

ಮಾನವನ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿ ಆತನ ಶ್ರದ್ಧೆ. ‘ಶ್ರದ್ಧೆ ಇದ್ದರೆ ಗೆದ್ದೆ’ ಎನ್ನುತ್ತದೆ ವಿವೇಕವಾಣಿ. ಭಕ್ತನಿಗೆ ಭಗವಂತನಲ್ಲಿ ಶ್ರದ್ಧೆಯಿರಬೇಕು. ವಿದ್ಯಾರ್ಥಿಗೆ ತಾನು ಕಲಿಯುವ ವಿಷಯಗಳಲ್ಲಿ ಶ್ರದ್ಧೆ ಇರಬೇಕು. ವಿಜ್ಞಾನಿ, ಶಿಕ್ಷಕ, ಉದ್ಯಮಿ ಯಾರೇ ಆಗಬಹುದು ಯಶಸ್ಸು ಅವಲಂಬಿಸಿರುವುದೇ ಅವರ ಶ್ರದ್ಧೆಯ ಮೇಲೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ- ‘ಪ್ರಾಚೀನ ಧರ್ಮಗಳು ಹೇಳುತ್ತಿದ್ದವು ಯಾರಿಗೆ ಭಗವಂತನಲ್ಲಿ ನಂಬಿಕೆ ಇಲ್ಲವೋ ಅವನು ನಾಸ್ತಿಕ ಎಂದು. ನವೀನ ಮತಗಳು ಹೇಳುವುದು ಯಾರಿಗೆ ಆತ್ಮವಿಶ್ವಾಸವಿಲ್ಲವೋ ಅವನೇ ನಾಸ್ತಿಕ ಎಂದು.’
‘ನಿಮ್ಮ ಊರಿನಲ್ಲಿ ನಾಯಿಗಳಿವೆಯೇ?’ ‘ಹೌದು’. ಆಗ ಹಿರಿಯರು ‘ನಮ್ಮ ಹಳ್ಳಿಯಲ್ಲಿ ಒಮ್ಮೊಮ್ಮೆ ಬೆಳೆದ ಬೆಳೆ ಕಳ್ಳತನ ಆಗುವುದುಂಟು. ಅದಕ್ಕಾಗಿ ಜಮೀನು ಕಾಯಲು ನಾಯಿಗಳನ್ನು ಸಾಕುತ್ತಾರೆ. ಒಂದು ನಾಯಿ ಕದಿಯಲು ಬಂದ ಕಳ್ಳನನ್ನು ನೋಡಿ ಬೊಗಳುತ್ತದೆ. ಆ ಧ್ವನಿಯನ್ನು ಕೇಳಿ ಉಳಿದ ನಾಯಿಗಳು ಬೊಗಳಲು ಆರಂಭಿಸುತ್ತವೆ.
ವಾಸ್ತವವಾಗಿ ಕಳ್ಳನನ್ನು ನೋಡಿ ಬೊಗಳಿದ್ದು ಒಂದು ನಾಯಿ ಮಾತ್ರ. ಉಳಿದ ನಾಯಿಗಳು ಬೊಗಳಿದ್ದು ಆ ನಾಯಿಯ ಮೇಲಿರುವ ನಂಬಿಕೆಯ ಮೇಲೆ. ತಮ್ಮ ಕುಲದ ಮೇಲೆ ಇರುವ ಶ್ರದ್ಧೆಯ ಕಾರಣಕ್ಕಾಗಿ. ಹಾಗೆಯೇ ನಮ್ಮ ಋಷಿಮುನಿಗಳು, ಸಾಧು- ಸಂತರು, ಆಚಾರ್ಯರು, ದಾಸವರೇಣ್ಯರಿಗೆ ಅವರು ಪೂಜಿಸುವ ದೇವರ ಮೇಲಿನ ಶ್ರದ್ಧೆಯ ಕಾರಣಕ್ಕೆ ದರ್ಶನ ಕೊಟ್ಟಿದ್ದಾನಂತೆ.
ಅವರು ಭಗವಂತನನ್ನು ಕಂಡ ತಮ್ಮ ಜೀವನಾನುಭವವನ್ನು ನಮ್ಮಂಥ ಆಸ್ತಿಕರೊಂದಿಗೆ ಹಂಚಿಕೊಂಡಿದ್ದಾರೆ. ಅವರ ನುಡಿಗಳ ಮೇಲೆ ನಂಬಿಕೆ-ಶ್ರದ್ಧೆಯನ್ನಿಟ್ಟು ಬಾಲ್ಯದಿಂದಲೂ ದೇವಸ್ಥಾನಕ್ಕೆ ಬರುತ್ತೇನೆ. ನನಗೆ ವಿಶ್ವಾಸವಿದೆ, ಮುಂದೊಂದು ದಿನ ಆ ದೇವರ ದರ್ಶನ ನನಗೂ ಆಗುತ್ತದೆ.
ಒಂದು ಸಾಮಾನ್ಯ ನಾಯಿಗೆ ಇನ್ನೊಂದು ನಾಯಿಯ ಮೇಲೆ ಅಷ್ಟೊಂದು ನಂಬಿಕೆ ಇರುವಾಗ ಅಷ್ಟೊಂದು ಯೋಚನಾಶಕ್ತಿ ಇರುವ ಮನುಷ್ಯನಿಗೆ ಮಹಾತ್ಮರ ಮಾತುಗಳ ಬಗ್ಗೆ ನಂಬಿಕೆ ಬೇಡವೇ?!’ ಎಂದಾಗ ವಿಚಾರವಾದಿ ನಿರುತ್ತರನಾದ.
ಭಗವಂತನಲ್ಲಿ ನಮ್ಮ ಪೂರ್ವಜರು ಮೊದಲು ಕೇಳಿದ್ದೇ ಅಚಲ ಶ್ರದ್ಧೆಯನ್ನು-
ಶ್ರದ್ಧಾಂ ಮೇಧಾಂ ಯಶ: ಪ್ರಜ್ಞಾಂ ವಿದ್ಯಾಂಬುದ್ಧಿಂ ಶ್ರಿಯಂ ಬಲಮ್ |
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ||
‘ಹೇ ಭಗವಂತ! ನನಗೆ ಶ್ರದ್ಧೆ, ಮೇಧಾಶಕ್ತಿ,ಯಶಸ್ಸು, ಪ್ರಜ್ಞೆ, ವಿದ್ಯೆ, ಬುದ್ಧಿ, ಸಂಪತ್ತು, ಬಲ, ಆಯಸ್ಸು, ತೇಜಸ್ಸು ಮತ್ತು ಆರೋಗ್ಯವನ್ನು ಅನುಗ್ರಹಿಸು.’ ಎಲ್ಲರಿಗೂ ಮೇಧಾಶಕ್ತಿ, ಯಶಸ್ಸು, ಪ್ರಜ್ಞೆ, ವಿದ್ಯೆ ವಿವೇಕಾ, ಆಯಸ್ಸು, ಆರೋಗ್ಯ ಎಲ್ಲವೂಬೇಕು. ಆದರೆ ಅವು ಪ್ರಾಪ್ತಿಯಾಗಲು ಶ್ರದ್ಧೆಯಿರಬೇಕು. ಹಾಗಾಗಿ ನಾವು ಮಾಡುವ ಕೆಲಸದಲ್ಲಿ, ನಂಬಿಕೊಂಡು ಬಂದಿರುವ ಸಾತ್ವಿಕ ಚಿಂತನೆಗಳಲ್ಲಿ ಶ್ರದ್ಧೆ ಇಡೋಣ. ಅದು ಸಿದ್ಧಿಸಿಯೇ ತೀರುತ್ತದೆ ಎಂಬ ವಿಶ್ವಾಸದೊಂದಿಗೆ ಮುನ್ನಡೆಯೋಣ.
| ಡ್ಯಾನಿ ಪಿರೇರಾ (ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)