ಮನೋಲ್ಲಾಸ; ಪಾಣಿನಿಯ ಪಾಠ

ಪಾಣಿನಿ
Published on
ಡಾ. ವಿ.ಎಚ್. ಮೂಲಿಮನಿ

ಛಲದಿಂದ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೊಂದು ಇದು ಅದ್ಭುತ ಉದಾಹರಣೆ. ಒಬ್ಬ ಬಾಲಕನಿದ್ದ. ಅವನು ತೇಜಸ್ವಿಯಾಗಿ, ಚುರುಕಾಗಿ ಬುದ್ಧಿವಂತನಾಗಿದ್ದ. ಅವನಿಗೆ 6 ವರ್ಷಗಳಾಗಲು ಅಂದಿನ ಪದ್ಧತಿಯಂತೆ ಗುರುಕುಲಕ್ಕೆ ಸೇರಲೆಂದು ಒಬ್ಬ ಗುರುಗಳ ಬಳಿ ಹೋದ. ಆದರೆ, ಆ ಗುರುಗಳೋ ಶಿಷ್ಯನನ್ನಾಗಿ ಮಾಡಿಕೊಳ್ಳುವ ಮೊದಲು ವಿದ್ಯಾರೇಖೆ ನೋಡಿ, ಚೆನ್ನಾಗಿದ್ದರೆ ಮಾತ್ರ ಸೇರಿಸಿಕೊಳ್ಳುತ್ತಿದ್ದರು. ಹಾಗೆಯೇ ಈ ಬಾಲಕನ ಹಸ್ತವನ್ನು ನೋಡಿದರು. ನಂತರ ಅವನನ್ನು ವಿದ್ಯಾರೇಖೆಯಿಲ್ಲದ ಕಾರಣ ತಿರಸ್ಕರಿಸಿದರು. ಆ ಬಾಲಕ ತುಂಬಾ ನೊಂದು ಹಿಂತಿರುಗಿದ. ಮರುದಿನ ಗುರುಗಳು ನೋಡಿದರೆ ಮತ್ತೆ ಆ ಬಾಲಕ ನಿಂತಿದ್ದ. ಗುರುಗಳು, ‘ಮತ್ತೆ ಏಕೆ ಬಂದೆ? ಹೇಳಿಲ್ಲವೆ, ನಿನ್ನನ್ನು ಸೇರಿಸಿಕೊಳ್ಳುವುದಿಲ್ಲ’ ಎಂದರು. ಆಗ ಆ ಬಾಲಕ ತನ್ನ ಹಸ್ತ ಚಾಚಿದ. ಗುರುಗಳು ನೋಡುತ್ತಾರೆ, ಆತನ ಕೈಯಿಂದ ರಕ್ತ ಸುರಿಯುತ್ತಿದೆ. ಏನೆಂದು ಕೇಳಿದರೆ, ಬಾಲಕ ಹೇಳಿದ, ‘ಗುರುಗಳೇ ನೋಡಿ, ನಾನು ಚಾಕುವಿನಿಂದ ವಿದ್ಯಾರೇಖೆಯನ್ನು ಎಳೆದುಕೊಂಡಿದ್ದೇನೆ. ಈಗ ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ’ ಎಂದ. ಗುರುಗಳು ಆ ಹುಡುಗನ ವಿದ್ಯೆ ಕಲಿಯಬೇಕೆಂಬ ಅದಮ್ಯ ಆಸೆ, ಕಷ್ಟ ಸಹಿಷ್ಣುತೆ ಎಲ್ಲವನ್ನೂ ನೋಡಿ ಸೇರಿಸಿಕೊಂಡರು. ಮುಂದೆ ಆ ಹುಡುಗನೇ ಪಾಣಿನಿ ಎಂಬ ದೊಡ್ಡ ವಿದ್ವಾಂಸನಾದ. ಅವನೇ ಸಂಸ್ಕೃತದ ವ್ಯಾಕರಣ ಬರೆದ.

ಪ್ರಯತ್ನವಿಲ್ಲದೆ ಏನನ್ನೂ ಜೀವನದಲ್ಲಿ ಸಾಧಿಸಲಾಗದು. ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದರೆ ಅಯ್ಯೋ ನಮ್ಮ ಹಣೆಯಲ್ಲಿ ಬರೆದಿರುವುದೇ ಇಷ್ಟು ಎಂದು ಸುಮ್ಮನಾಗಬಾರದು. ಛಲದಿಂದ ಕಷ್ಟಪಟ್ಟು ಪ್ರಯತ್ನಿಸಿದರೆ ಎಷ್ಟು ಅಂಕಗಳನ್ನು ಬೇಕಾದರೂ ಪಡೆಯಬಹುದು. ಗುರುಗಳು ವಿದ್ಯಾರೇಖೆ ಇಲ್ಲ ಎಂದು ಹೇಳಿದರು ಅಂತಾ ಸುಮ್ಮನೆ ಕುಳಿತಿದ್ದರೆ, ಆ ಪುಟ್ಟ ಬಾಲಕ ಪಾಣಿನಿ ಸಂಸ್ಕೃತದ ಮಹಾನ್ ವಿದ್ವಾಂಸನಾಗುತ್ತಲೆ ಇರಲಿಲ್ಲ.

ಪಂಚತಂತ್ರ ಈ ರೀತಿ ಹೇಳುತ್ತದೆ.
ಉದ್ಯಮೇಸ ಹಿಸಿದ್ಯುಂತ ಕಾರ್ಯಾಣಿನ ಮನೋರಥ್ಯೆ
ನಹಿ ಸಿಂಹಸ್ಯ ಸುಪ್ತಸ್ಯ ಪ್ರರ್ವಿಂತ ಮುಖೇ ಮೃಗಾಃ||

ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ಹೊರತು ಬರಿಯ ಬಯಕೆಗಳಿಂದಲ್ಲ. ಮಲಗಿರುವ ಸಿಂಹದ ಬಾಯಲ್ಲಿ ಮೃಗಗಳು ಬಂದು ತಾವಾಗಿ ಪ್ರವೇಶಿಸುವುದಿಲ್ಲವಷ್ಟೆ! ‘ನಿಮ್ಮ ಭಾಗ್ಯದ ದಿನಗಳನ್ನು ರೂಪಿಸಿಕೊಳ್ಳಬೇಕಾದವರು ನೀವೇ. ನಿಮ್ಮ ಭವಿಷ್ಯದ ನಿರ್ವಪಕರು ನೀವೇ ಎಂಬುದು ತಿಳಿದಿರಲಿ. ನಿಮಗೆ ಅಗತ್ಯವಿರುವ ಶಕ್ತಿ ಸಹಾಯ ಸಾಮರ್ಥ್ಯಗಳು ನಿಮ್ಮೊಳಗೆಯೇ ಇವೆ. ಆದ್ದರಿಂದ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ’ ಎಂಬುದು ವಿವೇಕಾನಂದರ ಬೋಧನೆ. ಜನಪ್ರಿಯ ಫೋರ್ಡ್ ಕಾರಿನ ನಿರ್ವತೃ ಹೆನ್ರಿ ಫೋರ್ಡ್ ಹೇಳುವ ಕಿವಿಮಾತು ಹೀಗಿದೆ- ‘ನನ್ನ ಜೀವನದ ಯಶಸ್ಸಿಗೆ ಮೂರು ಮುಖ್ಯ ರಹಸ್ಯಗಳಿವೆ. ಅವು ಯಾವುವೆಂದರೆ ಪರಿಶ್ರಮ, ಪರಿಶ್ರಮ ಮತ್ತು ಪರಿಶ್ರಮ’.

(ಲೇಖಕರು ನಿವೃತ್ತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net