

ಸತ್ಯವ್ರತನೆಂಬ ರಾಜರ್ಷಿ ವಿಷ್ಣುವಿನ ಪರಮಭಕ್ತನಾಗಿದ್ದ. ಆತ ತರ್ಪಣ ಕೊಡುವ ವೇಳೆ ಬೊಗಸೆಯ ನೀರಲ್ಲಿ ಮೀನೊಂದು ಕಾಣಿಸಿತು. ಪುನಃ ನೀರಿಗೆ ಬಿಟ್ಟರೆ ಜಲಾಶಯದಲ್ಲಿರುವ ದೊಡ್ಡಮೀನುಗಳು ತನ್ನನ್ನು ನುಂಗಿಬಿಡುತ್ತವೆ ಎಂದು ಅದು ಅವನನ್ನು ಅಂಗಲಾಚಿತು. ಕರುಣಾಮಯಿಯಾದ ಸತ್ಯವ್ರತನು ಆ ಮೀನನ್ನು ತನ್ನ ಕಲಶದಲ್ಲಿ ಇರಿಸಿ ಆಶ್ರಮಕ್ಕೆ ಒಯ್ದ. ಮರುದಿನ ಬೆಳಗಾಗುವ ಹೊತ್ತಿಗೆ ಆ ಮೀನು ಕಲಶದಲ್ಲಿ ಹಿಡಿಸಲಾರದಷ್ಟು ಬೆಳೆದು ಬಿಟ್ಟಿತು. ಆಗ ಮೀನನ್ನು ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ಇರಿಸಿದ. ಆಶ್ಚರ್ಯವೆಂಬಂತೆ ಕ್ಷಣಾರ್ಧದಲ್ಲಿ ಅದು ಆ ಪಾತ್ರೆಯ ಗಾತ್ರವನ್ನೂ ಮೀರಿಸುವ ಹಾಗೆ ಬೆಳೆದು ತನ್ನನ್ನು ಇನ್ನೂ ವಿಸ್ತಾರವಾದ ಜಾಗದಲ್ಲಿ ಇರಿಸೆಂದು ಬೇಡಿಕೊಂಡಿತು.
ಹೀಗೆ ಪಾತ್ರೆಯಿಂದ ಬಾವಿ, ಬಾವಿಯಿಂದ ನದಿ, ನದಿಯಿಂದ ಸರೋವರಗಳಿಗೆ ಸ್ಥಳಾಂತರವಾಗುವಂತೆ ಬೆಳೆಯುತ್ತ ಹೋಯಿತು ಆ ಮೀನು. ಕೊನೆಗೆ ಅದು ಎಷ್ಟು ದೊಡ್ಡದಾಗಿ ಬೆಳೆಯಿತೆಂದರೆ ಸತ್ಯವ್ರತ ಅದನ್ನು ಸಮುದ್ರಕ್ಕೆ ಕೊಂಡೊಯ್ದು ಬಿಡಬೇಕಾಯಿತು. ಅಲ್ಲಿಯೂ ಅದು ಕೊನೆಯೇ ಇಲ್ಲದಂತೆ ಬೆಳೆಯಲಾಗಿ, ನೀನು ಯಾರೆಂದು ಮೀನನ್ನು ಕೇಳಿದ. ‘ಮೂರೂ ಲೋಕಗಳು ಪ್ರಳಯದಿಂದ ಮುಳುಗಿ ಹೋಗುವುದಿದೆ. ಸಕಲ ಚರಾಚರ ಜೀವಿಗಳನ್ನು ಆ ವೇಳೆ ರಕ್ಷಿಸುವ ಜವಾಬ್ದಾರಿ ನಿನಗೆ ವಹಿಸುತ್ತೇನೆ’ ಎಂದು ಹೇಳಿ ಮಾಯವಾಯಿತು.
ಅದಾಗಿ ಏಳು ದಿನಕ್ಕೆ ಸತತ ಮಳೆಯಾಗಿ ಜಗತ್ತೇ ಸಮುದ್ರವಾದಂತಾಯಿತು. ಅಸಹಾಯಕರಾಗಿರುವ ಉಳಿದ ಜೀವಜಗತ್ತನ್ನು ರಕ್ಷಿಸುವುದು ತನ್ನ ಜವಾಬ್ದಾರಿಯೆಂದು ಅರಿತ ಸತ್ಯವ್ರತ ಆ ಪ್ರಳಯಕಾಲದಲ್ಲಿ ಸಕಲ ಪ್ರಾಣಿವರ್ಗ, ಸಸ್ಯಬೀಜಗಳನ್ನು ಮತ್ತು ಸಪ್ತಋಷಿಗಳನ್ನೂ ದೋಣಿಯೊಂದರಲ್ಲಿ ಇರಿಸಿ ನೀರಿನಿಂದ ರಕ್ಷಿಸಲು ಮುಂದಾದ. ಬೃಹದಾಕಾರದ ಆ ಮೀನು ಗಾಳಿಗೆ ನಾವೆ ಮಗುಚದಂತೆ ಕಾಪಾಡಿತು. ಪ್ರಳಯಕಾಲ ಮುಗಿದೊಡನೆ ವಿಷ್ಣು ಕಾಣಿಸಿಕೊಂಡು, ತಾನೇ ಈ ಜಗತ್ತನ್ನು ಕಾಪಾಡಲು ಮತ್ಸ್ಯಾವತಾರ ತಾಳಿದ್ದು ಎಂದು ತಿಳಿಸಿ, ಸತ್ಯವ್ರತನಿಗೆ ಆತ್ಮತತ್ತ್ವವನ್ನು ಉಪದೇಶಿಸಿದ. ಮೀನೆಂಬ ಉಪೇಕ್ಷೆ ತೋರದೆ ಚಿಕ್ಕಜಂತುವಿನ ಮೇಲೂ ಕನಿಕರ ತೋರಿ, ಅದರ ಅಭಿಲಾಷೆಗೆ ಸ್ಪಂದಿಸಿದ ಮತ್ತು ತನ್ನ ಸಾಮರ್ಥ್ಯವನ್ನರಿತು ಸಕಲ ಜೀವಲೋಕವನ್ನುಳಿಸಿದ ಸತ್ಯವ್ರತ ಮುಂದಿನ ಒಂದಿಡೀ ಕಲ್ಪಕ್ಕೆ ಮನುವೆಂಬ ಪದವಿಯನ್ನು ಅಲಂಕರಿಸಿದ. ವಿಷ್ಣುವಿನ ಮತ್ಸ್ಯಾವತಾರದ ಈ ಕಥೆ ನಮಗೆ ಅಸಹಾಯಕರ ಕುರಿತು ತೋರಬೇಕಾದ ಕಾಳಜಿ, ಅನುಕಂಪ, ಸಾಮರ್ಥ್ಯಕ್ಕನುಗುಣವಾಗಿ ನಿರ್ವಹಿಸಬೇಕಾದ ಕರ್ತವ್ಯ ಇವುಗಳ ಮಹತ್ವವನ್ನು ತಿಳಿಸುತ್ತದೆ. ಸ್ವಾರ್ಥಚಿಂತನೆಯನ್ನು ಬುಡಸಮೇತ ಕಿತ್ತೆಸೆದು ಪರಚಿಂತನೆಯನ್ನು ರೂಢಿಸಿಕೊಡರೆ ಮಾತ್ರವೇ ಮನುಷ್ಯ ಶ್ರೇಷ್ಠನಾಗಲು ಸಾಧ್ಯ.
ಡಿವಿಜಿಯವರು ಹೇಳುತ್ತಾರೆ:
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ
ಸ್ವೀಯಲಾಭಾಸ್ಮರಣೆಯುಳಿದು ವಿವದಿಗಳಾ|
ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ
ಶ್ರೇಯಸ್ಸಿಗುಜ್ಜುಗಿಸು-ಮಂಕುತಿಮ್ಮ||
ತನಗೆ ಸರ್ವಾಧಿಕಾರವಿದ್ದಾಗಿಯೂ, ಹೆಚ್ಚಿನ ಲಾಭ ಮಾಡಿಕೊಳ್ಳಬೇಕೆಂಬ ಮನಸ್ಸನ್ನು ಬದಿಗಿರಿಸಿ ನ್ಯಾಯಾಧೀಶನು ನ್ಯಾಯಯುತವಾದ ತೀರ್ಪನೀಡಿ ಕಕ್ಷಿದಾರನ ಹಿತ ಕಾಪಾಡುತ್ತಾನೆ. ಅಂತೆಯೇ ನಮಗಿರುವ ಅರ್ಹತೆ ಮೇಲೆ ಕಾರ್ಯ ನಿರ್ವಹಿಸುವಾಗ ಪರಹಿತ ಚಿಂತನೆಯಿರಿಸಿ ನಡೆದರೆ ಅಸಹಾಯಕರಿಗೆ ಮಹದುಪಕಾರವಾಗುವುದಷ್ಟೇ ಅಲ್ಲ, ನಮಗೂ ಒಳಿತಾಗುತ್ತದೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)