ಮನೋಲ್ಲಾಸ: ಶಂಖ ಮತ್ತು ಸೂಜಿ!

savings
Published on

ತುಂಬಿದ ಸಂಸಾರದ ಒಬ್ಬ ಗೃಹಸ್ಥರು. ದೈವಿಕರೂ, ಶಿಸ್ತಿನ ಸಿಪಾಯಿಯೂ, ಕಷ್ಟಜೀವಿ. ಹೀಗೆ ಲೆಕ್ಕಾಚಾರದ, ಸಾತ್ವಿಕ, ಸುಖೀಜೀವನ. ಮನವನ್ನರಿತು ನಡೆಯುವ ಸತಿ. ದಿನವೂ ಆ ಗೃಹಸ್ಥರು ಊಟಕ್ಕೆ ಕುಳಿತುಕೊಳ್ಳುವಾಗ ಒಂದು ಕಟ್ಟುಪಾಡಿತ್ತು. ಊಟದ ತಟ್ಟೆ ಹತ್ತಿರ ನೀರಿನ ಚೆಂಬಿನ ಜತೆಗೆ ನೀರು ತುಂಬಿಸಿದ ಒಂದು ಪುಟ್ಟ ಶಂಖ, ಅದರ ಪಕ್ಕ ಒಂದು ಸೂಜಿ ಇದಿಷ್ಟು ಕಡ್ಡಾಯವಾಗಿ ಇರಲೇಬೇಕಿತ್ತು. ಇದು ಆ ಮನೆಯ ಸದಸ್ಯರೆಲ್ಲರಿಗೂ ಅಭ್ಯಾಸವಾಗಿ ಹೋಗಿತ್ತು. ಅವರದ್ದೇನೂ ತಕರಾರಿರಲಿಲ್ಲ. ಅವರ ಮನೆಗೆ ಹೋದವರಿಗೆ ಈ ವಿಷಯದ ಬಗ್ಗೆ ಕುತೂಹಲ ಮೂಡುತ್ತಿತ್ತಾದರೂ ಅವರ ಮೇಲಿನ ಗೌರವದಿಂದ ವಿಚಾರಿಸಲು ಯಾರೂ ಮುಂದಾಗುತ್ತಿರಲಿಲ್ಲ.

ಹೀಗೆ ವರುಷಗಳು ಸಂದವು. ಮಕ್ಕಳಿಗೆ ಮದುವೆಯಾಯಿತು. ಸಂಸಾರವೃಕ್ಷ ಬೆಳೆಯಿತು. ಸಹಜವೆಂಬಂತೆ ದಂಪತಿಗೂ ವಯಸ್ಸಾಯಿತು. ಆದರೂ ಊಟದ ಸಮಯದ ಈ ಆಚರಣೆಗೆ ಅಡ್ಡಿಯಿರಲಿಲ್ಲ. ಮೊದಲೇ ಹೇಳಿದಂತೆ ವಯಸ್ಸಾಗಿದ್ದ ದಂಪತಿಯಲ್ಲವೇ? ಸತಿ ಸಾಧಿ್ವಮಣಿಗೆ ಆರೋಗ್ಯ ಹದಗೆಟ್ಟಿತು. ಆದರೂ ಮಲಗಿದಲ್ಲಿಂದಲೇ ಶಂಖ-ಸೂಜಿಯ ವ್ಯವಸ್ಥೆ ಆಗಿದೆಯೋ ಇಲ್ಲವೋ ಎಂದು ವಿಚಾರಿಸುತ್ತಿದ್ದರು. ಆ ಗೃಹಿಣಿಯ ಕೊನೆಯ ದಿನಗಳು ಹತ್ತಿರವಾದವು. ಅವಳು ಪ್ರಯಾಸದಿಂದ-‘ಸ್ವಾಮೀ ಆ ಶಂಖ-ಸೂಜಿ ಊಟ ಮಾಡುವಾಗ ನಿಮಗೆ ಹತ್ತಿರವೇಕೆ ಬೇಕು ಎಂದು ನಾನು ಇಷ್ಟು ದಿನ ಕೇಳಲಿಲ್ಲ. ಆದರೆ ಇಹ ತ್ಯಜಿಸುವ ಮೊದಲು ನನಗೆ ಅದರ ಉದ್ದೇಶ ತಿಳಿಯುವ ಮನಸ್ಸಾಗಿದೆ. ದಯವಿಟ್ಟು ತಿಳಿಸುವಿರಾ?’ ಎಂದು ಪ್ರಶ್ನಿಸಿದಳು. ಆಗ ಆ ಗೃಹಸ್ಥರು, ‘ಭಾರ್ಯು, ಅದೇನೆಂದರೆ, ಒಂದುವೇಳೆ ಅನ್ನ ಬಡಿಸುವಾಗ ನೀನು ಒಂದು ಅಗುಳು ಅಕಾಸ್ಮಾತ್ತಾಗಿ ಚೆಲ್ಲಿದರೆ ಅದಕ್ಕಾಗಿ ನಿನ್ನ ಮೇಲೆ ಸಿಟ್ಟಾಗುವ ಬದಲು, ಅದನ್ನು ಸೂಜಿಯ ಮೊನೆಯಿಂದ ಹೆಕ್ಕಿ ಶಂಖದ ನೀರಿನಲ್ಲಿ ಮುಳುಗಿಸಿ ತಿಂದರಾಯಿತು ಎಂದು ವ್ಯವಸ್ಥೆ ಮಾಡಿಕೊಂಡಿದ್ದೆ. ಆದರೆ ಒಂದು ದಿನವೂ ಅದನ್ನು ಉಪಯೋಗಿಸುವ ಪ್ರಮೇಯವೇ ಬರಲಿಲ್ಲ. ಒಂದು ದಿನವೂ ನೀನು ಬಡಿಸುವಾಗ ಅನ್ನವನ್ನು ಚೆಲ್ಲಲಿಲ್ಲ. ಅದಕ್ಕಾಗಿ ಹೇಳುವ ಪ್ರಮೇಯವೂ ಬರಲಿಲ್ಲ. ಈಗ ಸಮಾಧಾನವಾಯಿತೋ?’ ಎಂದರು.

ನಮಗೆಲ್ಲ ಕಥೆಯಾಗಿ ತೋರಿದರೂ ಇದರಲ್ಲಿ ಹುದುಗಿರುವ ನೀತಿಗಳೆಷ್ಟೋ? ಒಂದೇ ಒಂದು ಅಗುಳನ್ನೂ ಚೆಲ್ಲದೆ ಬಡಿಸುವ ಆ ಗೃಹಿಣಿಗೆ ಕೆಲಸದಲ್ಲಿರುವ ಶ್ರದ್ಧೆ, ಒಂದುವೇಳೆ ಚೆಲ್ಲಿದಲ್ಲಿ ಆ ತಪ್ಪನ್ನೇ ಹಿಡಿದುಕೊಂಡು ಗಲಾಟೆ ಮಾಡಿ ಎಲ್ಲರ ನೆಮ್ಮದಿ ಹಾಳುಗೆಡುವುದರ ಬದಲು ಅದನ್ನು ವ್ಯರ್ಥವಾಗಲು ಬಿಡದೆ, ಚೆಲ್ಲದೆ ಮತ್ತೆ ಉಪಯೋಗಿಸುವ ಗೃಹಸ್ಥನ ಚಾಣಾಕ್ಷತೆ, ಉದ್ದೇಶ ಏನೇ ಇರಲಿ, ಯಜಮಾನನೆಂದು ಚುಕ್ಕಾಣಿ ಹಿಡಿದು ನಡೆಯುತ್ತಿರುವವರು ಸರಿಯಾಗೇ ಕೆಲಸ ನಿರ್ವಹಿಸುತ್ತಾರೆ ಎಂದು ಕುಟುಂಬದ ಎಲ್ಲರೂ ಇಟ್ಟಿರುವ ನಂಬಿಕೆಯಿಂದ ಕುಟುಂಬ ವ್ಯವಸ್ಥೆ ಒಡೆಯದಿರುವುದು, ಪ್ರತಿಯೊಂದು ಅನ್ನದ ಅಗುಳಿಗೂ ಕೊಡುವ ಬೆಲೆ, ಹೀಗೆ ಅನೇಕ ನೀತಿಗಳು ಯೋಚಿಸಿದರೆ ಗೋಚರಿಸಬಲ್ಲವು. ಈಗಿನ ಕೊಳ್ಳುಬಾಕ ಸಂಸ್ಕೃತಿ ನಾವು ಊಹಿಸಲೂ ಸಾಧ್ಯವಾಗದಷ್ಟರ ಮಟ್ಟಿಗೆ ಬೆಳೆದಿದೆ. ಮನಸ್ಸಿಗೆ ಹೊಳೆದಿದ್ದೆಲ್ಲವೂ ಅಂಗೈಯಲ್ಲೇ ಲಭ್ಯ. ಸಮಾಜದಲ್ಲಿ ಸ್ಥಾನಮಾನ ಕಾಯ್ದುಕೊಳ್ಳುವುದಕ್ಕಾಗಿ ಸ್ಪರ್ಧೆ. ಅದಕ್ಕಾಗಿ ಸಾಲದ ವರ್ತಲ. ಅದನ್ನು ತೀರಿಸಲು ನಿರಂತರ ದುಡಿಮೆ. ಯಾಂತ್ರಿಕ ರೀತಿಯ ದುಡಿಮೆಯಿಂದ ಮನಸ್ಸಿನ, ಸಂಸಾರದ ನೆಮ್ಮದಿಯೆಂಬುದು ಮರೀಚಿಕೆಯಾಗಿದೆ. ಮುಖ್ಯವಾಗಿ ಸಣ್ಣ ಸಣ್ಣ ವಿಷಯಗಳಲ್ಲಿ ನೆಮ್ಮದಿ ಕಾಣುವ ಅಭ್ಯಾಸವನ್ನು ಮರೆತೇ ಬಿಟ್ಟಿದ್ದೇವೆ. ಸಣ್ಣ ಉಳಿತಾಯವೆಂಬ ಪದ್ಧತಿಯನ್ನು ನಮ್ಮ ಮುಂದಿನವರಿಗೆ ಹೇಳಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ.

ನಯನಾ ಭಿಡೆ

(ಲೇಖಕಿ ಯಕ್ಷಗಾನ ಕಲಾವಿದೆ, ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net