

ತೆಗೆಯುವಾಗ ಸ್ವಲ್ಪ ವ್ಯತ್ಯಾಸವಾದರೂ ಬಟ್ಟೆ ಹರಿದುಹೋಗುವ ಸಾಧ್ಯತೆ. ಬಟ್ಟೆ ಹರಿಯದಂತೆ ಜಾಗರೂಕನಾಗಿ ಮುಳ್ಳಿನ ಗಿಡದಿಂದ ತೆಗೆಯಬೇಕು. ಇಲ್ಲಿ ಬೇಕು ಒಂದು ಕುಶಲತೆ. ಈ ಸೃಷ್ಟಿಯೆಂಬುದೇ ಮುಳ್ಳಿನ ಗಿಡ. ಇಲ್ಲಿ ಹಾಕಿದ ಬಟ್ಟೆಯೇ ಈ ಮಾನವಶರೀರ. ಸಿಕ್ಕ ಈ ಉತ್ತಮ ಮಾನವಜನ್ಮವನ್ನು ಜಾಣ್ಮೆಯಿಂದ ಕಳೆಯಬೇಕು. ಸ್ವಲ್ಪ ವ್ಯತ್ಯಾಸವಾದ್ರೆ ಈ ಸಂಸಾರದಲ್ಲೇ ‘ಪುನರಪಿ ಜನನಂ ಪುನರಪಿ ಮರಣಂ’ ಎಂದು ಉರುಳಬೇಕಾಗುತ್ತದೆ.
ಯಾವನು ಕರ್ಮವನ್ನು ಕುಶಲತೆಯಿಂದ ಮಾಡುವನೋ ಅವನು ಭವಬಂಧನದಿಂದ ಪಾರಾಗುತ್ತಾನೆ. ಇದನ್ನೆ ‘ಯೋಗಃ ಕರ್ಮಸು ಕೌಶಲಮ್- ಕರ್ಮ ಕೌಶಲವೇ ಯೋಗವೆಂದು ಗೀತಾಚಾರ್ಯನು ಸಾರಿದ್ದಾನೆ. ಹಾಗಾದರೆ ಯಾವುದು ಬಂಧಕ? ಯಾವುದು ಮೋಚಕ?
‘ಯಜ್ಞಾರ್ಥಾತ್ ಕರ್ಮಣೋ ಅನ್ಯತ್ರ ಲೋಕೋಯಂ ಕರ್ಮಬಂಧನಃ’ (ಗೀತೆ) ಯಜ್ಞಕ್ಕೆ ಹೊರತಾದ ಕರ್ಮವೆಲ್ಲವನ್ನೂ ‘ಬಂಧಕ’ ಎನ್ನುತ್ತಾರೆ. ಇಲ್ಲಿ ಯಜ್ಞ ಎಂದರೆ ಕೇವಲ ಬಾಹ್ಯವಾದ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸಲ್ಲ. ಇದೂ ಯಜ್ಞವೇ. ತ್ಯಾಗವನ್ನೇ ಯಾಗವೆಂದರು. ‘ಈ ಸೃಷ್ಟಿಯಲ್ಲಿ ಇರುವುದೆಲ್ಲವೂ ಭಗವಂತನ ಸ್ವತ್ತು. ಇದು ನನ್ನದಲ್ಲ. ನಿನ್ನದಾದ ಈ ವಸ್ತುವನ್ನು ನನ್ನ ಉದ್ಧಾರಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ’ ಎಂಬ ಬುದ್ಧಿಯಿಂದ ಮಾಡುವ ಪ್ರತಿಯೊಂದು ಕೆಲಸವೂ ಯಾಗವೇ ಆಗುತ್ತದೆ.
ಭಗವಂತನ ಅನುಗ್ರಹವಾಗಿ ಬಂದ ಈ ಮಣ್ಣು, ನೀರು, ಅಗ್ನಿ, ಅನಿಲ, ಆಕಾಶ, ಕರಣ-ಕಳೇಬರಗಳನ್ನು ಅವನಿಗಾಗಿ ಬಳಸುತ್ತಿದ್ದೇನೆ ಎಂಬ ಭಾವವೇ ಯಾಗ. ಉಸಿರಾಟದಿಂದ ಹಿಡಿದು ಉಸಿರು ನಿಲ್ಲುವ ತನಕ ಈ ಭಾವದಿಂದ ಮಾಡುವ ಪ್ರತಿಯೊಂದು ಕ್ರಿಯೆಯೂ ಯಾಗವಾಗುತ್ತದೆ. ಆಗ ಯಾವ ಪದಾರ್ಥದ ಮೇಲೂ ನನ್ನದೆಂಬ ಅಂಟು ಇರುವುದಿಲ್ಲ. ಅಂಟು ಇಲ್ಲದಿದ್ದಾಗ ಅಲ್ಲಿ ಶೋಕ ಮೋಹಾದಿಗಳೂ ಹುಟ್ಟಲಾರವು.
ಅವನಿಗೆ ಪ್ರಪಂಚವೆಲ್ಲವೂ ಭಗವನ್ಮಯವಾಗಿ ಕಾಣುವುದು. ಆತ ಮಾಡುವ ಯಾವ ಕರ್ಮವೂ ಅವನನ್ನು ಬಂಧಿಸದು. ಅಲ್ಲದೆ ಹಾಗೆ ಮಾಡುವ ಕರ್ಮದಿಂದ ಪಾಪನಿವೃತ್ತಿಯಾಗಿ ಶುದ್ಧನಾಗುತ್ತಾನೆ. ಹೀಗೆ ಮಾಡಲು ಮುಳ್ಳಿನ ಗಿಡದಿಂದ ಬಟ್ಟೆಯನ್ನು ತೆಗೆದಂತೆ ಅತ್ಯಂತ ಜಾಗ್ರತೆಯಿಂದ ಕೆಲಸ ಮಾಡಬೇಕು.
ಅದಿಲ್ಲದಿದ್ದರೆ ನಾವು ಮಾಡುವ ಕರ್ಮಗಳಿಂದಲೇ ಈ ಸಂಸಾರದಲ್ಲೇ ಮುಳುಗುತ್ತೇವೆ. ಹೀಗೆ ಅರಿತು ಭಗವತ್ಸಮರ್ಪಣೆಯಿಂದ ಮಾಡುವ ಕರ್ಮ ಮೋಚಕ. ತಿಳಿಯದೇ ಮಾಡುವುದು ಬಂಧಕ. ಇದನ್ನೇ ಶ್ರೀರಂಗಮಹಾಗುರುಗಳು ‘ಕರ್ಮವನ್ನು ಮರ್ಮವರಿತು ಆಚರಿಸಿ’ ಎಂದು ಹೇಳುತ್ತಿದ್ದರು. ಇಂತಹ ಮೋಚಕವಾದ ಕರ್ಮಗಳನ್ನು ನಾವು ಆಚರಿಸುವಂತಾಗಲಿ.
| ವಿದ್ವಾನ್ ನರಸಿಂಹ ಭಟ್ಟ (ಲೇಖಕರು ಅಧ್ಯಾತ್ಮ ಚಿಂತಕರು, ಉಪನ್ಯಾಸಕರು)