ಮನೋಲ್ಲಾಸ; ಶುದ್ಧ ಹೃದಯದಿಂದ ಪ್ರಾರ್ಥಿಸಿ

MANOLLASA
Published on
ಯುವಕನೊಬ್ಬ ಸರಸರನೆ ದೇವಸ್ಥಾನದ ಒಳಗೆ ಬಂದ. ಸ್ವಲ್ಪ ಹೊತ್ತು ಪ್ರದಕ್ಷಿಣೆ ಹಾಕಿದ, ಮೊಬೈಲಲ್ಲಿ ಕೆಲಹೊತ್ತು ಅದಾರೊಂದಿಗೋ ಜೋರು ಜೋರಾಗಿ ಮಾತನಾಡಿದ, ಅರ್ಚಕರಲ್ಲಿ ಬಂದು, ‘ನನಗೆ ಬೇಗ ಪ್ರಸಾದ ಕೊಡಿ, ತುಂಬ ಕೆಲಸವಿದೆ, ಬೇಗ ಹೋಗಬೇಕು’ ಎಂದು ಅಸಹನೆಯಿಂದಲೇ ಕೇಳಿದ. ಅರ್ಚಕರು ಸಮಾಧಾನದಿಂದಲೇ ಅವನ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪ್ರಸಾದ ಕೊಡುವ ವೇಳೆ ಅವನನ್ನು ಮಾತಿಗೆಳೆದರು.

‘ನೀವು ಬಹಳ ತ್ವರೆಯಲ್ಲಿದ್ದಂತೆ ತೋರುತ್ತಿದೆ?’ ‘ಹೌದು ಮತ್ತೆ, ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ. ನಾನು ಎಲ್ಲರಂತೆ ದೇವಸ್ಥಾನಗಳಿಗೆ ಹೊತ್ತು ಕಳೆಯಲು ಬರುವುದಿಲ್ಲ, ಭಗವಂತನ ಅನುಗ್ರಹ ಪಡೆದು ಹೋಗಲು ಬರುತ್ತೇನೆ, ಅಷ್ಟು ಹೊತ್ತಿಗಾಗಲೇ ನೂರಾರು ಜನರಿಗೆ ನಾನು ವ್ಯವಹಾರದ ನಿಮಿತ್ತ ಮಾತಾಡಬೇಕಾಗುತ್ತದೆ. ಏನು ಮಾಡುವುದು? ದೇವರಿಗೂ ಸ್ವಲ್ಪ ಸಮಯ ಮೀಸಲಿಡಬೇಕಲ್ಲ, ಅದಕ್ಕೆ ದೇವಸ್ಥಾನಕ್ಕೆ ಬರುತ್ತಿದ್ದೇನೆ’ ಎಂದೆಲ್ಲ ಒಂದೇ ಉಸುರಿನಲ್ಲಿ ಹೇಳಿದ.

ಅರ್ಚಕರು ಮನಸ್ಸಿನಲ್ಲೇ ನಕ್ಕರು. ‘ನೀವು ದೇವಸ್ಥಾನಕ್ಕೆ ಬಂದು ಅನ್ಯವಿಚಾರಗಳನ್ನು ಚಿಂತಿಸುವ ಬದಲು ಮನೆಯಲ್ಲೇ ಕುಳಿತು ಭಗವಂತನನ್ನು ಹೃದಯದಲ್ಲಿಯೇ ಧ್ಯಾನಿಸಬಹುದಲ್ಲ!’

‘ಮನೆಯಲ್ಲಿ ಕುಳಿತರೆ ಮನಸ್ಸಿಗೆ ಇನ್ನೂ ಹತ್ತಾರು ವಿಚಾರಗಳು ಬಂದು ಪ್ರಾರ್ಥನೆ ಮಾಡಲು ಸಾಧ್ಯವೇ ಆಗದು. ಆದ್ದರಿಂದಲೇ ದೇವಸ್ಥಾನಕ್ಕೆ ಬಂದೆ’.

‘ನೀವು ಒಂದು ನಿಮಿಷ ಈ ಕುರ್ಚಿ ಮೇಲೆ ಕುಳಿತುಕೊಳ್ಳಿ, ತಮಗಾಗಿ ಒಂದು ವಿಶೇಷ ಪ್ರಸಾದ ತರುತ್ತೇನೆ’ ಎಂದು ಅರ್ಚಕರು ಒಳಗೆ ಹೋದರು.

ಅರ್ಚಕರು ವಾಪಸ್ ಬರುವವರೆಗೂ ಅವನು ನಿಂತೇ ಇದ್ದ, ಅರ್ಚಕರು ಕೇಳಿದರು, ‘ಯಾಕೆ ನಿಂತೇ ಇದ್ದೀರಾ? ಕುಳಿತುಕೊಳ್ಳಿ’. ‘ಈ ಕುರ್ಚಿಯನ್ನು ತೊಳೆದು ಅದ್ಯಾವ ಕಾಲವಾಯಿತೋ, ಗಲೀಜಾಗಿದೆ. ಅದು ಹೇಗೆ ಕುಳಿತುಕೊಳ್ಳಲಿ?’ ‘ಸರಿ ಈ ಚಾಪೆಯ ಮೇಲೆ ಕುಳಿತುಕೊಳ್ಳಿ’. ‘ಅದೂ ಸರಿಯಿಲ್ಲ, ತುಂಬಾನೇ ಮಲಿನವಾಗಿದೆ, ನಾನು ನಿಂತೇ ಇರ್ತೇನೆ, ತಾವು ಪ್ರಸಾದ ಕೊಡಿ’ ಎಂದ ಅಸಹನೆಯಿಂದ.

‘ಒಂದು ನಿಮಿಷದ ಮಟ್ಟಿಗೆ ನೀವು ಈ ಕೊಳಕಾದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಇಷ್ಟಪಡಲಿಲ್ಲ, ಅಂತಹದ್ದರಲ್ಲಿ ನಿಮ್ಮ ಈ ಕೊಳಕಾದ ಮನಸ್ಸಿನಲ್ಲಿ, ಮಲಿನವಾದ ಹೃದಯದಲ್ಲಿ ಆ ಭಗವಂತ ಅದು ಹೇಗೆ ತಾನೇ ಕುಳಿತಾನು?’ ಎಂದು ಕೇಳಿದರು ಅರ್ಚಕರು. ಯುವಕ ನಿಂತಲ್ಲಿಯೇ ಕುಸಿದು ಹೋದ!

ಇದು ಸತ್ಯಸಂಗತಿ ಹೌದಲ್ಲವೇ? ನಾವೂ ಅಷ್ಟೇ ಅಲ್ಲವೇ? ಭಗವಂತ ಬಂದು ನಮ್ಮ ಹೃದಯದಲ್ಲಿಯೇ ನೆಲೆಸಲಿ ಎಂದು ಆಶಿಸುತ್ತೇವೆ, ಆದರೆ ಭಗವಂತ ಬಂದು ನಮ್ಮ ಹೃದಯದಲ್ಲಿ ಕೂರಲು ನಿರ್ಮಲವಾದ ಭಾವನೆಗಳಿಂದ, ಸ್ವಚ್ಛಮನಸ್ಸಿನಿಂದ, ಪ್ರಾರ್ಥನೆಯ ಬೆಳಕಿನಿಂದ, ಪರೋಪಕಾರವೆಂಬ ಸಾಧನದಿಂದ ನಮ್ಮ ಹೃದಯವನ್ನು ಸ್ವಚ್ಛಗೊಳಿಸಿದ್ದೇವೆಯೇ? ಖಂಡಿತವಾಗಿಯೂ ಇಲ್ಲ.

ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಕೊಳೆಯಿಂದ ನಮ್ಮ ಹೃದಯ ತುಂಬಿಹೋಗಿದೆ. ಅಲ್ಲಿ ಭಗವಂತನಿಗೆ ಕಾಲಿಡಲೂ ಜಾಗವಿಲ್ಲ, ಆದರೆ ನಮ್ಮ ಆಸೆ ಮಾತ್ರ ಭಗವಂತನನ್ನು ಹೃದಯದಲ್ಲಿ ಕಾಣುವುದಾಗಿದೆ. ಅದು ಸಾಧ್ಯವೇ?

| ಡಾ. ಗಣಪತಿ ಹೆಗಡೆ  (ಲೇಖಕರು ಸಂಸ್ಕೃತ ಉಪನ್ಯಾಸಕರು) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net