ಜೀವನಪಾಠ ದುಡಿಮೆಯ ಆಟ: ಮನೋಲ್ಲಾಸ

Manollasa
Published on
| ಚಿತ್ರಾ ಹೆಗಡೆ

ಜೀವನದಲ್ಲಿ ಬರುವ ಪ್ರತಿಯೊಂದು ಕ್ಷಣವೂ ಕಲಿಕೆಯ ಶಾಲೆಯಿದ್ದಂತೆ. ಕಲಿಕೆಗೆ ವಯಸ್ಸಿನ ಭೇದವಿಲ್ಲ. ಕಲಿಯುವ ಮನಸ್ಸು, ಅದಕ್ಕೆ ತಕ್ಕ ಪರಿಶ್ರಮ ಇದ್ದರೆ ಅಸಾಧ್ಯವಾದುದು ಎಂಬುದೇ ಇಲ್ಲ. ಒಂದು ಶುಭಕಾರ್ಯ ನಡೆಯುತ್ತಿತ್ತು. ಕಾರ್ಯದ ಮನೆ ಹೂವುಹಣ್ಣು, ತಳಿರು-ತೋರಣದಿಂದ ಸಿಂಗಾರಗೊಂಡು, ಬಂಧು-ಬಾಂಧವರು, ಯುವಕ-ಯುವತಿಯರು ಹಾಗೂ ಮಕ್ಕಳ ಕಲರವರಿಂದ ಕೂಡಿತ್ತು. ವಿದ್ವಜ್ಜನರ ಅನುಮತಿಯ ಮೇರೆಗೆ ನಿಶ್ಚಿತಾರ್ಥದ ಕಾರ್ಯಕ್ರಮ ಸಂಪನ್ನವಾಯಿತು. ಬಂದವರೆಲ್ಲ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಅವರವರಲ್ಲೇ ಸಂಭಾಷಣೆ ನಡೆಸುತ್ತಿದ್ದರು. ಒಬ್ಬ ಹುಡುಗ ‘ನನಗೆ ಗಣಿತವೆಂದರೆ ತುಂಬಾ ಇಷ್ಟ. ನಮ್ಮ ಶಾಲೆಯಲ್ಲಿ ತುಂಬಾ ಸೌಲಭ್ಯಗಳಿವೆ. ಆದುದರಿಂದ ನಮ್ಮ ಶಾಲೆಯೆಂದರೆ ನನಗೆ ತುಂಬಾ ಪ್ರೀತಿ’ ಎಂದೆಲ್ಲ ಹೇಳುತ್ತಿದ್ದ. ಉಳಿದ ಮಕ್ಕಳು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬ ಹುಡುಗಿ ‘ಸಾಕು, ನನಗೂ ಗೊತ್ತಿದೆ. ನಿಂದು ಗೌರ್ವೆಂಟ್ ಶಾಲೆ ಅಲ್ವಾ? ನಂದೂ ಗೌರ್ವೆಂಟ್ ಶಾಲೆ. ನನ್ನ ಶಾಲೆಯೂ ಚೆನ್ನಾಗಿದೆ. ಸುಮ್ನಿರು ಮಾರಾಯ’ ಅಂತ ಹೇಳಿದಳು.

ಹೀಗೆ ಮಕ್ಕಳ ಸಂಭಾಷಣೆ ಮುಂದುವರಿದಿತ್ತು. ಅಂತ್ಯಾಕ್ಷರಿ ಆಡುವ ಅಂತ ಮಕ್ಕಳೆಲ್ಲ ನಿರ್ಧರಿಸಿದರು. ಒಬ್ಬಳು ‘ಕಗ್ಗ ಅಂತಾಕ್ಷರಿಯನ್ನೋ ಅಥವಾ ಸಿನಿಮಾ ಹಾಡು ಅಂತಾಕ್ಷರಿಯನ್ನೋ?’ ಎಂದು ಕೇಳಿದಳು. ನಗರ ಪ್ರದೇಶಗಳಿಂದ ಬಂದ ಮಕ್ಕಳು ‘ನಮಗೆ ಕಗ್ಗ ಅಂತ್ಯಾಕ್ಷರಿ ಗೊತ್ತಿಲ್ಲ’ ಎಂದು ಹೇಳಿದರು. ಆಗ ಅವಳು ‘ನಿಮಗೆ ಇದು ಗೊತ್ತಿಲ್ಲವಾ? ಸರಿ ಸಿನೆಮಾ ಹಾಡಿನ ಅಂತ್ಯಾಕ್ಷರಿ ಆಡೋಣ’ ಎಂದು ಪ್ರಾರಂಭ ಮಾಡಿದರು.

ಮಾನವ ಜೀವನವನ್ನು ಹೇಗೆ ಸಾಗಿಸಬೇಕು ಎಂಬುದರ ಪರಿಯನ್ನು ಡಿವಿಜಿಯವರು ಕಗ್ಗದಲ್ಲಿ ಬಹು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ. ಆ ಸರ್ಕಾರಿ ಶಾಲೆಯ ಶಿಕ್ಷಕರು ಇಂಥ ಕಗ್ಗದ ಬಗ್ಗೆ ಅಂತ್ಯಾಕ್ಷರಿ ರೂಪದಲ್ಲಿ ಮಕ್ಕಳಿಗೆ ತಿಳಿಸಿ ಕೊಡುತ್ತಿರುವುದು ವಿಶೇಷವೇ ಸರಿ. ಇಂಥ ಕಲಿಕಾಪದ್ಧತಿಯ ಪರಿಣಾಮವೋ ಏನೋ ಆ ಮಗು ಆತ್ಮವಿಶ್ವಾಸದಿಂದ ಮಾತನಾಡುತ್ತಿತ್ತು. ಕಗ್ಗದಂತಹದನ್ನು ಅಂತ್ಯಾಕ್ಷರಿಯ ರೂಪದಲ್ಲಿ ಕಲಿಸುವ ನಿದರ್ಶನದಂತೆ ಇನ್ನೂ ಅನೇಕ ಬಗೆಗಳಲ್ಲಿ ಭಾರತೀಯ ಸಂಸ್ಕೃತಿಯ ಭದ್ರಅಡಿಪಾಯದಲ್ಲಿ ಮಕ್ಕಳನ್ನು ಬೆಳೆಸಲು ಅವಕಾಶಗಳಿವೆ ಎಂಬುದು ಅತಿಶಯೋಕ್ತಿಯಾಗಲಾರದಲ್ಲವೆ?

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ತಮ್ಮ ಭಾಷಣಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಮನಸ್ಥಿತಿಯನ್ನು ನಗರಗಳಲ್ಲಿ ವಾಸಿಸುವ ಮಕ್ಕಳೊಡನೆ ಹೋಲಿಸಿ ನಗೆಚಟಾಕಿ ಹಾರಿಸುತ್ತಿರುತ್ತಾರೆ. ಈ ಮೇಲಿನ ಘಟನೆ ಅದನ್ನು ಬಿಂಬಿಸುತ್ತದೆ. ಹಳ್ಳಿಯ ಶಾಲೆಗಳಲ್ಲಿ ಜೀವನದ ಪಾಠವಾದರೆ, ನಗರಗಳಲ್ಲಿ ದುಡಿಮೆಯ ಪಾಠ!. ಕಲಿಕೆ ಪರಸ್ಪರ ಸಾಮರಸ್ಯದಿಂದ ಕೂಡಿರಲಿ. ಜೀವನದ ಪಾಠದಲ್ಲಿ ದುಡಿಮೆಯೂ ಇರಲಿ, ಅಲ್ಲವೇ? ಏಕೆಂದರೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರು ಪಡೆಯುವ ಗುಣಮಟ್ಟದ ಮತ್ತು ಸಾಂಸ್ಕೃತಿಕ ಬೇರಿನ ಶಿಕ್ಷಣದ ಮೇಲೆ ದೇಶದ ಭವಿಷ್ಯ ಸಹ ನಿಂತಿದೆ.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net