ದುರ್ಜನರೂ ಸಜ್ಜನರಾಗಬಹುದು: ಮನೋಲ್ಲಾಸ

Manollasa
Published on
| ರಾಮ ಸುಬ್ರಾಯ ಶೇಟ್

ವಿಶ್ವಾಮಿತ್ರರ ಆದೇಶದಂತೆ ಯಾಗರಕ್ಷಣೆಗೆ ಕಂಕಣ ಬದ್ಧರಾದ ರಾಮ-ಲಕ್ಷ್ಮಣರು ಅನೇಕ ರಕ್ಕಸರನ್ನು ಸಂಹರಿಸಿದರು. ದುಷ್ಟ ತಾಟಕಿಯ ಮಕ್ಕಳಾದ ಮಾರೀಚ ಮತ್ತು ಸುಬಾಹು ಯುದ್ಧಕ್ಕೆ ಬಂದರು. ರಾಮನು ಸುಬಾಹುವನ್ನು ಕೊಂದು ಮಾರೀಚನನ್ನು ಕೊಲ್ಲದೆ ಮಹಾಸಾಗರದ ಆಚೆ ಗಡಿಪಾರು ಮಾಡಿದ. ಅಣ್ಣನ ಕ್ರಮದಿಂದ ಆಶ್ಚರ್ಯಚಕಿತನಾದ ಲಕ್ಷ್ಮಣ ಈ ಬಗ್ಗೆ ಕೇಳಿದಾಗ ರಾಮನು ಹೀಗೆ ಹೇಳಿದ: ‘ನಿನ್ನ ಪ್ರಶ್ನೆ ಸಮರ್ಪಕವೂ, ಸೂಕ್ತವೂ ಆಗಿದೆ. ಯಜ್ಞಯಾಗಕ್ಕೆ ಅಡ್ಡಿ ಮಾಡುವ ಅಧರ್ವಿುಗಳನ್ನು ನಿಗ್ರಹಿಸಬೇಕಾದುದು ನಮ್ಮ ಕರ್ತವ್ಯವೇ ಆಗಿತ್ತು. ಮಾರೀಚ ಸಂನ್ಯಾಸಿಯ ವೇಷದಲ್ಲಿ ಬಂದಿದ್ದ, ಅದಕ್ಕೆ ಆತನನ್ನು ಕ್ಷಮಿಸಿದೆ. ಇಲ್ಲಿ ನಿನಗೊಂದು ದೃಷ್ಟಾಂತ ಹೇಳುತ್ತೇನೆ. ಒಮ್ಮೆ ಐವರು ಕಳ್ಳರು ಮಾವಿನ ತೋಪಿಗೆ ಹೊಕ್ಕು ಹಣ್ಣನ್ನು ಕದಿಯುತ್ತಿದ್ದರು. ಕಾವಲುಗಾರರು ಬರುತ್ತಿದ್ದಂತೆ ನಾಲ್ವರು ತಪ್ಪಿಸಿಕೊಂಡು ಓಡಿದರು. ಉಳಿದ ಒಬ್ಬನಿಗೆ ದಿಕ್ಕುತೋಚದೆ ತಾನು ಉಟ್ಟಬಟ್ಟೆಯನ್ನೆಲ್ಲ ಕಿತ್ತುಹಾಕಿ ಕೇವಲ ಕೌಪೀನವನ್ನು ಉಟ್ಟು ಅಲ್ಲಿಯೇ ಇದ್ದ ಬೂದಿಯನ್ನು ಮೈಗೆ ಹಚ್ಚಿಕೊಂಡು ಕಣ್ಣುಮುಚ್ಚಿ ಕುಳಿತುಬಿಟ್ಟ. ಅಲ್ಲಿಗೆ ಬಂದ ಮಾಲೀಕ ಈತನನ್ನು ವೀಕ್ಷಿಸಿದ, ಎಷ್ಟು ಸದ್ದಾದರೂ ಕಣ್ಣು ಮುಚ್ಚಿ ಧ್ಯಾನಿಸುತ್ತಲೇ ಇದ್ದಾನೆ. ಒಂದಿಷ್ಟು ಹಣ್ಣನ್ನು ಮುಂದೆ ತಂದಿಟ್ಟರೂ ಕಣ್ಣು ತೆರೆಯಲಿಲ್ಲ. ಆತ ಧ್ಯಾನದಲ್ಲಿದ್ದಾನೆ, ನಂತರ ನೋಡೋಣ ವೆಂದು ತುಸು ಸಮಯ ಬಿಟ್ಟು ಬಂದರು. ಅದೇ ಸ್ಥಿತಿ. ಆತನಿಗೆ ಕಣ್ಣು ಬಿಡಲು ಭಯ.

ಸುದ್ದಿ ಅರಮನೆಗೆ ತಲುಪಿತು. ರಾಜನು ಅರಮನೆಯಲ್ಲಿಯೇ ಚಾತುರ್ವಸ್ಯ ಕಳೆಯಲು ವಿನಂತಿಸಿಕೊಂಡ. ಈತ ಹುಚ್ಚು ಧೈರ್ಯದಿಂದ ದೈವದ ಮೇಲೆ ಸಂಪೂರ್ಣ ಭಾರಹಾಕಿ ಒಪ್ಪಿಗೆ ಸೂಚಿಸಿದ. ಕೋಣೆಯಲ್ಲಿ ಒಬ್ಬನೇ ಪೂಜೆ, ಧ್ಯಾನ ಮಾಡುತ್ತ ಯಾರೊಂದಿಗೂ ಮಾತಾಡದೇ ಎರಡು ತಿಂಗಳು ಅಂತಮುಖಿಯಾಗಿದ್ದ. ಕೊನೆಗೆ ನಿಜವಾದ ವೈರಾಗ್ಯ ಬಂದು ಸಂನ್ಯಾಸಿಯಾಗಿ ಲೋಕೋದ್ಧಾರಕ್ಕಾಗಿ ಶ್ರಮಿಸಿದ. ಪ್ರತಿಯೊಬ್ಬನಲ್ಲೂ ಒಂದು ದೈವೀಶಕ್ತಿ ಇದೆ ಅಲ್ಲವೇ? ಆದ್ದರಿಂದ ಮಾರೀಚನನ್ನು ಕೊಲ್ಲಲಿಲ್ಲ’ ಎಂದಾಗ ಲಕ್ಷ್ಮಣನ ಕಣ್ಣು ಕಂಬನಿಗರೆಯಿತು. ‘ಅಣ್ಣಾ, ‘ರಿಪೂಣಾಂ ಅಪಿವತ್ಸಲಂ’ ಎಂಬ ಋಷಿವಾಕ್ಯ ಲೋಕದಲ್ಲಿ ನಿನಗೊಬ್ಬನಿಗೆ ಮಾತ್ರ ಅನ್ವಯಿಸುವುದು. ನಿನ್ನ ಈ ವಿವೇಚನೆಯ ತಾಳ್ಮೆ, ಕ್ಷಮೆಗೆ ಕೋಟಿಕೋಟಿ ಪ್ರಣಾಮಗಳು’ ಎಂದನು.

ನಿಜ, ಯಾರಲ್ಲಿ ಎಂತಹ ಪ್ರಕಾಶ, ಅನನ್ಯ ಶಕ್ತಿ ಹುದುಗಿಕೊಂಡಿದೆಯೋ ತಿಳಿಯುವುದಿಲ್ಲ. ಪ್ರತಿನಿತ್ಯ ಹೊಸ ಬೆರಳಿನ ಹಾರವನ್ನು ಕೊರಳಿಗೆ ಹಾಕಿಕೊಳ್ಳುತ್ತಿದ್ದ ಕ್ರೂರಿ ಅಂಗುಲಿಮಾಲನೆಂಬ ರಕ್ತಪಿಪಾಸು ಬುದ್ಧನ ಶಾಂತಿ ಎಂಬ ಮದ್ದಿನಿಂದ ಬೌದ್ಧಭಿಕ್ಷು ಪುಣ್ಯಾಕ್ಷನಾಗಲಿಲ್ಲವೇ? ಲೌಕಿಕ ಜೀವನದಲ್ಲಿ ಆಸಕ್ತರಾಗಿದ್ದ ಗೋಸ್ವಾಮಿ (ತುಳಸೀದಾಸರು) ಸತಿಯ ಮಾತಿಗೆ ಪರಿವರ್ತಿತನಾಗಿ, ರಾಮಭಕ್ತನಾಗಿ ಶ್ರೀರಾಮ ಚರಿತಮಾನಸದ ಸಂತಕವಿಯಾದ. ಹೀಗೆ ಬದಲಾಗಿ, ನೈಜ ಶಕ್ತಿಯನ್ನು, ಅಂತಃಸತ್ವವನ್ನು ಕಂಡುಕೊಂಡ ಅದೆಷ್ಟೋ ನಿದರ್ಶಮಗಳಿವೆ. ಆದ್ದರಿಂದ ಅಪರಾಧಿಗೆ ಶಿಕ್ಷೆ ನೀಡುವ ಮುನ್ನ ವಿವೇಚನೆಯಿಂದ ಆಮೂಲಾಗ್ರವಾಗಿ ಪರಿಶೀಲಿಸಬೇಕು. ಅವರು ಉತ್ತಮವ್ಯಕ್ತಿಯಾಗಿ ಪರಿವರ್ತನೆಯಾಗುವಂತೆ ಪ್ರಯತ್ನಿಸಬೇಕು. ಹೀಗೆ ‘ಕ್ಷಮೆ’ ಎಂಬ ಶ್ರೇಷ್ಠ ಗುಣದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರಯತ್ನಿಸಬೇಕು.

(ಲೇಖಕರು ಗಮಕ ವ್ಯಾಖ್ಯಾನಕಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net