ಮನೋಲ್ಲಾಸ| ಜಗವೆಲ್ಲ ನಗುತಿರಲಿ...

Buddha
Published on

ಮಹಾದೇವ ಬಸರಕೋಡ

ನಾವೆಲ್ಲ ಪರಿಸರದೊಂದಿಗೆ, ಸುತ್ತಣ ಸಮಾಜದೊಂದಿಗೆ ಸಹಬಾಳ್ವೆ ನಡೆಸಬೇಕು. ಅದು ಬದುಕಿನ ಅನಿವಾರ್ಯತೆ ಕೂಡ. ಎಲ್ಲ ಸಿರಿ-ಸಂಪತ್ತು, ಧನ-ಕನಕ, ಭೌತಿಕ ಸಂಪತ್ತುಗಳು ನಮ್ಮ ಪಾಲಿಗಿದ್ದರೂ ನಮ್ಮಷ್ಟಕ್ಕೆ ನಾವು ಇರಲು ಸಾಧ್ಯವಿಲ್ಲ. ನಮ್ಮಂತೆಯೇ ಸಹಜೀವಿಗಳಾದ ಮನುಷ್ಯರು, ನಮಗೆ ಆಪ್ತರಾದ ತಂದೆ-ತಾಯಿ, ಹೆಂಡತಿ-ಮಕ್ಕಳು, ಬಂಧು-ಬಳಗ, ಪಶು-ಪಕ್ಷಿ ಮಾತ್ರವಲ್ಲದೆ ಸುತ್ತಲಿನ ಪರಿಸರ ಸೇರಿ ಸಮಸ್ತ ಸಮಷ್ಟಿಯೆಲ್ಲವೂ ಚೆನ್ನಾಗಿದ್ದರೆ ಮಾತ್ರ ನಾವು ಸುಖವಾಗಿ ಇರಬಹುದು. ಕೇವಲ ಸ್ವಪ್ರಯೋಜವನ್ನು ಗುರಿಯಾಗಿಸಿಕೊಂಡ ಬದುಕು, ನಮ್ಮ ಇಂದ್ರಿಯಗಳಿಗೆ ಮಾತ್ರವೇ ಸಂತೃಪಿಯನ್ನು ತಂದುಕೊಳ್ಳುವ ತಹತಹ, ವೈಯಕ್ತಿಕ ಅಪೇಕ್ಷೆಗಳ ತಣಿವನ್ನೇ ಬದುಕಿನ ಧ್ಯೇಯವಾಗಿಸಿಕೊಂಡ ನಿಲುವುಗಳು ಬಹಳಷ್ಟು ಬಾರಿ ಸಂಕಟಕ್ಕೆ ದಾರಿ ಮಾಡಿಕೊಡುತ್ತವೆ.

ರಾಜಕುಮಾರ ಸಿದ್ಧಾರ್ಥನಿಗೆ ಸುಂದರಿಯಾದ ಹೆಂಡತಿ, ಮುತ್ತಿನಂಥ ಮಕ್ಕಳು, ಅರಮನೆ, ಭೋಗ ವೈಭವಗಳಲ್ಲಿನ ಬದುಕು, ಪ್ರೀತಿಯಿಂದ ಬೆಳೆಸಿದ ಪರಿಜನ ಎಲ್ಲವೂ ಇತ್ತು. ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ತನ್ನ ಸುತ್ತಣ ಪ್ರಪಂಚದಲ್ಲಿನ ನೋವು, ಸಾವು, ರೋಗ-ರುಜಿನ ಅವನ ಮನಸ್ಸನ್ನು ಕ್ಷಣಮಾತ್ರದಲ್ಲಿ ತಲ್ಲಣಗೊಳಿಸಿತ್ತು. ಬದುಕಿನ ವಾಸ್ತವವನ್ನು ಅರಿತುಕೊಂಡ ಸಿದ್ಧಾರ್ಥ ತನ್ನದೆಲ್ಲವನ್ನೂ ತ್ಯಾಗ ಮಾಡಿ ಪರಹಿತವಾದ ಸಂತೋಷ ಅನ್ವೇಷಣೆಗೆ ಮುಂದಾದ. ತನಗಾಗಿ ಮೀಸಲಾಗಿದ್ದ ಸುಖವನ್ನೆಲ್ಲ ತೊರೆದು ಸಂನ್ಯಾಸ ಸ್ವೀಕರಿಸಿದ. ಸತ್ಯಾನ್ವೇಷಣೆಗೆ ಮುಂದಾದ. ಎಲ್ಲವನ್ನೂ ಗೆದ್ದು ಬುದ್ಧನಾದ. ಎಲ್ಲರ ಬದುಕಿಗೆ ಬೆಳಕಾದ. ಬುದ್ಧನ ಬದುಕು ನಮಗೆಲ್ಲ ಪರಹಿತದ ಪ್ರಾಮುಖ್ಯವನ್ನು ಮನದಟ್ಟು ಮಾಡಿಸುತ್ತದೆ. ಎಲ್ಲರೂ ಚೆನ್ನಾಗಿದ್ದರೆ ಮಾತ್ರವೇ ನಾವು ಕೂಡ ಚೆನ್ನಾಗಿರಬಹುದೆಂಬ ಸರಳ ಸತ್ಯವನ್ನು ಅನಾವರಣಗೊಳಿಸುತ್ತದೆ. ಅಂತೆಯೇ, ನಮ್ಮ ಋಷಿಮುನಿಗಳು,

ಕಾಲೇ ವರ್ಷತು, ಪರ್ಜನಃ ಪ್ರಥಿವೀ ಸಸ್ಯಶಾಲಿನಿ|

ದೇಶಃ ಭವತು ಕ್ಷೋಭರಹಿತಃ ತತ್ ಪ್ರಜಾಃ ಸಂತು ನಿರ್ಭಯಾಃ||

ಎಂಬ ಅರ್ಥಪೂರ್ಣ ಮಾತನ್ನು ನಮಗೆಲ್ಲ ಬಹುಹಿಂದೆಯೇ ತಿಳಿಸಿದ್ದಾರೆ. ‘ಸಕಾಲಕ್ಕೆ ಮಳೆ ಸುರಿಯಲಿ, ಬೆಳೆ ಸಮೃದ್ಧವಾಗಲಿ, ಭೂಮಿ ಸಸ್ಯಸಂಪತ್ತಿನಿಂದ ನಗುತಿರಲಿ. ಕಷ್ಟ-ನಷ್ಟ, ದುಃಖ-ದುಮ್ಮಾನಗಳಿಂದ ದೂರವಾಗಿ ಎಲ್ಲರೂ ಸಂತೋಷದಿಂದಿರಲಿ. ಎಲ್ಲರೂ ನಿರ್ಭೀತರೂ, ನಿಶ್ಚಿಂತರೂ ಆಗಿರಲಿ’ ಎಂದು ಹಾರೈಸಿದ್ದಾರೆ. ಅಂತೆಯೇ ನಾವೆಲ್ಲ ಸ್ವಾರ್ಥಬುದ್ಧಿಯನ್ನು ತೊರೆದು ಬೇರೆಯವರಿಗೆ ಒಂದಷ್ಟು ಸಂತೋಷವನ್ನು ಕೊಡುವ ಉದಾರತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮಿಂದಾಚೆಗೆ ವ್ಯಕ್ತಿತ್ವ ಹರಿದು ಸುತ್ತಣ ಬದುಕಿನೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು. ವೈಯಕ್ತಿಕ ಬದುಕು ಮುಖ್ಯ ಎಂದೆನಿಸಿದರೂ ಅದಕ್ಕಿಂತಲೂ ದೊಡ್ಡದಾದ ಸಂಗತಿಯೊಂದಿದೆ ಎಂಬ ಪ್ರಜ್ಞೆ ಅವಶ್ಯ. ಬಯಕೆಗಳು ಒಳ್ಳೆಯದಾದರೆ ಬದುಕು ಕೂಡ ಒಳ್ಳೆಯದಾಗುತ್ತದೆ. ಮನಸ್ಸಿನ ಕೊಳೆಯನ್ನು ಕಳೆದುಕೊಳ್ಳಲು ಮುಂದಾಗಬೇಕು. ಜಗದಳವು ನಮಗಿರಲಿ ಎನ್ನುವ ಉದಾರತೆ ಬಾರದೇ ಹೋದರೂ ಜಗವೆಲ್ಲ ನಗುತಿರಲಿ ಎಂಬುವ ಹೃದಯವೈಶಾಲ್ಯ ಬದುಕಿನ ಭಾಗವಾದಾಗ ನಿಜಕ್ಕೂ ಸದಾ ಸಂತೋಷ, ಸಂಭ್ರಮದಿಂದ ಇರಲು ಸಾಧ್ಯವಾಗಬಲ್ಲದು.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net