲ, ಇದನ್ನು ದಿನವೂ ನೋಡುತ್ತಿದ್ದೀರಿ. ಕೆಲ ದಿನಗಳ ಹಿಂದೆ ಇದು ಹೇಗಿತ್ತು ನೆನಪಿದೆಯೇ?' ಎಂದು ಪ್ರಶ್ನಿಸಿದ. ಮಕ್ಕಳು ಹುರುಪಿನಿಂದ, "ಹೌದಪ್ಪಾ, ಹಸಿರಸಿರು ಎಲೆಗಳಿಂದ ಮರ ಚೆಂದವಾಗಿ ಕಾಣಿಸುತ್ತಿತ್ತು. ಆದರೀಗ ಅಲ್ಲಲ್ಲಿ ಕೆಲ ಚಿಗುರೆಲೆ ಬಿಟ್ಟರೆ ಮರ ಬರಿದಾಗಿದೆ' ಎಂದರು. "ಹೌದು, ಕೆಲವೇ ದಿನಗಳ ಹಿಂದೆ ಈ ಮರದ ತುಂಬೆಲ್ಲ ಹಸಿರೆಲೆಗಳು ತುಂಬಿಕೊಂಡಿದ್ದವು. ನಂತರ ಆ ಎಲೆಗಳೆಲ್ಲ ಹಣ್ಣಾಗಿ, ಉದುರಲಾರಂಭಿಸಿದವು. ಮರ ಬರಿದಾಗತೊಡಗಿತು. ಆಗ ಇನ್ನೂ ಚಿಗುರೆಲೆಗಳು ಇರುತ್ತಿದ್ದವಲ್ಲ! ಅವು ಹಣ್ಣೆಲೆಗಳು ಉದುರುವುದನ್ನು ಕಂಡು ನಗುತ್ತಿದ್ದವಂತೆ. ಆದರೆ ಮುಂದೊಂದು ದಿನ ತಾವೂ ಹಾಗೆಯೇ ಉದುರಬೇಕಾಗಿ ಬಂದಾಗ ನೊಂದುಕೊಂಡವಂತೆ' ಎಂದು ತಂದೆ ಮಾತು ಮುಗಿಸಿದ.
"ಅಪ್ಪಾ, ಚಿಗುರೆಲೆಗಳು ಅಂದು ನಗಬಾರದಿತ್ತು ಅಲ್ಲವೇ?' ಎಂದು ಕೇಳಿದಾಗ, ತಂದೆ, "ಹೌದು, ಚಿಗುರೆಲೆಗಳು ನಗಬಾರದಿತ್ತು. ಆದರೆ ಅವು ನಮಗೊಂದು ಪಾಠ ಹೇಳಿಕೊಡುತ್ತವೆ. ನಮ್ಮ ಬದುಕೂ ಆ ಮರದ ಎಲೆಗಳಂತೆಯೇ. ಇಂದು ಮಕ್ಕಳಾಗಿದ್ದವರು ಮುಂದೊಂದು ದಿನ ಮುದುಕರಾಗಲೇಬೇಕು. ಆಗ ನಮಗೂ ಚರ್ಮ ಸುಕ್ಕುಗಟ್ಟುತ್ತದೆ, ಹಲ್ಲು ಉದುರುತ್ತದೆ, ಬೆನ್ನು ಬಾಗುತ್ತದೆ, ಸೌಂದರ್ಯವೆಲ್ಲ ನಾಶವಾಗಿ ಹೋಗುತ್ತದೆ. ಅದು ಪ್ರಕತಿಯ ನಿಯಮ. ಆಗ ನಮ್ಮ ಮಕ್ಕಳು, ಮೊಮ್ಮಕ್ಕಳು ನಮ್ಮಿಂದ ದೂರ ಹೋಗತೊಡಗಿದರೆ ಬೇಸರವಾಗುವುದಿಲ್ಲವೇ?' ಎಂದು ಬುದ್ಧಿ ಹೇಳಿದ. ಮಕ್ಕಳಿಗೆ ತಪ್ಪಿನ ಅರಿವಾಗಿ ಅಜ್ಜನ ಬಳಿ ಓಡಿದರು. ತಪ್ಪಾಯಿತೆಂದು ಹೇಳಿ ಪ್ರೀತಿಯಿಂದ ಅವನನ್ನು ನೋಡಿಕೊಳ್ಳತೊಡಗಿದರು.
ಮನುಷ್ಯನಿಗೆ ಪ್ರಕತಿ ಸರಳವಾಗಿ ಜೀವನಪಾಠ ಹೇಳಿಕೊಡುತ್ತದೆ. ಕಾಲಚಕ್ರ ಸದಾ ಓಡುತ್ತಲೇ ಇರುತ್ತದೆ, ಅದರ ಹರಿವು ನಿರಂತರ. ಇಂದು ಚಿಗುರಾಗಿದ್ದುದು ನಾಳೆ ಹಣ್ಣಾಗುತ್ತದೆ. ಒಂದು ಕಾಲದಲ್ಲಿ ಎಲ್ಲರ ಕಣ್ಮನ ಸೆಳೆಯುವ ಬಾಹ್ಯಸೌಂದರ್ಯ ಕ್ರಮೇಣ ಮುಕ್ಕಾಗಿ ನಶಿಸತೊಡಗುತ್ತದೆ. ಪ್ರಕತಿ ಹೊಸತನ್ನು ಬರಮಾಡಿಕೊಳ್ಳುತ್ತದೆ. ಕಾಲದ ಈ ಸತ್ಯವನ್ನು ಅರಿತು ನಡೆದರೆ ಮಾತ್ರ ಜೀವನವ ಸದಾ ಹಸಿರಾಗಿರಲು ಸಾಧ್ಯ.
(ಲೇಖಕರು ಹವ್ಯಾಸಿ ಬರಹಗಾರರು)