ಪಾಯಸದ ರುಚಿ ಸೌಟಿಗೆ ದೊರಕೀತೇ?

Manollasa 4 March 20
Published on

ಬಹಳ ವರ್ಷಗಳ ನಂತರ ಶಿಷ್ಯನೊಬ್ಬ ತಾನು ಕಲಿತ ಆಶ್ರಮಕ್ಕೆ ಬಂದ. ಗುರುಗಳು ಪ್ರೀತಿಯಿಂದಲೇ ಅವನನ್ನು ಕರೆದು ಯೋಗಕ್ಷೇಮ ವಿಚಾರಿಸಿದರು. ಅವನ ಜೀವನದ ಸಾಧನೆಗಳ ಬಗ್ಗೆ ಪ್ರಶ್ನಿಸಿದರು. ಆತ ಅಹಂಕಾರದಿಂದಲೇ ಎಲ್ಲವನ್ನೂ ಉತ್ತರಿಸಿದ. ಸರಿ, ‘ಆತ್ಮೋದ್ಧಾರಕ್ಕಾಗಿ, ಸ್ವಾತ್ಮ ಸಾಧನೆಯನ್ನು ಏನು ಮಾಡಿದೆ?’ ಎಂದು ಕೇಳಿದರು ಗುರುಗಳು.

‘ನಾನು ಕಲಿತ ವಿದ್ಯೆಯನ್ನು ನೂರಾರು ಜನರಿಗೆ ಬೋಧಿಸಿದೆ, ಪ್ರತಿವರ್ಷವೂ ಪುಣ್ಯಕ್ಷೇತ್ರಗಳ ಸಂದರ್ಶನ, ತೀರ್ಥಯಾತ್ರೆ ಮಾಡಿ ಪುಣ್ಯ ಸಂಪಾದನೆ ಮಾಡುತ್ತಿದ್ದೇನೆ. ತಾವು ಹೇಳಿಕೊಟ್ಟ ವೇದಮಂತ್ರಗಳ ಪಾರಾಯಣ ನಿತ್ಯವೂ ನಡೆಯುತ್ತಿದೆೆ. ನಾನು ಗಳಿಸಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜಕ್ಕಾಗಿ ನೀಡುತ್ತಿದ್ದೇನೆ. ವರ್ಷಕ್ಕೊಮ್ಮೆ ಗಂಗೆಯಲ್ಲಿ ಸ್ನಾನ ಮಾಡಿ ಜನ್ಮಸಾರ್ಥಕ ಮಾಡಿಕೊಳ್ಳುತ್ತಿದ್ದೇನೆ. ಇನ್ನೇನು ಬೇಕು ಗುರುಗಳೇ, ಆತ್ಮಸಾಧನೆಗೆ?’ ಎಂದನು ಶಿಷ್ಯ ಸ್ವಲ್ಪ ಅಸಹನೆಯಿಂದ. ‘ಮಗು, ಗಂಗೆಯಲ್ಲಿ ಮಿಂದ ಮಾತ್ರಕ್ಕೆ ಮುಕ್ತಿಸಾಧ್ಯವಿಲ್ಲ. ತತ್ತ್ವಜ್ಞಾನದ ಪ್ರಾಪ್ತಿಯೇ ಮೋಕ್ಷಕ್ಕೆ ಕಾರಣ’ ಎಂದು ಮಾರ್ವಿುಕವಾಗಿ ಗುರುಗಳು ಉತ್ತರಿಸಿದರು. ‘ನೀನು ಬಹಳ ಒಳ್ಳೆಯ ಕೆಲಸ ಮಾಡುತ್ತಿರುವೆ, ಅದರಲ್ಲಿ ನನಗೆ ಸಂಶಯವಿಲ್ಲ, ಆದರೆ ಮುಕ್ತಿಗೆ ಮಾರ್ಗವಾದ, ನೀನು ಕಲಿತ ಶಾಸ್ತ್ರಾರ್ಥಗಳ ಚಿಂತನೆಯನ್ನು ಮಾಡಿರುವೆಯಾ? ಗಂಗೆಯಲ್ಲಿ ಮುಳುಗಿದ ಮಾತ್ರಕ್ಕೆ ಮುಕ್ತಿ ಸಾಧ್ಯವಾಗುವುದಾದರೆ, ಗಂಗೆಯ ನೀರಿನಲ್ಲಿ ಸಾವಿರಾರು ವರ್ಷಗಳಿಂದ ಮುಳುಗಿ ಕುಳಿತ ಕಲ್ಲಿಗೆ ಮುಕ್ತಿ ಸಿಗಬೇಕಲ್ಲವೆ? ಅದು ಸಾಧ್ಯವೇ?’ ಎಂದು ಕೇಳಿದರು.

ಪಠಂತಿ ವೇದ ಶಾಸ್ತ್ರಾಣಿ ಬೋಧಯಂತಿ ಪರಸ್ಪರಂ|

ನ ಜಾನಂತಿ ಪರಂ ತತ್ವಂ ದರ್ವೀ ಪಾಕರಸಂ ಯಥಾ||

ಎಂದಿದ್ದಾನೆ ಸುಭಾಷಿತಕಾರ. ರುಚಿಯಾದ ಅಡುಗೆಯನ್ನು ತಯಾರಿಸಲು ಸೌಟನ್ನು ಬಳಸಿರುತ್ತೇವೆ. ಆದರೆ, ಆ ಅಡುಗೆ ಎಷ್ಟೇ ಸ್ವಾದಿಷ್ಟವಾಗಿದ್ದರೂ, ಅದರಲ್ಲಿಯೇ ಸದಾ ಮುಳುಗಿರುವ ಸೌಟಿಗೆ ಅಡುಗೆಯ ರುಚಿ ಗೊತ್ತಿರುವುದಿಲ್ಲ. ಅದರಂತೆಯೇ ಅನೇಕರು ವೇದಶಾಸ್ತ್ರಗಳನ್ನು ಆಮೂಲಾಗ್ರವಾಗಿ ಓದುತ್ತಾರೆ, ಒಬ್ಬರಿಗೊಬ್ಬರು ಕಲಿಸುತ್ತಾರೆ. ಆದರೆ, ಅದರಲ್ಲಿರುವ ಉತ್ತಮ ವಿಚಾರಗಳನ್ನು ತಾವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ವೇದಗಳು, ಶಾಸ್ತ್ರಗಳು ಇವೆಲ್ಲವೂ ಜ್ಞಾನದ ಸಾಗರ. ಅದರಲ್ಲಿ ಮಹತ್ತರವಾದ ತತ್ತ್ವಗಳು ಅಡಗಿವೆ. ಇದು ಅವರ ಅರಿವಿಗೆ ಬಂದಿರುವುದಿಲ್ಲ. ‘ಎಲ್ಲರೂ ಮಾಡುತ್ತಾರೆ ನಾನೂ ಕೂಡ ಮಾಡುತ್ತೇನೆ’ ಎಂಬ ಭಾವವೇ ಬಂದುಬಿಡುತ್ತದೆ. ಶಾಸ್ತ್ರಗಳ ಜ್ಞಾನವನ್ನು ನಾವು ಪಡೆದಾಗ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗೆಯನ್ನು ತಿಳಿದಿರಬೇಕು. ಯಾಕೆಂದರೆ ಈ ಜ್ಞಾನಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕ ಸೂತ್ರಗಳು. ಅವುಗಳ ಅರಿವು ನಮಗೆ ಇಲ್ಲದೆ ಹೋದರೆ ಓದಿಯೂ ನಿರರ್ಥಕವಾಗುತ್ತದೆ. ಹೇಗೆ ಪಾತ್ರೆ ತನ್ನಲ್ಲಿರುವ ಅನ್ನದ ಅಥವಾ ಭಕ್ಷ್ಯದ ರುಚಿಯನ್ನು ಸವಿಯಲು ಸಾಧ್ಯವಿಲ್ಲವೋ ಹಾಗೇ ಜ್ಞಾನವೂ ಕೂಡ ಯಾರ ಹತ್ತಿರವಿರುವುದೋ ಅವರು ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

| ಡಾ.ಗಣಪತಿ ಹೆಗಡೆ

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net