ಮನೋಲ್ಲಾಸ | ಶುದ್ಧ ಹೃದಯದ ಭಕ್ತಿಯೇ ಸಾಕು

Buddha
Published on
 ಪದ್ಮಲತಾ ಮೋಹನ್

ಅನುಯಾಯಿಗಳ ಜೊತೆ ಸಂಚರಿಸುತ್ತ ಬುದ್ಧ ಒಂದು ಊರಿಗೆ ಬಂದು ತಲುಪಿದ. ಅಲ್ಲಿ ಅವನು ಕೆಲವು ದಿನ ತಂಗುವವನಿದ್ದ. ಈ ವಿಚಾರ ತಿಳಿದು ಆ ಊರಿನ ರಾಜ ರಾತ್ರಿ ಸಮಯದಲ್ಲಿ ದೀಪ ಉರಿಸಲು ಆತನ ಆಶ್ರಮಕ್ಕೆ ಎಣ್ಣೆ ತುಂಬಿದ ಡಬ್ಬಗಳನ್ನು ಗಾಡಿ ತುಂಬ ತುಂಬಿ ಕಳುಹಿಸಿದ. ಅಗ್ರಹಾರದ ದಾರಿಯಲ್ಲಿ ಹೋಗುತ್ತಿದ್ದ ಈ ಗಾಡಿಯನ್ನು ನೋಡಿ ಒಬ್ಬ ವೃದ್ಧೆ ಕುತೂಹಲದಿಂದ ಗಾಡಿ ಓಡಿಸುವವನಲ್ಲಿ ‘ಈ ಡಬ್ಬಿಗಳಲ್ಲಿ ಏನಿದೆ?’ ಎಂದು ಪ್ರಶ್ನಿಸಿದಳು. ಆತ, ‘ಇದರೊಳಗೆ ದೀಪ ಉರಿಸುವ ಎಣ್ಣೆ ಇದೆ. ಇದನ್ನು ನಮ್ಮ ರಾಜನು ಬುದ್ಧನಿಗಾಗಿ ಕಳುಹಿಸಿಕೊಟ್ಟಿದ್ದಾನೆ’ ಎಂದ. ಇಷ್ಟೊಂದು ಎಣ್ಣೆ ಬುದ್ಧನಿಗೆ ಏಕೆ ಬೇಕೆಂದು ವೃದ್ಧೆ ಕೇಳಿದಾಗ, ‘ರಾತ್ರಿ ಹೊತ್ತು ಅವರ ಆಶ್ರಮವನ್ನು ಬೆಳಗಲಿಕ್ಕೆ ದೀಪಗಳನ್ನು ಹಚ್ಚಲು ಇದನ್ನು ಕಳುಹಿಸುತ್ತಿದ್ದಾರೆ’ ಎಂದ. ಬುದ್ಧನ ಮಹಿಮೆ ಬಗ್ಗೆ ತಿಳಿದಿದ್ದ ವೃದ್ಧೆಗೆ ತಾನೂ ಎಣ್ಣೆ ಕಳುಹಿಸಿ ಅಳಿಲುಸೇವೆ ಸಲ್ಲಿಸಬೇಕೆಂಬ ಆಸೆಯುಂಟಾಯಿತು. ಅವಳು ಬಡವಳು. ದುಡ್ಡಿರಲಿಲ್ಲ. ಹಾಗಾಗಿ, ತನ್ನ ಉದ್ದವಾದ ಹೆರಳನ್ನು ಕತ್ತರಿಸಿ ಅದನ್ನು ಮಾರಿ ಅದರಲ್ಲಿ ಬಂದ ಅಲ್ಪಹಣದಲ್ಲಿ ಎಣ್ಣೆಯನ್ನು ಕೊಂಡು ಆಶ್ರಮಕ್ಕೆ ಹೋದಳು.

ಭಯ-ಭಕ್ತಿಯಿಂದ ಬುದ್ಧನಿಗೆ ಕೈ ಮುಗಿದು, ‘ದಯವಿಟ್ಟು ನನ್ನ ಈ ಸಣ್ಣ ಕಾಣಿಕೆ ಸ್ವೀಕರಿಸಿ. ರಾಜರು ಕಳುಹಿಸಿದ ಸಾವಿರ ಹಂಡೆ ಎಣ್ಣೆಯ ಎದುರು ಇದು ಸಣ್ಣಹನಿ. ನೀವು ಇದನ್ನು ಸ್ವೀಕರಿಸಿದರೆ ನಾನು ಕೃತಜ್ಞಳಾಗಿರುತ್ತೇನೆ’ ಎಂದಳು. ಆ ವೃದ್ಧೆಯ ಕಣ್ಣುಗಳು ತುಂಬಿದ್ದನ್ನು ಗಮನಿಸಿದ ಬುದ್ಧ ಅವಳ ಕಾಣಿಕೆಯನ್ನು ಸ್ವೀಕರಿಸಿದ್ದಲ್ಲದೆ ‘ಇದು ಯಾವ ರೀತಿಯಲ್ಲೂ ರಾಜನ ಕಾಣಿಕೆಗಿಂತ ಚಿಕ್ಕದಲ್ಲ’ ಎಂದು ಅವಳಿಗೆ ಸಮಾಧಾನ ಮಾಡಿ ಕಳುಹಿಸಿದ.

ತದನಂತರ ಬುದ್ಧ ತನ್ನ ಅನುಯಾಯಿಗಳಿಗೆ ರಾಜ ಕಳುಹಿಸಿದ ಎಣ್ಣೆ ಹಾಕಿ ದೀಪಗಳನ್ನು ಬೆಳಗಿಸುವಂತೆ ಹೇಳಿದ. ಹಾಗೆ ಒಂದು ದೀಪಕ್ಕೆ ವೃದ್ಧೆ ಕೊಟ್ಟ ಎಣ್ಣೆಯನ್ನು ಹಾಕಿ ದೀಪ ಬೆಳಗಿಸಲು ಹೇಳಿದ. ಆಶ್ಚರ್ಯವೆಂದರೆ, ರಾಜ ಕಳುಹಿಸಿದ ಎಣ್ಣೆಯಿಂದ ಉರಿಯುತ್ತಿದ್ದ ದೀಪಗಳು ಮಧ್ಯರಾತ್ರಿ ಕಳೆಯುವಷ್ಟರಲ್ಲಿ ಆರಿಹೋದವು. ಆದರೆ ವೃದ್ಧೆ ಕೊಟ್ಟ ಎಣ್ಣೆ ಹಾಕಿದ್ದ ಆ ಒಂದು ಹಣತೆ ಬೆಳಗಿನರೆಗೂ ಬೆಳಗುತ್ತಲೇ ಇತ್ತು. ಅನುಯಾಯಿಗಳ ಮುಖದಲ್ಲಿದ್ದ ಆಶ್ಚರ್ಯ ಗಮನಿಸಿ ಬುದ್ಧ ಹೇಳಿದ-‘ಆ ವೃದ್ಧೆ ಪರಿಶುದ್ಧ ಹೃದಯದಿಂದ ತಂದ ಕಾಣಿಕೆ. ಆದ್ದರಿಂದಲೇ ಅದು ದೀರ್ಘಕಾಲ ಉರಿಯಿತು. ರಾಜ ಹಣದ ಗರ್ವದಿಂದ ಇಲ್ಲಿಗೆ ಎಣ್ಣೆಯನ್ನು ಕಳುಹಿಸಿದ್ದ. ಆದ್ದರಿಂದ ಅದು ಬಹಳ ಬೇಗ ನಂದಿಹೋಯಿತು. ಇಲ್ಲಿ ಕಾಣಿಕೆಯ ಪ್ರಮಾಣಕ್ಕಿಂತ ಅದನ್ನು ಕೊಟ್ಟವರ ಪ್ರಾಮಾಣಿಕತೆ ಮುಖ್ಯವಾಗುತ್ತದೆ’ ಎಂದ.

ನಮ್ಮ ಈ ಸಮಾಜದಲ್ಲಿ ಕೂಡ ಕೆಲವರು ಬಹಳ ಖರ್ಚು ಮಾಡಿ ಆಡಂಬರದಿಂದ ದೇವರಿಗೆ ಪೂಜೆ ಹವನ ಮಾಡಿದರೆ, ಬಡವರು ಭಕ್ತಿಯಿಂದ ತಮ್ಮಲ್ಲಿ ಏನಿದೆಯೋ ಅದನ್ನೇ ದೇವರಿಗೆ ಅರ್ಪಿಸಿ ಕೈ ಮುಗಿಯುವುದನ್ನು ಕಂಡಿದ್ದೇವೆ. ‘ದೇವಾ ನಿನಗೆ ನಾನೇನು ಕೊಡಲಿ ಬಡವನಯ್ಯಾ’ ಎಂದು ಕೊರಗುವ ಬದಲು ನಿಷ್ಠೆಯಿಂದ ಇದ್ದುದನ್ನೇ ಅರ್ಪಿಸಿ ಪ್ರಾಮಾಣಿಕವಾಗಿ ಪ್ರಾರ್ಥಿಸಿದರೆ ದೇವರು ಸಂತೃಪ್ತಿಗೊಳ್ಳುತ್ತಾನೆ, ನಮಗೂ ನೆಮ್ಮದಿ.

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net