ಮನೋಲ್ಲಾಸ| ಪ್ರಯತ್ನ ಮತ್ತು ಫಲ

Manollasa Image
Published on

ಬೇಲೂರು ರಾಮಮೂರ್ತಿ

ಹಳ್ಳಿಯ ಒಂದು ದಾರಿ. ಅಷ್ಟೇನೂ ಜನಸಂದಣಿಯಿಲ್ಲ. ನಡೆದುಕೊಂಡು ಹೋಗುತ್ತಿದ್ದ ಒಬ್ಬ ಗ್ರಾಮಸ್ಥನು ಮರದ ಕೆಳಗೆ ವಿಶ್ರಾಂತಿಗಾಗಿ ಮಲಗಿದ. ‘ಅಯ್ಯೋ ವಿಧಿಯೇ ನನ್ನನ್ನು ಯಾಕೆ ಹೀಗೆ ಮಾಡಿಬಿಟ್ಟೆ. ನೀನು ಏನೂ ಸಹಾಯ ಮಾಡುತ್ತಿಲ್ಲವಲ್ಲ...’ ಎಂದು ಕೊರಗುತ್ತ ಹಾಗೆ ಒರಗಿಕೊಂಡ. ತಲೆಎತ್ತಿ ನೋಡಿದರೆ ಮರದ ತುಂಬ ಹಣ್ಣು. ‘ಆಹಾ, ಈ ಮರದ ತುಂಬೆಲ್ಲ ಎಷ್ಟೊಂದು ಹಣ್ಣು ಬಿಟ್ಟಿದೆ. ಅದೃಷ್ಟವಿದ್ದರೆ ಬೇಕಾದಷ್ಟು ಹಣ್ಣು ಸಿಗುತ್ತದೆ. ತಿಂದು ಆರಾಮವಾಗಿ ಇರಬಹುದು’ ಅಂತ ಹಣ್ಣು ಕೆಳಗೆ ಬೀಳುವುದನ್ನೇ ಕಾಯುತ್ತ ಒರಗಿದ. ಹಾಗೆ ಒರಗಿದವನಿಗೆ ನಿದ್ದೆ ಯಾವಾಗ ಬಂತೋ ಗೊತ್ತಿಲ್ಲ. ಅವನಿಗೆ ಎಚ್ಚರವಾದಾಗ ದಾರಿಹೋಕರು ಮರಕ್ಕೆ ಕಲ್ಲುಗಳನ್ನು ಹೊಡೆದು ಹಣ್ಣುಗಳನ್ನು ಕೆಳಗೆ ಬೀಳಿಸಿ ತೆಗೆದುಕೊಳ್ಳುತ್ತಿದ್ದರು. ಒಂದಿಬ್ಬರು ಹುಡುಗರಂತೂ ಮರದ ಮೇಲೇ ಹತ್ತಿಬಿಟ್ಟಿದ್ದರು. ಈತ ಅದನ್ನು ನೋಡಿಯೂ, ‘ಅವರಿಗೆ ಎಷ್ಟು ಬೇಕೋ ಅವರು ತೆಗೆದುಕೊಳ್ಳಲಿ. ನನಗೆ ಸೇರಬೇಕಾದ್ದು ಸೇರುತ್ತದೆ’ ಅಂತ ಮರವನ್ನು ದಿಟ್ಟಿಸುತ್ತ ಕೂತ. ಹಣ್ಣು ಕೀಳುತ್ತಿದ್ದವರ ಪೈಕಿ ಕೆಲವರು, ‘ಬನ್ನಿ ಸ್ವಾಮಿ ನಿಮಗೆಷ್ಟು ಹಣ್ಣು ಬೇಕೋ ತಗೊಳಿ’ ಎಂದು ಕರೆದರು. ಆದರೂ ಇವನು ಮೇಲೇಳಲಿಲ್ಲ. ‘ತಿನ್ನುವ ಪ್ರತಿ ಅನ್ನದ ಕಾಳಿನ ಮೇಲೂ ದೇವರು ತಿನ್ನುವವನ ಹೆಸರು ಬರೆದಿರುತ್ತಾನಂತೆ ಅಂತ ಹೇಳ್ತಾರಲ್ಲ ಹಾಗೆ ಈ ಮರದ ಕೆಲವು ಹಣ್ಣುಗಳಲ್ಲಾದರೂ ನನ್ನ ಹೆಸರು ಬರೆದಿರಲೇಬೇಕು’ ಅಂದುಕೊಂಡು ಸುಮ್ಮನಾದ.

ಕೆಲವೇ ಹೊತ್ತಿನಲ್ಲಿ ಮರದ ಮೇಲೆ ಹತ್ತಿದ್ದ ಹುಡುಗರು ತಮಗೆಷ್ಟು ಬೇಕೋ ಅಷ್ಟು ಹಣ್ಣು ತಗೊಂಡು ಕೆಳಗಿಳಿದು ಹೋದರು. ಕಲ್ಲು ಹೊಡೆದು ಹಣ್ಣು ಉರುಳಿಸಿದ ಜನರೂ ಬ್ಯಾಗು ತುಂಬಿಕೊಂಡು ಹೋದರು. ಎಲ್ಲರೂ ಹೊರಟು ಹೋದ ಮೇಲೆ ಈ ವ್ಯಕ್ತಿ ತಲೆ ಎತ್ತಿ ನೋಡಿದರೆ ಮರ ಬರಿದಾಗಿದೆ. ಒಂದೂ ಹಣ್ಣಿಲ್ಲ!

‘ದೇವರೇ ಎಲ್ಲರಿಗಿಂತ ಮೊದಲು ಬಂದು ಇಲ್ಲಿ ಮಲಗಿದವನು ನಾನು. ಆಮೇಲೆ ಬಂದವರಿಗೆಲ್ಲ ಹಣ್ಣು ಕೊಟ್ಟೆ. ನನಗೆ ಮಾತ್ರ ಲೊಟ್ಟೆ ಕೊಟ್ಟೆ’ ಎಂದು ಬೈಯ್ದುಕೊಂಡ ಗ್ರಾಮಸ್ಥ. ಅನೇಕರ ಜೀವನಕಥೆಯೂ ಇವನಂತೆಯೇ. ಅದೃಷ್ಟ ಕಣ್ಣಿಗೆ ಕಾಣುತ್ತಿದ್ದರೂ, ಕೈಗೆಟುಕುವಷ್ಟು ಹತ್ತಿರದಲ್ಲಿ ಇದ್ದರೂ ಅದನ್ನು ತಮ್ಮ ಪ್ರಯತ್ನದಿಂದ ಪಡೆದುಕೊಳ್ಳುವ ಛಾತಿ ತೋರುವುದೇ ಇಲ್ಲ. ಜೀವನದಲ್ಲಿ ಯಾವುದೂ ಪ್ರಯತ್ನವಿಲ್ಲದೇ ದೊರೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವಕಾಶ ಸಿಕ್ಕರೂ ಕಣ್ಣುಮುಚ್ಚಿ ಕುಳಿತರೆ ಅದಕ್ಕೆ ಯಾರು ಹೊಣೆ? ಪ್ರಯತ್ನ ಪಟ್ಟರೂ ದೊರೆಯದಿದ್ದರೆ ಅದನ್ನು ವಿಧಿಲಿಖಿತ, ಹಣೆಬರಹ ಅಂತೆಲ್ಲ ಹೇಳಬಹುದೇನೋ. ಅದಕ್ಕೆಂದೆ, ‘ಪ್ರಯತ್ನ ನಮ್ಮದು ಫಲಾಪಲಗಳು ದೈವೇಚ್ಛೆ’ ಎಂದು ಹಿರಿಯರು ಹೇಳುವುದು. ಆದ್ದರಿಂದ ಜೀವನದಲ್ಲಿ ಒಳ್ಳೊಳ್ಳೆ ಕೆಲಸಗಳನ್ನು ಮಾಡುವ ಪ್ರಯತ್ನ ನಿರಂತರವಾಗಿರಲಿ. ಅದರಿಂದ ನಮಗೂ, ಸಮಾಜಕ್ಕೂ ನೆಮ್ಮದಿ, ಸಂತಸ, ಸುಖ ದೊರೆಯುವಂತಿರಬೇಕು. ಇದಕ್ಕೆ ಹಣ್ಣು ಬಿಟ್ಟ ಮರವೇ ಒಂದು ಸಶಕ್ತ ನಿದರ್ಶನವಾಗಿ ಕಾಣುತ್ತದೆ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net