ಮನೋಲ್ಲಾಸ: ದೇವರ ಕೊಡುಗೆ ಎಂದಿಗೂ ಹಿರಿದು

Published on

ತನ್ನ ಅಪರೂಪದ ರೂಪ ಲಾವಣ್ಯ, ಪ್ರತಿಭೆಗಳಿಂದ ಎಲ್ಲೆಡೆ ಪ್ರಸಿದ್ಧಿ ಪಡೆದ ನರ್ತಕಿಯೊಬ್ಬಳು ಒಮ್ಮೆ ಮುನಿಗಳ ಆಶ್ರಮಕ್ಕೆ ಬಂದು ಖಿನ್ನಳಾಗಿ ‘ಮುನಿಗಳೇ.. ನಾನು ಜನಮನ ಗೆಲ್ಲುವಂತೆ ಹಾಡಬೇಕಿತ್ತು. ದೇವರೇಕೆ ನನಗೆ ಸುಮಧುರ ಕಂಠವನ್ನು ನೀಡಲಿಲ್ಲ..?’ ಎಂದು ಕೇಳಿದಳು. ಆಗ ಮುನಿಗಳು ‘ಆ ದೇವರು ಎಲ್ಲರಲ್ಲೂ ಒಂದೊಂದು ವಿಶೇಷತೆಯನ್ನು ಇಟ್ಟಿರುತ್ತಾನೆ. ಇಂದು ನೀನು ಪ್ರಸಿದ್ಧ ನರ್ತಕಿಯಾಗಿರುವೆ. ಇದು ದೇವರ ಕೊಡುಗೆ ಅಲ್ಲವೇ..?’ ಎಂದು ಕೇಳಿದರು. ಆಗ ನರ್ತಕಿಗೆ ತನ್ನತನದ ಅರಿವಾಯಿತು.

‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದು’ ಎಂದರೆ ಹೀಗೆಯೇ ಅಲ್ಲವೇ.. ನಮ್ಮ ಬಳಿ ಇರುವುದು ನಮಗೆ ಎಂದೂ ವಿಶೇಷವಾಗಿ ಕಾಣದು. ಅದು ದೇವರು ನೀಡಿದ ಅಭೂತಪೂರ್ವ ಕೊಡುಗೆ ಎಂಬುದನ್ನು ಅಲಕ್ಷಿಸಿ ಇಲ್ಲದೇ ಇರುವುದಕ್ಕಾಗಿ ಹಂಬಲಿಸಿ, ದೇವರು ನೀಡಲಿಲ್ಲ ಎಂದು ದೂಷಿಸುತ್ತೇವೆ. ಅಂಗೈಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಹುಡುಕಾಡುತ್ತೇವೆ.

***

ಅಮೆರಿಕದ ಪ್ರಸಿದ್ಧ ಟೆನಿಸ್ ಆಟಗಾರ, ವಿಂಬಲ್ಡನ್ ಪ್ರಶಸ್ತಿ ವಿಜೇತ ಅರ್ಥರ್ ಆಶ್​ಗೆ ಮಾರಣಾಂತಿಕ ಕಾಯಿಲೆ ಬಂದಾಗ ದೇಶವಿದೇಶಗಳ ಅಭಿಮಾನಿಗಳಿಂದ ಅವನಿಗೆ ಸಂತಾಪದ ಪತ್ರಗಳು ಹರಿದುಬರುತ್ತವೆ. ಒಬ್ಬ ಅಭಿಮಾನಿ ‘ಆ ದೇವರು ಎಷ್ಟು ಕ್ರೂರಿ. ಇಂತಹ ಮಾರಕ ಕಾಯಿಲೆಗೆ ನಿಮ್ಮನ್ನೇ ಯಾಕೆ ಆಯ್ಕೆ ಮಾಡಿಕೊಂಡ?’ ಎಂದು ದುಃಖ, ಬೇಸರ ತೋಡಿಕೊಂಡಿದ್ದ. ಆ ಪತ್ರಕ್ಕೆ ಆಶ್ ಉತ್ತರಿಸಿದ್ದು ಹೀಗೆ: ‘ಜಗತ್ತಿನಾದ್ಯಂತ ಐದು ಕೋಟಿ ಮಕ್ಕಳು ಟೆನಿಸ್ ಆಡಲು ಪ್ರಾರಂಭಿಸುತ್ತಾರೆ; ಐವತ್ತು ಲಕ್ಷ ಮಕ್ಕಳು ಟೆನಿಸ್ ಕಲಿಯುತ್ತಾರೆ; ಐದು ಲಕ್ಷ ಜನ ನಿಯಮಬದ್ಧವಾಗಿ ಆಡಬಲ್ಲವರಾದರೆ, ಐವತ್ತು ಸಾವಿರ ಜನ ಯಶಸ್ವಿಯಾಗಿ ಆಡುತ್ತಾರೆ; ಐದು ಸಾವಿರ ಜನರು ಗ್ರ್ಯಾಂಡ್ ಸ್ಲ್ಯಾಮ್, ಅದರಲ್ಲಿ ಐವತ್ತು ಜನ ವಿಂಬಲ್ಡನ್​ಗೆ, ನಾಲ್ವರು ಸೆಮಿಫೈನಲ್​ಗೆ ಹಾಗೂ ಇಬ್ಬರು ಮಾತ್ರ ಅಂತಿಮ ಹಂತಕ್ಕೆ ಆಯ್ಕೆ ಆಗುತ್ತಾರೆ. ನಾನು ವಿಜಯದ ಪದಕ ತೊಟ್ಟು ನಿಂತಾಗ ‘ದೇವರೇ ಯಾಕೆ ನನಗೆ ಮಾತ್ರ ಈ ಅದೃಷ್ಟದ ಕೊಡುಗೆ’ ಎಂದು ಎಂದಿಗೂ ಕೇಳಲಿಲ್ಲ. ಈಗ ನನಗೆ ಮಾತ್ರ ಏಕೆ ನೋವು ಕೊಟ್ಟೆ ಎಂದು ಹೇಗೆ ಕೇಳಲಿ?’.

ದೇವನೆಂಬ ಸರ್ವಶಕ್ತ ನಮಗಾಗಿ ಎಷ್ಟೋ ಒಳಿತನ್ನು ಮಾಡಿರುತ್ತಾನೆ. ಆದರೆ ಎಲ್ಲವೂ ಚೆನ್ನಾಗಿದ್ದಾಗ ಅದೆಲ್ಲ ನಮ್ಮ ಸ್ಮರಣೆಗೆ ಬರುವುದೇ ಇಲ್ಲ. ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ತೊಂದರೆಗಳು ಬಂದಾಗ ಮಾತ್ರ ದೇವರ ಮೊರೆ ಹೋಗಿ, ಪರಿಹಾರ ಸಿಗದಾದಾಗ ದೂಷಿಸದೆ, ನನಗೆ ಅದು ಸಿಗಲಿಲ್ಲ, ಇದು ದಕ್ಕಲಿಲ್ಲ ಎಂದು ಕೊರಗದೆ ಇರುವ ಭಾಗ್ಯವ ನೆನೆದು ಹರುಷದಿಂದ ಬಾಳುವುದರಲ್ಲಿಯೇ ನೆಮ್ಮದಿ, ಶಾಂತಿ ಅಡಗಿದೆ.

ಅದಿಲ್ಲ ಇದಿಲ್ಲ ವಂಚಿತನು ನಾನೆಂಬ

ನಿತ್ಯ ಕೊರಗಿನ ಹಳಹಳಿಕೆ ತರವೇ

ಎಲ್ಲ ಪಡೆದವರು ಎಲ್ಲಿಹರು ಜಗದೊಳಗೆ

ದೇವನಿತ್ತ ಐಸಿರಿಯ ಮರೆಯದಿರು ಮನವೇ

ರೇಖಾ ಗಜಾನನ ಭಟ್ಟ (ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net