ಮನೋಲ್ಲಾಸ | ದಾನ ಕೊಡುವ ಬಗೆ

helpinghands
Published on

ರವಿ ಮಡೋಡಿ

ಊರಿನಲ್ಲಿ ಒಬ್ಬ ಧನಿಕನಿದ್ದ. ಅವನು ಯಾವಾಗಲೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿದ್ದ. ವರುಷ ಕಳೆದ ಹಾಗೆ ಅವನ ವ್ಯಾಪಾರ ಇಳಿಮುಖವಾಗಿ ಸಂಪತ್ತೆಲ್ಲ ಕ್ಷೀಣಿಸುತ್ತ ಬಂತು. ಇವನಿಂದ ಸಹಾಯ ಪಡೆದಿದ್ದ ವ್ಯಕ್ತಿಯೊರ್ವ ಒಂದು ದಿನ ಸಮಾಜದ ಗಣ್ಯರ ಎದುರಿನಲ್ಲಿ ಯಾವುದೋ ವಿಚಾರಕ್ಕೆ ಧನಿಕನ ಮಾತನ್ನು ಧಿಕ್ಕರಿಸಿ, ಅವನನ್ನು ನಿಂದಿಸಿದ. ಧನಿಕನಿಗೆ ಆ ವ್ಯಕ್ತಿ ಬಗ್ಗೆ ಬೇಸರವಾಯಿತು. ತನ್ನಿಂದ ಉಪಕೃತನಾದ ವ್ಯಕ್ತಿ ಹೀಗೆ ತನ್ನ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿ, ತನಗೆ ಅಗೌರವ ಸೂಚಿಸಿರುವುದಕ್ಕೆ ದುಃಖವಾಯಿತು. ಮನೆಗೆ ಬಂದು ಆ ಬಗ್ಗೆಯೇ ಚಿಂತಿಸುತ್ತ ಕುಳಿತ. ಅವನಿಗೊಂದು ಆಲೋಚನೆ ಬಂತು. ಇಷ್ಟೆಲ್ಲ ದಾನ ಮಾಡಿರುವ ತನ್ನ ಬಗ್ಗೆ ಸಮಾಜ ಯಾವ ಅಭಿಪ್ರಾಯವನ್ನು ಹೊಂದಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿತು. ಅದಕ್ಕಾಗಿ ಆಪ್ತರನ್ನು ನಿಯೋಜಿಸಿ, ತನ್ನ ಬಗ್ಗೆ ಜನರಿಗಿರುವ ಮನದಿಗಿಂತವನ್ನು ಅರಿಯುವುದಕ್ಕೆ ಕಳುಹಿಸಿಕೊಟ್ಟ. ಆಪ್ತರು ಊರೆಲ್ಲ ಸುತ್ತಾಡಿ, ಹಲವು ಜನರನ್ನು ಸಂದರ್ಶಿಸಿ, ಧನಿಕನಿಗೆ ವರದಿ ಒಪ್ಪಿಸಿದರು. ನಿಜಕ್ಕೂ ಅವನಿಗೆ ಆಘಾತ ಕಾದಿತ್ತು.

‘ಯಾರೋ ಗಳಿಸಿದ ದುಡ್ಡು. ಅದಕ್ಕಾಗಿ ಈ ಧನಿಕ ಖರ್ಚು ಮಾಡುತ್ತಾನೆ. ಹೊರತು ಬೆವರು ಸುರಿಸಿ ಸಂಪಾದನೆ ಮಾಡಿದ ಹಣವಾಗಿದ್ದರೆ ಹೀಗೆ ದಾನ ಮಾಡಿ ಖರ್ಚು ಮಾಡುತ್ತಿದ್ದನೋ’ ಎಂಬ ಅಭಿಪ್ರಾಯವನ್ನು ಜನರು ಹೊಂದಿದ್ದಾರೆ ಎಂದು ತಿಳಿದು, ಅವನಿಗೆ ಬೇಸರವಾಯಿತು. ಖಿನ್ನನಾಗಿ ತನಗಾದ ಸ್ಥಿತಿಯನ್ನು ತಂದೆಗೆ ವಿವರಿಸಿದ.

ಆತನ ತಂದೆ ನಗುತ್ತ ಹೇಳಿದರು- ‘ಅಯ್ಯೋ ಮಗನೇ ದಾನ ಎಂದರೆ ಏನೆಂದು ತಿಳಿದಿದ್ದಿಯಾ? ಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವಂತೆ ಯಾವ ಫಲಾಪೇಕ್ಷೆ ಇಲ್ಲದೆ ಅರ್ಹರಾದವರಿಗೆ ಸೂಕ್ತ ಸಮಯ ಮತ್ತು ಸೂಕ್ತ ಸ್ಥಳದಲ್ಲಿ ನೀಡಿದರೆ ಮಾತ್ರ ದಾನ ಎಂದೆನಿಸಿಕೊಳ್ಳುತ್ತದೆ. ಅಪಾತ್ರರಿಗೆ ದಾನ ಮಾಡಿದರೆ ಅದು ದಾನ ಎನಿಸಿಕೊಳ್ಳುವುದಿಲ್ಲ. ಇಲ್ಲಿಯವರೆಗೆ ನೀನು ದಾನ ಮಾಡಿ ಹೆಸರು ಗಳಿಸಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿದ್ದರಿಂದ, ನಿಜವಾಗಿ ಯಾರಿಗೆ ನಿನ್ನ ಸಹಾಯ ಬೇಕಾಗಿತ್ತೋ ಅವರಿಗೆ ಸಿಗದೆ, ಅಪಾತ್ರರಿಗೆ ದಕ್ಕಿತು. ಯಾವಾಗ ನಿನ್ನ ಶ್ರೀಮಂತಿಕೆ ಕುಂದುತ್ತ ಬಂತೋ, ಆಗ ಅವರುಗಳು ತಮ್ಮ ನಿಜ ಬಣ್ಣವನ್ನು ತೋರಿಸಿದರು. ಇಲ್ಲಿವರೆಗಿನ ನಿನ್ನ ದಾನವೆಲ್ಲ ಇವರನ್ನು ಮೆಚ್ಚಿಸುವುದಕ್ಕೆ ಕಾರಣವಾಯಿತೇ ಹೊರತು, ಸಂಕಷ್ಟದಲ್ಲಿ ಇರುವವರಿಗೆ ಸಹಾಯವಾಗಲಿಲ್ಲ. ಜೊತೆಗೆ ದಾನವನ್ನು ಕೊಟ್ಟ ಮೇಲೆ, ಅದರಿಂದ ಯಾವ ಫಲಾಪೇಕ್ಷೆ ಇಟ್ಟುಕೊಳ್ಳದೆ ತನ್ನದಲ್ಲ ಎನ್ನುವ ಭಾವವನ್ನು ಹೊಂದಬೇಕಾಗುತ್ತದೆ. ನಿನ್ನ ಸಹಾಯವನ್ನು ಪಡೆದವರು ನಿನ್ನ ಇಚ್ಛೆಯಂತೆ ನಡೆಯಬೇಕು ಎಂದು ಅಪೇಕ್ಷಿಸುವುದು ಕೂಡ ತಪ್ಪಾಗುತ್ತದೆ’ ಎಂದಾಗ ಧನಿಕನಿಗೆ ತನ್ನ ತಪ್ಪಿನ ಅರಿವಾಯಿತು.

ನಮ್ಮ ಸಂತೃಪ್ತಿಗಾಗಿ ಮತ್ತು ನಿಜವಾಗಿ ಕಷ್ಟದಲ್ಲಿ ಇರುವವರ ನೆರವಿಗಾಗಿ ದಾನ ಮಾಡೋಣ. ಅದರಲ್ಲಿ ಪ್ರತಿಷ್ಠೆ ಬೇಡ. ಸಮಾಧಾನ ಇರಲಿ. ಸಂವೇದನೆ ಇರಲಿ.

(ಲೇಖಕರು ಮಾಹಿತಿ-ತಂತ್ರಜ್ಞಾನ ಉದ್ಯೋಗಿ, ಯಕ್ಷಗಾನ ಕಲಾವಿದರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net