ಅನುಮಾನದ ಕಾರ್ಮೋಡ ಸರಿದು ಜೀವನದ ಆಕಾಶ ಸ್ಪಷ್ಟಗೋಚರವಾಗುವುದು ಯಾವಾಗ ಅಂದರೆ..

Life
Published on
ಬೇಲೂರು ರಾಮಮೂರ್ತಿ

ಅಂದಿನ ಗುರುಕುಲದ ಪಾಠದಲ್ಲಿ ಗುರುಗಳು, ‘ನಾನು ಹತ್ತನೆಯವನು ಎಂಬುದು ನಿಮಗೇ ಗೊತ್ತಾಗಬೇಕೇ ಹೊರತು ಅದನ್ನು ಇನ್ನೊಬ್ಬರಿಂದ ತಿಳಿದುಕೊಳ್ಳುವಂತಿರಬಾರದು. ಅಷ್ಟು ಪರಿಪೂರ್ಣವಾಗಿರಬೇಕು ನಿಮ್ಮ ಅದ್ಯಯನ, ಜ್ಞಾನಾರ್ಜನೆ, ಮತ್ತು ಲೌಕಿಕ ಅರಿವು’ ಎಂದರು. ‘ಹತ್ತನೆಯವನು ಅಂದರೆ ಏನು?’ ಎಂದು ಶಿಷ್ಯರಿಗೆ ತಿಳಿಯಲಿಲ್ಲ. ಅವರು ಗುರುಗಳ ಕಡೆ ಪ್ರಶ್ನಾರ್ಥಕವಾಗಿ ನೋಡಿದರು.

ಸ್ವಲ್ಪ ಸಮಯ ತಡೆದು ಗುರುಗಳು ಹೇಳಿದರು: ‘‘ನಿಮಗೊಂದು ಕಥೆ ಹೇಳುತ್ತೇನೆ ಕೇಳಿ. ಒಮ್ಮೆ ಹತ್ತು ಜನರು ಒಟ್ಟಾಗಿ ಕಾಡಿನಲ್ಲಿ ಅಲೆಯುತ್ತಿದ್ದರು. ಕೆಲ ಸಮಯದ ಬಳಿಕ ಒಬ್ಬನಿಗೆ ಅನುಮಾನ ಬಂದು ಎಲ್ಲರನ್ನೂ ಎಣಿಸಿದ. ಒಂಬತ್ತೇ ಮಂದಿ. ಮತ್ತೆ ಎಣಿಸಿದ. ಒಂಬತ್ತೇ ಮಂದಿ. ಅರೇ, ಹತ್ತನೆಯವನು ಎಲ್ಲಿ ಹೋದ ಅಂತ ಚಿಂತೆಯಾಯಿತು. ‘ನಮ್ಮಲ್ಲೊಬ್ಬ ತಪ್ಪಿಸಿಕೊಂಡಿದ್ದಾನೆ. ನಾವು ಬಂದಿದ್ದು ಹತ್ತುಮಂದಿ. ಇರೋದು ಒಂಬತ್ತೇ ಮಂದಿ’ ಎಂದ. ಎಲ್ಲರೂ ಎಣಿಸಿದರು. ಅವರಿಗೆಲ್ಲ ಒಂಬತ್ತು ಮಂದಿಯೇ ಲೆಕ್ಕ ಸಿಕ್ಕಿದ್ದು. ಏಕೆಂದರೆ ಎಲ್ಲರೂ ತಮ್ಮನ್ನು ಬಿಟ್ಟು ಎಣಿಸಿದರು! ಅವರೆಲ್ಲರಿಗೂ ಏಕಕಾಲಕ್ಕೆ ಚಿಂತೆಯಾಯಿತು.

ದಾರಿಹೋಕನೊಬ್ಬ ಇವರ ಚಿಂತೆಯೇನು ಎಂದು ಕೇಳಿ ನಂತರ ‘ನನ್ನ ಎದುರಿಗೆ ಎಣಿಸಿ’ ಎಂದ. ಹಾಗೆ ಎಣಿಸಿದಾಗ ಒಂಬತ್ತೇ ಮಂದಿ ಎಣಿಕೆಗೆ ಸಿಕ್ಕಾಗ ಅವನು ‘ನೀನೇ ಅಲ್ಲವೇ ಹತ್ತನೆಯವನು’ ಎಂದಾಗ ಅವನಿಗೆ ಸಂತಸ. ಎಲ್ಲರೂ ಮತ್ತೊಮ್ಮೆ ಎಣಿಸಿ ಕಡೆಗೆ ತಮ್ಮನ್ನು ಎಣಿಸಿಕೊಂಡು ‘ಅರೇ, ಉಳಿದವರೆಲ್ಲ ಸೇರಿ ಒಂಬತ್ತು ಮಂದಿ. ನಾನೇ ಹತ್ತನೆಯವನು’ ಎಂದು ಸಂತಸಪಟ್ಟರು. ಇದರರ್ಥ ‘ಹತ್ತನೆಯವನು ನೀನೇ’ ಎಂದು ಇನ್ನೊಬ್ಬರು ಬಂದು ಹೇಳಬೇಕಾಯಿತು. ನೀವು ಏನು ಎನ್ನುವುದು ನಿಮಗೇ ಗೊತ್ತಿಲ್ಲ! ಅದು ಬೇರೆಯವರಿಂದ ನಿಮಗೆ ತಿಳಿಯುವಂತಾಯಿತು. ಇದು ತಪ್ಪು. ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿರುವ ಸಂಗತಿಗಳನ್ನೂ ನಮಗೆ ತಿಳಿಸಲು ಇನ್ನೊಬ್ಬರು ಬೇಕು ಎನ್ನುವುದು ನಿಜವಾದ ಜ್ಞಾನಿಯ ಲಕ್ಷಣ ಅಲ್ಲ. ಎಣಿಸಿದಾಗ ಒಂಬತ್ತು ಮಂದಿ ಲೆಕ್ಕ ಸಿಕ್ಕಿದರೆ ನನ್ನನ್ನೂ ಸೇರಿಸಿದರೆ ಹತ್ತು ಮಂದಿಯಾಗುತ್ತೇವೆ ಎನ್ನುವುದು ನಿಮ್ಮ ಅರಿವಿಗೆ ಬರಬೇಕು. ಹಾಗೆ ಎಣಿಸಿದರೆ ನಿಮ್ಮ ಎಣಿಕೆ ಪರಿಪೂರ್ಣವಾಗಿದೆ ಎಂದರ್ಥ. ಇಲ್ಲದಿದ್ದರೆ ನಿಮಗೆ ಲೆಕ್ಕ ಸರಿಯಾಗಿ ಬರೋದಿಲ್ಲ ಎನ್ನಬಹುದು. ಜೀವನದ ಲೆಕ್ಕಾಚಾರವೂ ಹಾಗೇ. ಎಣಿಕೆಯಲ್ಲಿ, ಕೂಡುವಿಕೆಯಲ್ಲಿ, ಕಳೆಯುವಿಕೆಯಲ್ಲಿ, ಗುಣಿಸುವಲ್ಲಿ, ಭಾಗಿಸುವಲ್ಲಿ ಎಲ್ಲದರಲ್ಲೂ ನೀವು ಪರಿಪೂರ್ಣತೆ ಗಳಿಸಿಕೊಳ್ಳಬೇಕು. ಆಗ ಇನ್ನೊಬ್ಬರಿಂದ ಹೇಳಿಸಿಕೊಳ್ಳುವ ಪ್ರಮೇಯ ಬರೋದಿಲ್ಲ’ ಎಂದರು ಗುರುಗಳು.

ನಿಜ ಅಲ್ಲವೇ? ಈ ಕಥೆ ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ನಮ್ಮನ್ನು ನಾವು ಅರಿತುಕೊಳ್ಳದೆ ಬೇರೆಯವರ ದೋಷಗಳನ್ನು ಎಣಿಸುತ್ತೇವೆ, ಬೇರೆಯವರ ಹಾಗೆ ನಾವಾಗಬೇಕು ಎಂದು ಅವರನ್ನು ಅನುಕರಿಸುತ್ತೇವೆ. ನಮ್ಮ ಶಕ್ತಿ, ಸಾಮರ್ಥ್ಯ, ದೌರ್ಬಲ್ಯಗಳ ಬಗ್ಗೆ ಅವಲೋಕನ ಮಾಡಿಕೊಳ್ಳುವುದೇ ಇಲ್ಲ. ಹಾಗಾಗಿ, ಮೊದಲು ನಮ್ಮನ್ನು ಅರಿಯುವ, ಆತ್ಮಾವಲೋಕನ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಬೇಕು. ಆಗ ಅನುಮಾನದ ಕಾರ್ಮೋಡ ಸರಿದು ಜೀವನದ ಆಕಾಶ ಸ್ಪಷ್ಟಗೋಚರವಾಗುತ್ತದೆ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net