

ಆ ರಾಜ್ಯದಲ್ಲಿ ಹೊಸ ಶ್ಲೋಕವೊಂದನ್ನು ಹೇಳಿದರೆ, ರಾಜ ಅವರಿಗೆ ಬಹುಮಾನಿಸುತ್ತಿದ್ದ. ಹಾಗಾಗಿ ರಾಜ್ಯದ ಮೂಲೆ ಮೂಲೆಯಿಂದ ಬಂದ ಪಂಡಿತರು ಹೊಸ ಶ್ಲೋಕವನ್ನು ಹೇಳಿ ಬಹುಮಾನ ಪಡೆಯುತ್ತಿದ್ದರು. ಬಹುಮೊತ್ತದ ಬಹುಮಾನದಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತಿತ್ತು. ಪ್ರಧಾನ ಅಮಾತ್ಯ ಇದನ್ನು ಗಮನಿಸುತ್ತಿದ್ದ. ಆದರೆ ಎದುರಾಡುವಂತಿರಲಿಲ್ಲ. ಅಮಾತ್ಯ ಮಹಾಜ್ಞಾನಿ ಮಾತ್ರವಲ್ಲ, ರಾಜ್ಯದ ಬಗ್ಗೆ ಬಹಳ ಕಳಕಳಿ, ನಿಷ್ಠೆ ಇರುವ ವ್ಯಕ್ತಿಯಾಗಿದ್ದ. ರಾಜನ ಈ ಅನಾವಶ್ಯಕ ಹೊರೆಯ ಮುಕ್ತಿಗೆ ಚಿಂತಿಸುತ್ತಿದ್ದ.
ಒಂದು ದಿನ ಆತ ಆಸ್ಥಾನ ಪಂಡಿತರ ಗುಪ್ತಸಭೆ ಕರೆದ. ಸಭೆಯಲ್ಲಿ ಮಾತನಾಡುತ್ತ, ‘ನಿಮ್ಮಲ್ಲಿ ಒಮ್ಮೆ ಒಂದು ಶ್ಲೋಕವನ್ನು ಆಲಿಸಿದೊಡನೆ ಅದನ್ನು ಯಥಾವತ್ತಾಗಿ ಹೇಳುವವರು ಯಾರಿದ್ದೀರಿ’ ಎಂದು ಕೇಳಿದಾಗ ಪಂಡಿತನೋರ್ವ ತಾನು ಒಮ್ಮೆ ಆಲಿಸಿದರೆ, ಪುನರುಚ್ಚರಿಸಬಲ್ಲೆ ಎಂದ. ಮತ್ತೊಬ್ಬ ಪಂಡಿತ ತಾನು ಎರಡು ಬಾರಿ ಆಲಿಸಿದರೆ, ಮೂರನೇ ಪಂಡಿತ ತಾನು ಮೂರು ಬಾರಿ ಆಲಿಸಿದರೆ ಪುನರುಚ್ಚರಿಸಬಲ್ಲೆ ಎಂದ. ಹೀಗೆ ಪಂಡಿತರೆಲ್ಲ ತಮ್ಮ ಪ್ರತಿಭೆಯಾನುಸಾರ ತಮ್ಮ ಕ್ರಮಾಂಕವನ್ನು ಹೇಳಿದರು.
ಅದೊಂದು ದಿನ ರಾಜಸಭೆ ನಡೆಯುತ್ತಿದ್ದಾಗ ಅನಾಮಿಕನೊಬ್ಬ ಪ್ರವೇಶಿಸಿ ರಾಜನ ಅನುಮತಿಯೊಂದಿಗೆ ಹೊಸ ಶ್ಲೋಕವೊಂದನ್ನು ಪಠಿಸಿದ. ಮುದಗೊಂಡ ರಾಜ ಅನಾಮಿಕನಿಗೆ ಬಹುಮಾನಿಸಲು ಮುಂದಾದಾಗ ಪ್ರಧಾನ ಅಮಾತ್ಯ ತಡೆದು, ‘ಮಹಾರಾಜ ಈ ಶ್ಲೋಕ ಹಳೆಯದು. ಇದು ನಮ್ಮ ಆಸ್ಥಾನ ಪಂಡಿತರಿಗೆಲ್ಲ ಈಗಾಗಲೇ ತಿಳಿದಿದೆ, ಹೇಳಲು ಅನುಮತಿಸಬೇಕು’ ಎಂದು ಕೋರಿದ. ರಾಜ ಅನುಮತಿಸಿದ ಕೂಡಲೇ ಅಮಾತ್ಯನು ಒಂದು ಬಾರಿ ಆಲಿಸಿ, ಹೇಳುವ ಕ್ಷಮತೆ ಹೊಂದಿರುವ ಪಂಡಿತನಿಗೆ ಸೂಚಿಸಿದಾಗ ಪಂಡಿತ ಶ್ಲೋಕವನ್ನು ನಿರರ್ಗಳವಾಗಿ ಹೇಳಿದ. ಆದರೆ ಅನಾಮಿಕ ಒಪ್ಪಲಿಲ್ಲ. ‘ಇದು ಸ್ವತಃ ನಿನ್ನೆಯಷ್ಟೇ ನಾನು ರಚಿಸಿದ ಶ್ಲೋಕ’ ಎಂದ.
ಆಗ ಅಮಾತ್ಯ ಕೂಡಲೇ, ‘ಇದು ನಮ್ಮ ಆಸ್ಥಾನದ ಮತ್ತೊಬ್ಬ ಪಂಡಿತರಿಗೂ ಗೊತ್ತು’ ಎನ್ನುತ್ತಲೇ ಎರಡನೇ ಬಾರಿ ಕೇಳಿಸಿಕೊಂಡ ಅದೇ ಶ್ಲೋಕವನ್ನು ಮತ್ತೊಬ್ಬ ಪಂಡಿತನಿಂದ ಹೇಳಿಸಿದ. ಮಾತ್ರವಲ್ಲ, ಅದೇ ಶ್ಲೋಕವನ್ನು ಮೂರು, ನಾಲ್ಕು ಹೀಗೆ ಕ್ರಮವಾಗಿ ಆಸ್ಥಾನ ಪಂಡಿತರಲ್ಲಿ ಆ ಶ್ಲೋಕವನ್ನು ತಮಗೆಲ್ಲ ಈಗಾಗಲೇ ತಿಳಿದಿರುವ ಹಳೆಯ ಶ್ಲೋಕ ಎಂಬಂತೆ ಹೇಳಿಸಿ ಬಿಟ್ಟ ಆ ಪ್ರಧಾನ ಅಮಾತ್ಯ. ರಾಜ ಮೌನವಾದ. ಆತನಿಗೆ ಈ ರೀತಿ ಶ್ಲೋಕಕ್ಕಾಗಿ ಬೊಕ್ಕಸದ ಹಣ ಬಹುಮಾನವಾಗಿ ಬಳಸಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಲುಪಬಹುದೆನ್ನುವುದನ್ನು ಅಮಾತ್ಯ ತನ್ನ ಚಾಣಾಕ್ಷ ನಡೆಯಿಂದ ತೋರಿದ್ದ. ಇತ್ತ ಬಹುಮಾನಕ್ಕಾಗಿ ಹೊಸ ಶ್ಲೋಕ ಹೇಳುವವರಿಗೆ ಆಸ್ಥಾನದ ಬಾಗಿಲು ಮುಚ್ಚುವಂತೆ ಮಾಡಿದ್ದ ಆ ಅಮಾತ್ಯ.
ಹೌದು, ಈ ಪ್ರಧಾನ ಅಮಾತ್ಯನಂತೆ ನಾಡಿನ ಹಿತ-ವಿಹಿತಗಳ ಅರಿವಿದ್ದರೆ, ತನ್ನ ಇಚ್ಛಾಶಕ್ತಿಯಿಂದ ರಾಜನೊಂದಿಗೆ ಪ್ರಜೆಗಳನ್ನೂ ಸರಿದಾರಿಗೆ ತರಬಹುದು ಎನ್ನುವುದಕ್ಕೆ ಈ ಕಥೆ ನಿದರ್ಶನವಾಗಿದೆ. ರಾಷ್ಟ್ರದ ಏಳಿಗೆ ಬಯಸುವವರಲ್ಲಿ ಕರ್ತೃತ್ವ ಶಕ್ತಿ ಮತ್ತು ರಾಷ್ಟ್ರನಿಷ್ಠೆ ಆಭಾದಿತವಾಗಿರಬೇಕು. ಉನ್ನತ ಸ್ಥಾನದಲ್ಲಿ ಇರುವವರು ಯಾವ ಆಚರಣೆಗಳನ್ನು ಮಾಡುತ್ತಾರೋ ಸಾಮಾನ್ಯರೂ ಅದೇ ಅನುಸರಿಸುತ್ತಾರೆ. ಅವರು ಸಜ್ಜನರೂ ನೀತಿವಂತರೂ ಆಗಿದ್ದರೆ ಅ ವ್ಯವಸ್ಥೆ ತನ್ನ ಔನತ್ಯ ಕಾಣಲು ಶಕ್ತವಾಗುತ್ತದೆ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)