ಮನೋಲ್ಲಾಸ: ವಿದ್ಯೆಯ ಸದ್ವಿನಿಯೋಗವಾಗಲಿ

Manollasa 11 Feb 20
Published on

ಸಮಯಕ್ಕೆ ಒದಗದ ಜ್ಞಾನ, ಆಪತ್ತಿಗೆ ದೊರಕದ ಧನ ಇದ್ದೂ ನಿಷ್ಪ್ರಯೋಜಕ. ಸಮಯಸ್ಪೂರ್ತಿ, ಸದ್ವಿವೇಕ, ಸಾರಾಸಾರ ವಿವೇಚನೆ, ಅನುಷ್ಠಾನದ ಕೌಶಲ ಇಲ್ಲದೆ ಹೋದರೆ ಜ್ಞಾನ ಮಲಿನ ಕನ್ನಡಿಯಂತೆ, ಮಂಕಾದ ನಕ್ಷತ್ರ ದಂತೆ. ಇದನ್ನು ಸಾರುವ ಒಂದು ಝೆನ್ ಕಥೆ ಹೀಗಿದೆ.

ಪ್ರಾಚೀನ ಕಾಲದಲ್ಲಿ ಎರಡು ಹೆಸರಾಂತ ದೇವಸ್ಥಾನಗಳಿದ್ದವು. ಆ ದೇವಾಲಯಗಳಲಿದ್ದ ಇಬ್ಬರೂ ಗುರುವರೇಣ್ಯರು ಕಡುವಿರೋಧಿಗಳು. ಅವರ ಮಾತು ನಡತೆಗಳಲ್ಲಿ ಪೈಪೋಟಿ ಮತ್ತು ವೈರಭಾವವೇ ತುಂಬಿಕೊಂಡಿರುತ್ತಿತ್ತು. ಇಬ್ಬರೂ ತಮ್ಮ ಅನುಯಾಯಿಗಳಿಗೆ ಮೊದಲೇ ಹೇಳಿದ್ದರು-‘ನೀವಾರೂ ಆ ಇನ್ನೊಂದು ದೇವಾಲಯದ ಕಡೆಗೆ ಅಪ್ಪಿತಪ್ಪಿಯೂ ನೋಡಬಾರದು; ಹೋಗಲೂ ಬಾರದು’ ಅಂತ. ಅವರಿಬ್ಬರ ಬಳಿಯೂ ಇಬ್ಬರು ಬಾಲಕರು ಗುರುಸೇವೆಗಾಗಿ ಅಂತೇವಾಸಿಗಳಾಗಿದ್ದರು. ಆ ಬಾಲಕರಿಗೆ ಅವರವರ ಗುರುಗಳು ಹೇರಿದ ಕಡ್ಡಾಯ ನಿಯಮವೆಂದರೆ ‘ಇನ್ನೊಂದು ದೇವಸ್ಥಾನದ ಕಡೆ ಕಣ್ಣೆತ್ತಿ ನೋಡಬಾರದು; ಅಲ್ಲಿರುವ ಬಾಲಕನ ಜತೆ ಮಾತಾಡಬಾರದು. ಅವರು ತುಂಬ ಅಪಾಯಕಾರಿ ಜನರು’ ಎಂದು.

ಬಾಲಕರದ್ದು ಶುದ್ಧಮನಸ್ಸು. ಅಲ್ಲಿ ಯಾವುದೇ ದ್ವೇಷ, ಮತ್ಸರಗಳ ಬಣ್ಣವಿಲ್ಲ. ಒಂದು ದಿನ ರಸ್ತೆಯಲ್ಲಿ ಇಬ್ಬರೂ ಸಂಧಿಸಿದರು. ಒಬ್ಬ ಬಾಲಕ ಇನ್ನೊಬ್ಬನನ್ನು ಕೇಳಿದ, ‘ನೀನೆಲ್ಲಿಗೆ ಹೊರಟಿದ್ದೀಯ?’ ಆತ, ‘ಗಾಳಿ ಎಲ್ಲಿಗೆ ಕರೆದೊಯ್ಯುತ್ತದೋ ಅಲ್ಲಿಗೆ’. ಕೇಳಿದ ಬಾಲಕನಿಗೆ ಬೇಜಾರಾಯಿತು. ಗುರುಗಳ ಬಳಿ ಬಂದು, ‘ನೀವು ಹೇಳಿದಂತೆ ಆ ದೇವಾಲಯದ ಬಾಲಕ ಎಂಥ ಧಿಮಾಕು ತೋರಿಸಿದ? ಮತ್ತೆ ಸುಳ್ಳು ಹೇಳಿದ. ಅವನು ತರಕಾರಿ ತರಲು ಬಜಾರಿಗೆ ಹೋಗುತ್ತಿದ್ದ. ಆದರೆ, ಗಾಳಿ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ಎನ್ನಬೇಕೆ? ನನಗೆ ಅವಮಾನವಾಯಿತು’ ಎಂದ.

ಗುರುಗಳು, ‘ನನ್ನ ಮಾತನ್ನು ನೀನು ಕೇಳಲಿಲ್ಲ. ನಾಳೆ ಅದೇ ಜಾಗದಲ್ಲಿಯೇ ಮತ್ತೆ ಸಂಧಿಸು. ಎಲ್ಲಿಗೆ ಹೊರಟಿದ್ದಿಯ ಎಂದು ಕೇಳು. ಅವನುತ್ತರ ಅದೇ ಇರುತ್ತದೆ. ಆಗ ನೀನು ತತ್ತ್ವಜ್ಞಾನಿಯಂತೆ ಆ ಬಾಲಕನನ್ನು ಕೇಳು, ‘ನಿನಗೆ ಕಾಲುಗಳೇ ಇರದಿದ್ದರೆ.. ಆಗ? ಯಾಕೆಂದರೆ ಆತ್ಮಕ್ಕೆ ಶರೀರವಿಲ್ಲ. ಆದ್ದರಿಂದ ಗಾಳಿಗೆ ಆತ್ಮವನ್ನು ಎಲ್ಲಿಗೂ ಒಯ್ಯಲು ಆಗುವುದಿಲ್ಲ! ಇದಕ್ಕೇನು ಹೇಳುವೆ?’ ಎಂದು. ಆ ಬಾಲಕ ರಾತ್ರಿಯಿಡೀ ಗುರುಗಳು ಹೇಳಿದ್ದನ್ನು ಉರುಹೊಡೆದು ಗಟ್ಟಿಮಾಡಿಕೊಂಡ. ಮರುದಿನ ಆ ಬಾಲಕನ ಬರುವಿಕೆಗಾಗಿ ಕಾಯುತ್ತ ನಿಂತ. ಎಂದಿನ ಸಮಯಕ್ಕೆ ಸರಿಯಾಗಿ ಆತ ಅಲ್ಲಿಗೆ ಬಂದ. ಕಾಯುತ್ತ ನಿಂತ ಬಾಲಕ ‘ಇಂದು ಸರಿಯಾಗಿ ಬುದ್ಧಿಕಲಿಸುತ್ತೇನೆ. ಜ್ಞಾನವೆಂದರೆ ಏನಂದುಕೊಂಡಿದ್ದಾನೆ’ ಅಂತ ಮನದಲ್ಲೇ ಹೇಳಿಕೊಳ್ಳುತ್ತ ‘ಎಲ್ಲಿಗೆ ಹೊರಟಿರುವೆ?’ ಎಂದು ಕೇಳಿದ.

ಆ ಬಾಲಕ, ‘ತರಕಾರಿ ತರಲು ಮಾರ್ಕೆಟ್ಟಿಗೆ ಹೋಗುತ್ತಿದ್ದೇನೆ’ ಎಂದ. ಪ್ರಶ್ನೆ ಕೇಳಿದ ಬಾಲಕ ಪೆಚ್ಚಾದ. ಗುರುವಿನಿಂದ ಕಲಿತ ದರ್ಶನಶಾಸ್ತ್ರ ಇಲ್ಲಿ ಉಪಯೋಗಕ್ಕೆ ಬರಲಿಲ್ಲ. ಆ ಬಾಲಕ ಏನೋ ಗುನುಗಿಕೊಳ್ಳುತ್ತ ಮುಂದೆ ಹೋದ. ಈತ ಹಾಗೆಯೇ ನಿಂತೇ ಇದ್ದ! ಈ ಕಥೆ ಪ್ರಸಂಗಾವಧಾನತೆ, ಸಮಯಸ್ಪೂರ್ತಿ, ಎಲ್ಲಿ ಯಾವುದು ಉಪಯುಕ್ತ ಎಂಬ ಪ್ರಜ್ಞೆಯ ಮಹತ್ವವನ್ನು ಸಾರುತ್ತದೆ. ಕಟ್ಟಿಕೊಟ್ಟ ಬುತ್ತಿ ಬಹಳ ಹೊತ್ತು ಬರುವುದಿಲ್ಲ ಎಂಬುದನ್ನು ಅರುಹುತ್ತದೆ.

| ವನರಾಗ ಶರ್ಮಾ

(ಲೇಖಕರು ನಿವೃತ್ತ ಮುಖ್ಯೋಪಾಧ್ಯಾಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net