

ಮಕ್ಕಳಿಬ್ಬರು ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ತಾನೇ ಮೇಲು ಎಂದು ಶುರವಾಗುತ್ತಿದ್ದ ಜಗಳ ಒಮ್ಮೊಮ್ಮೆ ಹೊಡೆದಾಟದವರೆಗೂ ತಲುಪುತ್ತಿತ್ತು. ಏನನ್ನಾದರೂ ತಿನ್ನಲು ಕೊಟ್ಟರೆ ಹಂಚಿ ತಿನ್ನುವ ಬದಲು ತನಗೊಬ್ಬನಿಗೇ ಬೇಕೆಂದು ಇಬ್ಬರೂ ಹಠ ಹಿಡಯುತ್ತಿದ್ದರು. ಯಾರು ಎಷ್ಟೇ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಲಿಲ್ಲ.
ಹೇಗಾದರೂ ಮಾಡಿ ಮಕ್ಕಳ ಈ ಗುಣವನ್ನು ದೂರ ಮಾಡಬೇಕೆಂದು ನಿರ್ಧರಿಸಿದ ತಾಯಿ ಉಪಾಯ ಹುಡುಕಿದಳು. ಒಂದು ದಿನ ಹಣ್ಣೊಂದನ್ನು ತಂದು ಒಂದು ಮಗುವಿನ ಕೈಗಿತ್ತಳು. ಆ ಹಣ್ಣು ಸಿಕ್ಕಿದೊಡನೆಯೇ ತಾನೊಬ್ಬನೇ ಅದನ್ನು ತಿಂದುಬಿಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಮಗು ತನಗೂ ಬೇಕೆಂದು ಅಳತೊಡಗಿತು. ಸ್ವಲ್ಪ ಹೊತ್ತಿನಲ್ಲೇ ಇಬ್ಬರಲ್ಲೂ ಜಗಳ ಶುರುವಾಯಿತು. ಇಬ್ಬರೂ ತನಗೊಬ್ಬನಿಗೇ ಇಡೀ ಹಣ್ಣು ಬೇಕೆಂದು ಹಠ ಹಿಡಿದು ಹೊಡೆದಾಡಲು ಪ್ರಾರಂಭಿಸಿದವು. ಆ ಇಬ್ಬರೂ ಮಕ್ಕಳನ್ನು ಕೈ ಹಿಡಿದು ಹೊರಗೆ ಕರೆದುಕೊಂಡು ಹೋದ ತಾಯಿ ಅಲ್ಲೇ ಇದ್ದ ಕಾಗೆಯೊಂದಕ್ಕೆ ಹಣ್ಣಿನ ಚೂರೊಂದನ್ನು ಎಸೆದಳು. ಕಾಗೆ ಆ ಸಣ್ಣ ಹಣ್ಣಿನ ಚೂರನ್ನಾದರೂ ತನ್ನವರೊಂದಿಗೆ ಹಂಚಿಕೊಂಡು ತಿನ್ನಬೇಕೆಂದು ತನ್ನ ಬಳಗವನ್ನೆಲ್ಲ ಕರೆಯತೊಡಗಿತು. ಕೆಲವೇ ಕ್ಷಣಗಳಲ್ಲಿ ಹಲವಾರು ಕಾಗೆಗಳು ಸೇರಿ ಹಣ್ಣನ್ನು ಹಂಚಿಕೊಂಡು ತಿನ್ನತೊಡಗಿದವು. ಆ ಕಾಗೆಗಳ ಗುಂಪನ್ನು ಮಕ್ಕಳಿಗೆ ತೊರಿಸಿದ ತಾಯಿ, ‘ಮಕ್ಕಳೇ ಅಲ್ಲಿ ಆ ಕಾಗೆಗಳನ್ನು ನೋಡಿದಿರಲ್ಲ. ಅವು ನಾವು ಕೊಟ್ಟ ಒಂದೇ ಒಂದು ಚೂರು ಹಣ್ಣನ್ನೂ ಇತರರಿಗೂ ಕೊಟ್ಟು ತಿನ್ನುತ್ತವೆ. ಒಬ್ಬರಿಗೊಬ್ಬರು ನೆರವಾಗಿ ಕೂಡಿ ಬಾಳುತ್ತವೆ. ನಾವೂ ಅವುಗಳಂತೆಯೇ ಪರಸ್ಪರ ಪ್ರೀತಿಯಿಂದ ಬದುಕಬೇಕು’ ಎಂದಾಗ ಮಕ್ಕಳಿಬ್ಬರಿಗೂ ತಪ್ಪಿನ ಅರಿವಾಗಿ ಪರಸ್ಪರ ಸ್ನೇಹದಲ್ಲಿ ಒಂದಾದರು.
ಎಷ್ಟೋ ಸಂದರ್ಭಗಳಲ್ಲಿ ಮನುಷ್ಯ ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುತ್ತಾನೆ. ಎಲ್ಲವೂ ತನಗೊಬ್ಬನಿಗೇ ಸೇರಬೇಕು. ಎಲ್ಲವೂ ತನ್ನವೂ ಎಂಬ ಸ್ವಾರ್ಥಬುದ್ಧಿಯಿಂದ ಅತಿಯಾದ ಗಳಿಕೆಯಲ್ಲಿ ತೊಡಗುತ್ತಾನೆ. ತನ್ನಂತೆಯೇ ಪರರು ಎಂಬುದನ್ನು ಮರೆತು ಸ್ವಾರ್ಥಕ್ಕಾಗಿ ಎಲ್ಲ ಮೌಲ್ಯಗಳನ್ನೂ ಬಲಿ ಕೊಡುತ್ತಾನೆ. ಇಂಥ ಸಂದರ್ಭದಲ್ಲಿ ಮನುಷ್ಯ ಪ್ರಕೃತಿಯಿಂದ, ಪ್ರಾಣಿಗಳಿಂದ ಕಲಿಯುವ ಪಾಠಗಳು ಬಹಳಷ್ಟಿವೆ. ಮಣ್ಣನ್ನು ತಿಂದೂ ಸಿಹಿಯಾದ ಹಣ್ಣನ್ನೇ ಕೊಡುವ ಮರ, ಹುಲ್ಲು ತಿಂದೂ ನಮಗೆ ಹಾಲನ್ನೇ ಕೊಡುವ ಹಸು, ಪರರಿಗಾಗಿಯೇ ಹರಿವ ನದಿಗಳೆಲ್ಲ ನಮಗೆ ಎಷ್ಟು ಸೊಗಸಾದ ಪರೋಪಕಾರದ ಪಾಠವನ್ನು ಮಾಡುತ್ತವಲ್ಲವೇ? ಇತರ ಎಲ್ಲ ಜೀವಿಗಳಿಗಿಂತ ಅಗಾಧವಾದ ಚಿಂತನಶಕ್ತಿಯೂ ಬುದ್ಧಿಶಕ್ತಿಯೂ ಇರುವ ಮಾನವ ಪ್ರಕೃತಿ ಕಲಿಸುವ ಇಂಥ ಮೌಲ್ಯಗಳನ್ನು ಅರಿತು ಮುನ್ನಡೆದರೆ ಪ್ರಪಂಚ ಇನ್ನಷ್ಟು ಸುಂದರವಾದೀತು. ಇಡಿಯ ಜಗತ್ತು ತನ್ನೊಬ್ಬನ ಸ್ವತ್ತು ಎಂಬ ಅಹಂಭಾವವನ್ನು ಬಿಟ್ಟು ಎಲ್ಲರೂ ತನ್ನಂತೆಯೇ ಎಂಬುದನ್ನು ಅರಿತು ಸಾಗಿದರೆ ಜಗತ್ತು ಮತ್ತಷ್ಟು ಚಂದವಾದೀತು. ಹಾಗಾಗಿ ಪರಸ್ಪರ ಸ್ನೇಹ, ಸಹಕಾರಗಳನ್ನು ರೂಢಿಸಿಕೊಂಡು ಸಾಮರಸ್ಯದ ಬದುಕಿಗೆ ಬುನಾದಿ ಹಾಕೋಣ.
(ಲೇಖಕರು ಹವ್ಯಾಸಿ ಬರಹಗಾರರು)